ದಾವಣಗೆರೆ
2019 ನೇ ಸಾಲಿನ ಮೊದಲನೇ ಸುತ್ತಿನ ಪಲ್ಸ್ ಪೊಲೀಯೋ ಕಾರ್ಯಕ್ರಮದಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಶೇ. 100 ಗುರಿ ಸಾಧಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 2019ನೇ ಸಾಲಿನ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೊದಲನೇ ಸುತ್ತಿನ ಜಿಲ್ಲಾ ಲಸಿಕಾ ಕಾರ್ಯಪಡೆ ಪೂರ್ವಭಾವಿ ಸಿದ್ಧತಾ ಸಭೆ, ಎನ್‍ಡಿಡಿ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆ ಹಾಗೂ ಜಿಲ್ಲಾ ಆರೋಗ್ಯ ಅಭಿಯಾನದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆ.8 ರಂದು ನಡೆಯಲಿರುವ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು 1 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ಆಲ್ಬೆಂಡಜಾಲ್‍ನ್ನು ನೀಡಲು ಕ್ರಮ ಸೂಕ್ತ ತಯಾರಿ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಮಾನ್ಯವಾಗಿ ಪಲ್ಸ್ ಪೊಲೀಯೋ ಕಾರ್ಯಕ್ರಮ ರಜಾ ದಿನದಂದು ಜರುಗಲಿದ್ದು, ಖಾಸಗಿ ನರ್ಸರಿ ಮತ್ತು ಪ್ರಿ ನರ್ಸರಿ ಮಕ್ಕಳಿಗೂ ಪಲ್ಸ್ ಪೊಲೀಯೋ ಲಸಿಕೆ ಹಾಕುವಂತೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಮಕ್ಕಳ ಮೂಲಕ ಜಾಗೃತಿ ಮೂಡಿಸಬೇಕು. ವ್ಯಾಪಕ ಪ್ರಚಾರ ಮತ್ತು ಶೇ.100 ಗುರಿ ಸಾಧನೆಗೆ ಬೇಕಾದ ಎಲ್ಲ ತಯಾರಿಯನ್ನು ಸುಸೂತ್ರವಾಗಿ ನಡೆಸಬೇಕೆಂದರು.
ಡಬ್ಲ್ಯುಹೆಚ್‍ಓ ನ ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ. ಶ್ರೀಧರ್ ಮಾತನಾಡಿ, 2019 ನೇ ಸಾಲಿನ ಮೊದಲನೇ ಸುತ್ತಿನ ಪಲ್ಸ್ ಪೊಲೀಯೋ ಕಾರ್ಯಕ್ರಮವನ್ನು ಫೆ.3 ರಿಂದ 6 ನೇ ತಾರೀಕಿನವರೆಗೆ ಹಮ್ಮಿಕೊಳ್ಳಲಾಗಿದೆ. ಪೋಲಿಯೋ ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯತೆ ಉಂಟುಮಾಡಿ ದೀರ್ಘ ಕಾಲ ಭೀಕರ ಪರಿಣಾಮ ಬೀರುವ ಒಂದು ಮಾರಕ ರೋಗ. ರಾಷ್ಟ್ರವನ್ನು ಪೊಲೀಯೋ ಮುಕ್ತಗೊಳಿಸಲು ಕೇಂದ್ರ ಸರ್ಕಾರ ವಿವಿಧ ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ 1995 ರಿಮದ ರಾಷ್ಟ್ರೀಯ ಪೊಲೀಯೋ ಲಸಿಕಾ ಕಾರ್ಯಕ್ರಮವನ್ನು ಎಲ್ಲಾ ರಾಜ್ಯಗಳಲ್ಲಿ ಅನುಷ್ಟಾನಗೊಳಿಸುತ್ತಿದೆ. ಕರ್ನಾಟಕದಲ್ಲಿ 2007 ರಿಂದ ಯಾವುದೇ ಪೊಲೀಯೋ ಪ್ರಕರಣ ವರದಿಯಾಗಿಲ್ಲ. ರಾಷ್ಟ್ರದಲ್ಲಿ 2012 ರಿಂದ 2018 ರವರೆಗೆ ಯಾವುದೇ ಪೊಲೀಯೋ ಪ್ರಕರಣ ವರದಿಯಾಗಿಲ್ಲ ಎಂದರು.
ಆರ್‍ಸಿಹೆಚ್‍ಓ ಡಾ.ಶಿವಕುಮಾರ್ ಮಾತನಾಡಿ, ಮೊದಲನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಮತ್ತು ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಉಪಕೇಂದ್ರ, ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜುಗಳಲ್ಲಿ ಕೇಂದ್ರ ತೆರೆಯಲಾಗುವುದು. 0-5 ವರ್ಷದ ಎಲ್ಲಾ ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ ಅರ್ಹ ಮಕ್ಕಳ ಸಂಖ್ಯೆ 192964 ಇದ್ದು ಒಟ್ಟು 1146 ಲಸಿಕಾ ಕೇಂದ್ರ, 2486 ಲಸಿಕಾ ಕಾರ್ಯಕರ್ತರು, 244 ಮೇಲ್ವಿಚಾರಕರನ್ನು ನೇಮಿಸಲಾಗಿದೆ.
ಮೊದಲನೇ ಸುತ್ತಿನಲ್ಲಿ ನಡೆಯುವ ಬೂತ್ ಮಟ್ಟದ ಪಲ್ಸ್ ಪೊಲೀಯೋ ಲಸಿಕೆ ಕಾರ್ಯಕ್ರಮ ಶೇ. 95 ಗುರಿ ಸಾಧಿಸುವೆಡೆ ಹೆಚ್ಚಿನ ಗಮನ ಮತ್ತು ಶ್ರಮವಹಿಸಬೇಕು. ಶೇ. 5 ನ್ನು ಮನೆ ಮನೆ ಭೇಟಿಯಿಂದ ಪೂರ್ಣಗೊಳಿಸಬೇಕು. ಜಾಗತಿಕ ಮಟ್ಟದಲ್ಲಿ ಇನ್ನು ಮೂರು ರಾಷ್ಟ್ರಗಳಲ್ಲಿ ಪೊಲೀಯೋ ನಿರ್ಮೂಲನೆ ಆಗುವುದು ಬಾಕಿ ಇದ್ದು, ಇಲ್ಲಿ ನಿರ್ಮೂಲನೆ ಆಗುವವರೆಗೆ ನಮ್ಮ ದೇಶದಲ್ಲಿ ಪೊಲೀಯೋ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ಸಾಗಬೇಕು ಎಂದರು.
ಜಂತುಹುಳು ನಿವಾರಣಾ ಕಾರ್ಯಕ್ರಮ : ಆರ್‍ಸಿಹೆಚ್‍ಓ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೇಶದಲ್ಲಿ 1ನೇ ವಯಸ್ಸಿನಿಂದ 16ನೇ ವಯಸ್ಸಿನ ಮಕ್ಕಳಲ್ಲಿ 21.01 ಕೋಟಿ ಮಕ್ಕಳ ಕರುಳಿನಲ್ಲಿ ಜಂತುಹುಳುಗಳಿರುವ ಶೇ.68 ರಷ್ಟು ಮಕ್ಕಳು ಅಪಾಯದಲ್ಲಿದ್ದಾರೆ. ಈ ಪರಾವಂಬಿ ಹುಳುಗಳು ಅಶುಚಿತ್ವ, ಆರೋಗ್ಯಕರವಲ್ಲದ ವಾತಾವರಣಗಳಿಂದ ಬರುತ್ತದೆ. ಜಂತು ಹುಳುಗಳು ಮಕ್ಕಳ ಆರೋಗ್ಯವನ್ನು ಹಾಳು ಮಾಡಿ, ಮಕ್ಕಳ ಓದಿನಲ್ಲಿ ಏಕಾಗ್ರತೆ, ರಕ್ತಹೀನತೆ, ನೆನಪಿನ ಶಕ್ತಿ, ಕಲಿಕಾ ಸಾಮಾಥ್ರ್ಯವನ್ನು ಕುಂಠಿಸುತ್ತವೆ. ಅಲ್ಲದೇ ಶಾಲಾ ಹಾಜರಾತಿ ಕುಸಿಯುತ್ತದೆ ಮತ್ತು ಮಕ್ಕಳ ಮುಂದಿನ ಜೀವಮಾನದ ಗುಣಮಟ್ಟ ತಂಬಾ ಇಳಿಯುತ್ತದೆ ಎಂದರು.
2019 ರಿಂದ ಭಾರತ ಸಕಾರವು ಎಲ್ಲಾ ರಾಜ್ಯಗಳಿಗೆ ಸಾಮೂಹಿಕ ಜಂತುಹುಳು ನಿವಾರಣಾ ಕಾರ್ಯಕ್ರಮ ಹಮ್ಮಿಕೊಂಡು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ವರ್ಷದಲ್ಲಿ ಎರಡು ಬಾರಿ ಮಾತ್ರೆ ನೀಡಲಾಗುತ್ತಿದೆ. ಫೆ.8 ರಂದು ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಶಾಶ್ವತ ಅನುದಾನ ರಹಿತ ಶಾಲೆಯ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ಒಂದನೇ ವಯಸ್ಸಿನಿಂದ ಎಲ್ಲಾ ಮಕ್ಕಳಿಗೆ ಸಾಮೂಹಿಕವಾಗಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ವೇಳೆ ಫೆ.8 ರಂದು ಮಾತ್ರೆ ಸೇವಿಸಲು ಮಗುವಿಗೆ ಸಾಧ್ಯವಾಗದಿದ್ದಲ್ಲಿ ಫೆ.14 ರಂದು ಮತ್ತೆ ಮಾತ್ರೆ ನೀಡಲಾಗುವುದು.
ಜಿಲ್ಲೆಯ 1547 ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳು, 1015 ಅನುದಾನ ರಹಿತ ಶಾಲೆಗಳು, 36 ವಸತಿ ಶಾಲೆ, 2112 ಅಂಗನಾಡಿಗಳು ಮತ್ತು ಪಿ.ಯು ಕಾಲೇಜಿನಲ್ಲಿ ಫೆ.8 ರಂದು 1 ರಿಂದ 19ನೇ ವಯಸ್ಸಿನ ಎಲ್ಲಾ ಮಕ್ಕಳಿಗೆ ಸಾಮೂಹಿಕ ಜಂತುಹುಳು ಮಾತ್ರೆ ಸೇವಿಸಲು ಕ್ರಮ ಕೈಗೊಳ್ಳಬೇಕು. ಹಾಗು ಈ ದಿನದಂದು 6,42,152 ವಿದ್ಯಾರ್ಥಿಗಳಿಗೆ ಮಾತ್ರೆ ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ. ರಾಘವನ್ ಮಾತನಾಡಿ, 2017 ರಲ್ಲಿ 1994 ಕ್ಷಯ ಪ್ರಕರಣಗಳನ್ನು ಕಂಡು ಹಿಡಿದು, 1616 ಗುಣಪಡಿಸಲಾಗಿದ್ದು, 152 ಮರಣ ಹೊಂದಿರುತ್ತಾರೆ. 2018 ನೇ ಸಾಲಿನಲ್ಲಿ 1846 ಪ್ರಕರಣ ಕಂಡು ಹಿಡಿದಿದ್ದು, 1763 ಗುಣಪಡಿಸಲಾಗಿದ್ದು 83 ಮರಣ ಹೊಂದಿರುತ್ತಾರೆ.
2018 ನೇ ಸಾಲಿನ ಅಕ್ಟೋಬರ್ ನಿಂದ ಡಿಸೆಂಬರ್‍ವರೆಗೆ 562 ಪ್ರಕರಣ ಪತ್ತೆಹಚ್ಚಿದ್ದು ಇಷ್ಟೂ ಪ್ರಕರಣಗಳನ್ನು ನಿಕ್ಷಯ್ ಯೋಜನೆಯಡಿ ಸೇರ್ಪಡೆಗೊಳಿಸಲಾಗಿದೆ. 43 ಮರಣ ಹೊಂದಿರುತ್ತಾರೆ. ಕ್ಷಯ ರೋಗಕ್ಕೆ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ ಹಾಗೂ ನಿಕ್ಷಿತ್ ಯೋಜನೆಯಡಿ ರೋಗಿಗೆ 6 ತಿಂಗಳವರೆಗೆ ಮಾಹೆಯಾನ ರೂ.500 ಉಳಿತಾಯ ಖಾತೆ ಮೂಲಕ ಸಂದಾಯ ಮಾಡಲಾಗುವುದು. ಇದುವರೆಗೆ 1704 ರೋಗಿಗಳಿಗೆ ರೂ. 259500 ಸಂದಾಯ ಮಾಡಲಾಗಿದೆ.
ಹೆಚ್‍ಐವಿ ಪ್ರಕರಣಗಳಲ್ಲಿ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ 3 ನೇ ಸ್ಥಾನವಿದ್ದು, ಕರ್ನಾಟಕ ರಾಜ್ಯ 8ನೇ ಸ್ಥಾನದಲ್ಲಿದೆ. ದಾವಣಗೆರೆ ಜಿಲ್ಲೆ 7 ನೇ ಸ್ಥಾನದಲ್ಲಿದೆ. 2018 ರ ಏಪ್ರಿಲ್ ನಿಂದ ಡಿಸೆಂಬರ್‍ವರೆಗೆ 10579 ಪ್ರಕರಣಗಳು ಪ್ರಿ-ಎಆರ್‍ಟಿ ಚಿಕಿತ್ಸೆ ನೋಂದಣಿಯಾಗಿದ್ದರೆ 7599 ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ 391 ಹೆಚ್‍ಐವಿ ಪೀಡಿತ ಮಕ್ಕಳು ಜಿಲ್ಲೆಯಲ್ಲಿ ಎಆರ್‍ಟಿ ಚಿಕಿತ್ಸೆಗೆ ನೊಂದಾಯಿಸಿಕೊಂಡಿದ್ದಾರೆ. 226 ಹೆಚ್‍ಐವಿ ಪೀಡಿತರು ಮರಣ ಹೊಂದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಹೆಚ್‍ಐವಿ ಪೀಡಿತ ಮಕ್ಕಳಿಗೆ ರೂ.750 ಮಾಹೆಯಾನ ಸಹಾಯಧನ ನೀಡಲಾಗುತ್ತಿದೆ. ಹೆಚ್‍ಐವಿ ಪೀಡಿತರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಧನಶ್ರೀ ಮತ್ತು ಚೇತನ ಯೋಜನೆಯಡಿ ಆಯ್ದ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತಿದೆ. ಇವರಿಗೆ ಆಧಾರ್ ಕಾರ್ಡ್, ಅಂತ್ಯೋದಯ ಕಾರ್ಡ್‍ಗಳ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದರು.
ಅಭಯಸ್ಪಂದನ ಸಂಸ್ಥೆಗೆ ನೋಂದಾಯಿಸಿಕೊಂಡಿರುವ ಲೈಂಗಿಕ ಅಲ್ಪಸಂಖ್ಯಾತರೋರ್ವರು ಮಾತನಾಡಿ, ಅನಿವಾರ್ಯವಾಗಿ ತಾವು ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯಲ್ಲಿ ತೊಡಗಿದ್ದು, ಉದ್ಯೋಗಾವಕಾಶ ದೊರೆತಲ್ಲಿ ತಾವು ಇವುಗಳನ್ನು ತೊರೆದು ಕೆಲಸ ಮಾಡುತ್ತೇವೆ. ಹೊರ ಗುತ್ತಿಗೆ ಆಧಾರದಲ್ಲಿ ಕಚೇರಿಗಳಲ್ಲಿ ಕೆಲಸ ನೀಡಲು ಹಾಗೂ ಆಶ್ರಯ ಮನೆ ಒದಗಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಡಿಹೆಚ್‍ಓ ಡಾ.ತ್ರಿಪುಲಾಂಬ, ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ, ಡಿಎಲ್‍ಓ ಡಾ.ಸರೋಜಾಬಾಯಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಮೀನಾಕ್ಷಿ, ಡಾ.ಗಂಗಾಧರ್, ಡಾ.ರೇಣುಕಾರಾಧ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್.ವಿಜಯಕುಮಾರ್, ತಾಲ್ಲೂಕು ವೈದ್ಯಾಧಿಕಾರಿಗಳು, ಇತರೆ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
