ಪ್ರಚಾರ ಸಾಮಗ್ರಿ ಮುದ್ರಣಕ್ಕೂ ಮುನ್ನ ಅನುಮತಿ ಕಡ್ಡಾಯ

ದಾವಣಗೆರೆ:

       ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುದ್ರಣ ಮಾಡಲು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಪಾಲಿಕೆ ಆಯುಕ್ತ ವೀರೇಂದ್ರ ಕುಂದಗೋಳ ತಿಳಿಸಿದರು.

        ನಗರದ ಪಾಲಿಕೆ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರೆಯಲಾಗಿದ ಮುದ್ರಣಾಲಯದ ಮುಖ್ಯಸರು ಹಾಗೂ ಸಿಟಿ ಕೇಬಲ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಸಾಮಗ್ರಿಗಳಾದ ಕರಪತ್ರ, ಬ್ರೋಚರ್ಸ್, ಬ್ಯಾನರ್, ಫ್ಲೆಕ್ಸ್‍ಗಳನ್ನು ಮುದ್ರಿಸುವಾಗ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ ಚುನಾವಣಾ ಸಾಮಗ್ರಿ ಮುದ್ರಿಸುವ ಮುನ್ನ ಅವುಗಳ ಸಂಖ್ಯೆ ಹಾಗೂ ಸಾಮಗ್ರಿಯ ಮಾದರಿ ನೀಡಿ, ಅನುಮತಿ ಪಡೆಯಬೇಕೆಂದು ಸಲಹೆ ನೀಡಿದರು.

       ಚುನಾವಣಾ ಪ್ರಚಾರ ಸಾಮಗ್ರಿಗೆ ಸಂಬಂಧಿಸಿದಂತೆ, ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಬೇಜವಾಬ್ದಾರಿತನಕ್ಕೆ ಯಾವುದೇ ಕಾರಣಕ್ಕೂ ನೀವು ಹೊಣೆಗಾರರಾಗಿ ತಪ್ಪಿಗೆ ಸಿಲುಕಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ ಅವರು, ಯಾವುದೇ ಕಾರಣಕ್ಕೂ ಚುನಾವಣಾ ಸಾಮಗ್ರಿಗಳು ವೈಯಕ್ತಿಕ ಟೀಕೆ, ಧಾರ್ಮಿಕ-ಜಾತಿ ಪ್ರಚೋದನೆ, ಹಿಂಸೆಗೆ ಕಾರಣವಾಗುವ ರೀತಿಯಲ್ಲಿರಬಾರದು. ಇವೆಲ್ಲವನ್ನೂ ನೀವು ಗಮನಿಸಬೇಕೆಂದು ಹೇಳಿದರು.

       ಕರಪತ್ರಗಳಲ್ಲಿ ಮುದ್ರಕರ ಹೆಸರು, ಮುದ್ರಿಸಿದ ಪ್ರತಿಗಳ ವಿವರ ಹಾಗೂ ಇದರ ಮಾದರಿಗಳನ್ನು ಸಂಬಂಧಿಸಿದವರ ಗಮನಕ್ಕೆ ತಂದು ಅನುಮತಿಪಡೆಯುವುದು ಕಡ್ಡಾಯವಾಗಿದೆ. ಮುದ್ರಣದ ದರ ಸರ್ಕಾರ ನಿಗದಿಪಡಿಸಿದ ಪ್ರಮಾಣದಲ್ಲೇ ಇರಬೇಕು ಎಂದರು.
ಪ್ರಚಾರ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಷ್ಟೇ ಜವಾಬ್ದಾರಿಯು ಮುದ್ರಕರು ಹಾಗೂ ಟಿವಿ ಕೇಬಲ್ ಮಾಲೀಕರದ್ದೂ ಆಗಿದೆ. ಹೀಗಾಗಿ ಯಾರೇ ತಪ್ಪು ಮಾಡಿದರೂ ಸಹ ಅದರ ಹೊಣೆಯಿಂದ ಮುದ್ರಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಬೇರೆಯವರ ಬೇಜವಾಬ್ದಾರಿತನದ ಹೊಣೆ ನೀವು ಹೊತ್ತುಕೊಳ್ಳದಿರುವುದೇ ಸೂಕ್ತ ಎಂದರು.

         ನಗರ ಪಾಲಿಕೆಯಲ್ಲಿ ಮುದ್ರಣ ಸಾಮಗ್ರಿಗಳ ಕುರಿತು ಅನುಮತಿ ಪಡೆಯಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಜನರೇ ಮಾಹಿತಿ ನೀಡುವಂತೆ ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಸಿ-ವಿಜಲ್ ಆಪ್ ಮೂಲಕ ಜನರು ನೇರವಾಗಿ ದೂರು ಸಲ್ಲಿಸಬಹುದು. ಈ ದೂರು ವ್ಯವಸ್ಥೆ ಡಿಜಿಟಲೀಕರಣವಾಗಿರುವ ಕಾರಣ ಅಧಿಕಾರಿಗಳ ವಿವೇಚನಾ ಕ್ರಮಕ್ಕೆ ಅವಕಾಶ ಇಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದರು.

       ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಹೆಸರುಗಳನ್ನು ಹೊಂದಿರುವ ಶಾಲೆಗಳ ಬಗ್ಗೆ ಜಾಹೀರಾತು ಕೊಡುವುದು ನಿಯಮಕ್ಕೆ ವಿರುದ್ಧವಾಗುತ್ತದೆ. ನಿಯಮಗಳ ಪ್ರಕಾರ ಜಾಹೀರಾತು ಕೊಡಲು ಬರುವುದಿಲ್ಲ. ಬೇಕಾದರೆ ಬಾಯಿ ಮಾತಿನಿಂದ ಪ್ರಚಾರ ಮಾಡಿಕೊಳ್ಳಿ ಎಂದರು.ಸಭೆಯಲ್ಲಿ ಮಾತನಾಡಿದ ಉಪ ಆಯುಕ ಇ.ಬಾಲಕೃಷ, ಮುದ್ರಣ ಸಾಮಗ್ರಿಯ ವೆಚ್ಚವನ್ನು ವೆಚ್ಚ ವೀಕ್ಷಕರು ಪರಿಶೀಲಿಸುತ್ತಾರೆ ಎಂದು ಹೇಳಿದರು.

        ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವೀರಪ್ಪ ಎಂ.ಬಾವಿ, ಮುದ್ರಕರಾದ ಸುಪ್ರೀತ್, ರುದ್ರೇಶ್, ಇಂದೂಧರ ನಿಶಾನಿಮಠ, ನಿರಂಜನ್, ರುದ್ರೇಶ್, ಶೇಷಾಚಲ, ಮಾಗನೂರು ಮಂಜಪ್ಪ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap