ಸಿಇಟಿ ಮಾಹಿತಿ ಕೇಂದ್ರ ತೆರೆಯಲು ಚಿಂತನೆ

ಚಿತ್ರದುರ್ಗ

      ನಗರದಲ್ಲಿ ಸಿಇಟಿ ಮಾಹಿತಿ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದ್ದು ಶೀಘ್ರದಲ್ಲಿ ಕಾರ್ಯಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.

      ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಸಮಾಜಕಲ್ಯಾಣ ಇಲಾಖೆ, ಪದವಿರ್ಪೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ, ಎನ್‍ಇಇಟಿ, ಜೆಇಇ ಉಚಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ದಾವಣಗೆರೆಯಲ್ಲಿ ಸಿಇಟಿ ಮಾಹಿತಿ ಕೇಂದ್ರ ಇದೆ. ಇದೇ ಮಾದರಿಯಲ್ಲಿ ಚಿತ್ರದುರ್ಗ ನಗರದಲ್ಲಿ ತೆರೆಯಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಮಾಹಿತಿ ಕೇಂದ್ರ ಆರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಸ್ಥಿತಿವಂತರು ಹಾಗೂ ಆರ್ಥಿಕ ಬಲಿಷ್ಟರು ಹೊರ ಜಿಲ್ಲೆಗಳಲ್ಲಿ ಸಿಇಟಿ ತರಬೇತಿ ಪಡೆಯುತ್ತಾರೆ. ಆದರೆ ಹಿಂದುಳಿದ ಜಿಲ್ಲೆಯಲ್ಲಿ ಆರ್ಥಿಕ ದುರ್ಬಲರ ಮಕ್ಕಳು ಈ ತರಬೇತಿ ಗಗನಕುಸುಮವಾಗಿದೆ. ಈ ಮಕ್ಕಳಿಗೆ ತರಬೇತಿ ಸಿಗುವ ಸಲುವಾಗಿ ಆರು ತಾಲ್ಲೂಕಿನಲ್ಲಿ ಒಂದೊಂದು ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ. ಸಿಇಟಿ ಅರ್ಜಿ ಸಲ್ಲಿಸಲು ಫೆಬ್ರವರಿ 28 ಅಂತಿಮ. ನಂತರ ಮಾರ್ಚ್ 1ರಿಂದ 18 ರವರೆಗೆ ಪಿಯುಸಿ ಪರೀಕ್ಷೆ ನಡೆಯಲಿದ್ದು ಏಪ್ರಿಲ್ 5 ರಿಂದ 22 ರವರೆಗೆ ತರಬೇತಿ ನೀಡಲಾಗುವುದು. ಎಲ್ಲಾ ವಿಷಯಗಳನ್ನು ಹೇಳಿಕೊಡಲು ಆಗುವುದಿಲ್ಲ. ಕಡಿಮೆ ಸಮಯ ಇರುವುದರಿಂದ ವಿದ್ಯಾರ್ಥಿಗಳು ಪರಿಶ್ರಮದಿಂದ ಅಧ್ಯಯನ ಮಾಡುವಂತೆ ಸಲಹೆ ನೀಡಿದರು.

       ತರಬೇತಿ ಅವಧಿಯಲ್ಲಿ ಸಿಇಟಿ ನುರಿತ ತಜ್ಞರಿಂದ ತರಬೇತಿ ಕೊಡಿಸಲಾಗುವುದು. 48 ಉಪನ್ಯಾಸಕರನ್ನು ನಿಯೋಜಿಸಲಾಗಿದೆ. ಒಂದು ವಿಷಯದಲ್ಲಿ 12 ಉಪನ್ಯಾಸಕರನ್ನು ನಿಯೋಜಿಸಲಾಗುವುದು. ವಿದ್ಯಾರ್ಥಿಗಳು ಸಿಇಟಿ ಅರ್ಜಿ ಭರ್ತಿ ಮಾಡುವಾಗ ಕಾಲೇಜುಗಳ ಆಯ್ಕೆ ಸರಿಯಾಗಿ ಮಾಡಬೇಕು. ಉತ್ತಮ ಅಂಕಗಳಿಸಿದರೂ ಕಾಲೇಜು ಆಯ್ಕೆ ವಿಧಾನದಲ್ಲಿ ತಪ್ಪಾದರೆ ಕೈ ತಪ್ಪುವ ಸಾಧ್ಯತೆಗಳಿರುತ್ತವೆ. ಇವುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಭರ್ತಿ ಮಾಡಿ ಎಂದು ಕಿವಿಮಾತು ಹೇಳಿದರು.

       ಯಾವುದೋ ಒಂದು ಕೋರ್ಸ್ ಸಿಗಲಿಲ್ಲ ಎಂದು ಅನೇಕ ವಿದ್ಯಾರ್ಥಿಗಳು ಒಂದು ವರ್ಷ ವ್ಯರ್ಥವಾಗಿ ಕಳೆಯುತ್ತಾರೆ. ನಂತರವೂ ಆ ಕೋರ್ಸ್ ಸಿಗದಿದ್ದರೆ ಏನು ಮಾಡುತ್ತಿರಿ. ಆದ್ದರಿಂದ ಆಯ್ಕೆ ವಿಚಾರದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಸಮಯ ವ್ಯರ್ಥವಾಗಲಿದೆ ಎಂದರು.

       ಉಪವಿಭಾಗಾಧಿಕಾರಿ ವಿಜಯಕುಮಾರ್ ಮಾತನಾಡಿ, ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳಲ್ಲಿ ಯಾವುದೇ ಜಿಲ್ಲೆಯಲ್ಲಿ ಸರ್ಕಾರಿ ಕಾಲೇಜಿನ ಮಕ್ಕಳಿಗೆ ಉಚಿತ ಸಿಇಟಿ ತರಬೇತಿ ನೀಡುತ್ತಿಲ್ಲ. ಚುನಾವಣೆ ಕೆಲಸದ ನಡುವೆಯೂ ಜಿಲ್ಲಾಧಿಕಾರಿ ಕಾಳಜಿ ವಹಿಸಿ ತರಬೇತಿ ನೀಡುತ್ತಿದ್ದು ಮಕ್ಕಳು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

      ವಿದ್ಯಾರ್ಥಿಗಳಾದ ಚಂದನ ಮತ್ತು ಶೋಭಾ ಮಾತನಾಡಿ, ಪ್ರಥಮ ಪಿಯುಸಿ ತೇರ್ಗಡೆಯಾದ ಮೇಲೆ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಲಿದೆ. ಆದರೆ ವಿದ್ಯಾರ್ಥಿನಿಲಯಕ್ಕೆ ರಜೆ ಇರುವುದರಿಂದ ಈ ಅವಧಿಯಲ್ಲಿ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯ ವ್ಯವಸ್ಥೆ ಮಾಡಿಕೊಡಬೇಕು. ಸಿಇಟಿ ತರಬೇತಿಯನ್ನು ವಿದ್ಯಾರ್ಥಿನಿಲಯಲಗಳಲ್ಲಿ ಹಾಗೂ ಪ್ರಥಮ ಪಿಯುಸಿಯಿಂದಲೇ ನೀಡುವಂತೆ ಮನವಿ ಮಾಡಿದರು.

       ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶೋಭಾ ಮಾತನಾಡಿ, ಏಪ್ರಿಲ್ 5ರಿಂದ ನಿತ್ಯ ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆವರೆಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು. ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ಪ್ರಾಚಾರ್ಯ ಗಣೇಶ್, ಉಪನ್ಯಾಸಕರಾದ ಶಿವಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap