ಹೊನ್ನಾಳಿ:
ನನ್ನನ್ನು ಸೇರಿಕೊಂಡು ರಾಜಕೀಯ ವ್ಯಕ್ತಿಗಳಿಗೆ ಧಾರ್ಮಿಕ ಸಭೆ-ಸಮಾರಂಭಗಳಲ್ಲಿ ಮಾತನಾಡುವ ನೈತಿಕತೆ ಪ್ರಸ್ತುತ ದಿನಗಳಲ್ಲಿ ಇಲ್ಲ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಇಲ್ಲಿನ ಹಿರೇಕಲ್ಮಠದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜಕೀಯ ಧುರೀಣರು ಹೇಳುವುದೊಂದು ಮಾಡುವುದೊಂದು. ಹಾಗಾಗಿ, ಭಾಷಣ ಮಾಡುತ್ತ ಕೇವಲ ಭರವಸೆ ನೀಡುವ ರಾಜಕೀಯ ವ್ಯಕ್ತಿಗಳಿಗೆ ಜನರು ಸಕಾಲದಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂಬುದು ನನ್ನ ಅನಿಸಿಕೆಯಾಗಿದೆ ಎಂದು ತಿಳಿಸಿದರು.
ಮಾನವ ಸಂಬಂಧಗಳು ತುಂಬಾ ಹದಗೆಡುತ್ತಿವೆ. ಗಂಡ ಹೆಂಡತಿ ಮಾತು ನಂಬುವುದಿಲ್ಲ, ಹೆಂಡತಿ ಗಂಡನ ಮಾತುಗಳನ್ನು ನಂಬದ ಸ್ಥಿತಿ ಇಂದು ಇದೆ. ಇದಕ್ಕೆ ಸೂಕ್ತ ಕ್ರಮದ ಅವಶ್ಯಕತೆ ಇದೆ ಎಂದು ಹೇಳಿದರು.
ಆಹಾರದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುವ ಇತ್ತೀಚಿನ ದಿನಗಳಲ್ಲಿ ಸಭೆ-ಸಮಾರಂಭಗಳು ಹಾಗೂ ಮದುವೆಗಳಲ್ಲಿ ಅನೇಕರು ಆಹಾರ ಪದಾರ್ಥಗಳನ್ನು ಅರೆ ಬರೆ ಉಂಡು ಉಳಿದ ಆಹಾರವನ್ನು ಎಲೆಗಳಲ್ಲಿ ಬಿಟ್ಟು ತೆರಳುವುದೇ ಫ್ಯಾಷನ್ ಮಾಡಿಕೊಂಡುಬಿಟ್ಟಿದ್ದಾರೆ, ಅನ್ನವನ್ನು ತುಳಿದುಕೊಂಡು ನಡೆದಾಡುತ್ತಾರೆ ಇದಕ್ಕೆ ಕೊನೆ ಹಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸ್ಥಳೀಯ ವೈದ್ಯ ಡಾ.ಎಚ್.ಪಿ. ರಾಜ್‍ಕುಮಾರ್ ಮಾತನಾಡಿ, ತತ್ವ ಸಿದ್ಧಾಂತಗಳಿಗೆ ಇಂದು ಬೆಲೆ ಇಲ್ಲದಂತಾಗಿದೆ ಎಂದು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮವನ್ನು ಯಾರು ಪಾಲಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ಧರ್ಮದಿಂದ ಬಾಳಿದರೆ ಸಮಾಜ ಸುಸ್ಥಿತಿಯಲ್ಲಿರುತ್ತದೆ ಎಂದು ನುಡಿದರು. ರಟ್ಟೇಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಮುಖ್ಯ ಶಿಕ್ಷಕ ಜಿ.ಎಂ. ಹಿರೇಮಠ್ ಶ್ರೀದೇವಿ ಪುರಾಣ ಪ್ರವಚನ ನಡೆಸಿಕೊಟ್ಟರು. “ಆಯುರ್ವೇದದಲ್ಲಿ ಗಿಡಮೂಲಿಕೆಗಳು” ಎಂಬ ವಿಷಯದ ಬಗ್ಗೆ ವೈದ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ಸಾಲಿಮಠ ಉಪನ್ಯಾಸ ನೀಡಿದರು. ಗದ್ದಿಗೆಪ್ಪ ಮಾಸಡಿ, ಗಜೇಂದ್ರಪ್ಪ ಮಾಸಡಿ, ಅಶೋಕ್ ಕ್ಯಾತಣ್ಣವರ್ ಅವರಿಗೆ ಗುರುರಕ್ಷೆ ನೀಡಲಾಯಿತು. ಡಾ. ಲಿಂಗರಾಜ್, ಡಾ. ರಾಜಾನಾಯ್ಕ, ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ ಇತರರು ಉಪಸ್ಥಿತರಿದ್ದರು.
ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿ ನರ್ಸರಿ, ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಹಾಗೂ ನಾಗವಂದ ಗ್ರಾಮದ ಬನಶಂಕರಿ ಕಲಾ ತಂಡದವರಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
