ಪೈಪ್‍ಗಳಲ್ಲಿ ನೀರು ಬಳಸುವುದನ್ನು ನಿಲ್ಲಿಸಿ

ತುಮಕೂರು

     ನಲ್ಲಿಗಳಿಗೆ ಪೈಪ್ ಅಳವಡಿಸಿ ಕಾರು ತೊಳೆಯುವುದು, ಗಿಡಗಳಿಗೆ ನೀರು ಹಾಯಿಸುವುದು, ಮನೆಯ ಆವರಣ ಸ್ವಚ್ಛಗೊಳಿಸುವುದು, ದ್ವಿಚಕ್ರ ವಾಹನಗಳಿಗೆ ನೀರು ಹಾಯಿಸುವುದು ಇತ್ಯಾದಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವ ಮೂಲಕ ನೀರಿನ ದುರ್ಬಳಕೆಗೆ ಕಡಿವಾಣ ಹಾಕಲು ಸಾಧ್ಯವಿದೆ. ಬಹಳಷ್ಟು ಜನರು ತಮ್ಮ ವಾಹನಗಳನ್ನು ಸ್ವಚ್ಛಗೊಳಿಸುವಾಗ ವಿಪರೀತವಾಗಿ ಪೈಪ್ ಮೂಲಕ ನೀರು ಚಿಮ್ಮಿಸುತ್ತಾರೆ. ಅತಿ ವೇಗವಾಗಿ ಸ್ಪ್ರೇ ಮಾಡುವ ಮೂಲಕ ಸಾಕಷ್ಟು ನೀರನ್ನು ವೇಸ್ಟ್ ಮಾಡುತ್ತಿದ್ದಾರೆ.

     ಮನೆಯ ಹಿತ್ತಲು ಅಥವಾ ಆವರಣಕ್ಕೆ ನೀರು ಹಾಕುವಾಗ ನಲ್ಲಿಗೆ ಪೈಪ್ ಜೋಡಿಸಿ ನಲ್ಲಿಯಲ್ಲಿ ನೀರು ಬರುವಂತೆ ಮಾಡುತ್ತಾರೆ. ನಿರಂತರವಾಗಿ ಹೀಗೆ ಪೈಪ್ ಮೂಲಕ ನೀರು ಹರಿಯುತ್ತಾ ಹೋದರೆ ಅದೆಷ್ಟು ನೀರು ಪೋಲಾಗುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ. ಬೆಂಗಳೂರು ಹಾಗೂ ಚಂಡೀಗಢದಲ್ಲಿ ನೀರಿನ ದುರ್ಬಳಕೆ ತಡೆಯಲು ಸರ್ಕಾರಗಳು ಕೆಲವೊಂದು ಕ್ರಮಗಳನ್ನು ಕೈಗೊಂಡಿವೆ.

       ನೀರನ್ನು ವ್ಯರ್ಥ ಮಾಡಿದವರಿಗೆ ದಂಡ ವಿಧಿಸುವ ಕಾನೂನನ್ನು ಅಲ್ಲಿನ ಸ್ಥಳೀಯ ಆಡಳಿತಗಳು ಜಾರಿಗೆ ತಂದಿವೆ. ಲಾನ್, ಕಾರು ಕ್ಲೀನಿಂಗ್, ಮನೆಯಂಗಳ ಯಾವುದಕ್ಕೂ ಪೈಪ್ ಬಳಸುವ ಹಾಗಿಲ್ಲ. ಒಂದು ವೇಳೆ ಇದನ್ನು ಉಲ್ಲಂಘಿಸಿ ನೀರು ವ್ಯರ್ಥ ಮಾಡುವುದು ಕಂಡುಬಂದಲ್ಲಿ ದಂಡವಂತೂ ಗ್ಯಾರಂಟಿ.

      ಆ ದಂಡವನ್ನು ನೀರಿನ ಬಿಲ್‍ನಲ್ಲಿ ಸೇರಿಸಲಾಗುತ್ತದೆ. ನೀರು ವೇಸ್ಟ್ ಮಾಡುವುದನ್ನು ಗಮನಿಸುವುದಕ್ಕಾಗಿಯೇ ಕೆಲವು ನಗರಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ವೀಡಿಯೋ ತೆಗೆದು ಅದನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡುವ, ಅದನ್ನು ಆಧಾರವಾಗಿಟ್ಟುಕೊಂಡು ದಂಡ ಹಾಕುವ ಪ್ರವೃತ್ತಿ ಜಾರಿಯಲ್ಲಿದೆ. ಹೀಗಾದಾಗ ವಾದ, ವಿವಾದಗಳಿಗೆ ಅವಕಾಶವೇ ಇರುವುದಿಲ್ಲ.

      ತುಮಕೂರಿನಲ್ಲಿಯೂ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ಹಾಕುವ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಕೆಲವರು ದಂಡ ಪಾವತಿಸಿದ್ದಾರೆ. ನೀರಿನ ವಿಚಾರವಾಗಿ ಇಂತಹ ಕ್ರಮಗಳು ಜಾರಿಗೆ ಬರಬೇಕು. ಎಲ್ಲೆಲ್ಲಿ ನೀರು ವ್ಯರ್ಥವಾಗುತ್ತದೆಯೋ ಅಂತಹ ಕಡೆಗಳಿಗೆ ಧಾವಿಸಿ ಎಚ್ಚರಿಕೆಯನ್ನು ಕೊಡುವ ಪ್ರಯತ್ನಗಳು ಆಗಬೇಕು. ಜನರಿಗೂ ನೀರಿನ ಮಹತ್ವ ಏನೆಂಬುದು ತಿಳಿಯಬೇಕು.

       ನೀರಿನ ಬಳಕೆಯ ಬಗ್ಗೆ ನಮ್ಮ ಜನರಿಗೆ ಇನ್ನೂ ಜಾಗೃತಿ ಮೂಡಿಲ್ಲ ಎಂಬುದಕ್ಕೆ ಒಂದೆರಡು ಉದಾಹರಣೆಗಳನ್ನು ಇಲ್ಲಿ ನೀಡಬಹುದು.
ಪಾತ್ರೆ ತೊಳೆಯುವಾಗ, ಸಾಕು ಪ್ರಾಣಿಗಳ ಮೈ ತೊಳೆಯುವಾಗ, ನಲ್ಲಿಗಳು ಸೋರಿಕೆಯಾಗುತ್ತಿದ್ದರೆ, ಮನೆಯ ಮೇಲಿನ ಟ್ಯಾಂಕ್‍ಗಳು ತುಂಬಿ ಹರಿಯುತ್ತಿದ್ದಾಗ, ಸ್ನಾನ ಗೃಹಗಳಲ್ಲಿ ಶವರ್ ಬಳಸಿದಾಗ, ಮದುವೆ ಮನೆಗಳಲ್ಲಿ ನೀರಿನ ಬಾಟಲಿ ಕೊಟ್ಟಾಗ ಹೀಗೆ ಹಲವು ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಮೇಲ್ಕಂಡ ಕೆಲವೇ ಸಂದರ್ಭಗಳಲ್ಲೂ ಬಳಸಿಕೊಂಡು ನೀರಿನ ಮಿತ ವ್ಯಯ ಬಳಸುವಿಕೆಗೆ ಮುಂದಾದರೆ ಸಾಕು ಎಷ್ಟೋ ನೀರನ್ನು ಉಳಿಸಬಹುದು.

        ಯುನೆಸ್ಕೋ ವರದಿ ಪ್ರಕಾರ 2050ರ ವೇಳೆಗೆ ನಮ್ಮ ದೇಶದಲ್ಲಿ ನೀರಿನ ಕೊರತೆ ವಿಪರೀತವಾಗುತ್ತದೆ. ಅಂತರ್ಜಲ ನೀರೂ ಸಹ ಕಲುಷಿತವಾಗುತ್ತದೆ. ಈಗಾಗಲೇ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನೀರಿನ ಸಮಸ್ಯೆಯಲ್ಲಿ ಎಷ್ಟು ಹೆಸರು ಮಾಡಿದೆ ಎಂಬುದನ್ನು ಕೇಳಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಎಲ್ಲ ಕಡೆಗೂ ಹರಡುವುದು ಬೇಡ. ಒಂದು ದಿನಕ್ಕೆ ಒಬ್ಬ ಮನುಷ್ಯನಿಗೆ ಸರಾಸರಿ 135 ರಿಂದ 150 ಲೀಟರ್ ನೀರು ಬೇಕು ಎಂದು ಅಂದಾಜಿಸಲಾಗಿದೆ.

      ಕೆಲವರು 200 ಲೀಟರ್‍ಗಳಿಗಿಂತಲೂ ಹೆಚ್ಚು ಬಳಕೆ ಮಾಡುವವರಿದ್ದಾರೆ. ಆದರೆ ಕನಿಷ್ಠ ಸರಾಸರಿ ಮಾಹಿತಿಯನ್ನು ವರದಿಗಳು ನೀಡುತ್ತವೆ. 2031ರ ವೇಳೆಗೆ ಕೇವಲ ಒಬ್ಬ ವ್ಯಕ್ತಿಗೆ 88 ಲೀಟರ್‍ಗಳಷ್ಟು ಮಾತ್ರವೇ ನೀರು ಸಿಗಬಹುದು ಎಂದು ಹೇಳಲಾಗುತ್ತಿದೆ. ಹೀಗಾದರೆ ಮುಂದೆ ನಮ್ಮ ಬದುಕು ಹೇಗೆ? ಚೆನ್ನಾಗಿ ಮಳೆ ಬಂದರೂ ಮಳೆ ನೀರು ಸಂಗ್ರಹಣೆ ಸಮರ್ಪಕವಾಗಿ ಆಗದಿದ್ದರೆ ನೀರು ವ್ಯರ್ಥವಾಗಿ ನೀರಿನ ಸಮಸ್ಯೆ ಬಿಗಡಾಯಿಸುವ ಎಲ್ಲಾ ಸಾಧ್ಯತೆಗಳಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link