ಬೆಂಗಳೂರು
ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಬಿಸಿಯೂಟ ಅಡುಗೆ ನೌಕರರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಅಕ್ಷರ ದಾಸೋಹ ನೌಕರರು ಗುರುವಾರ ರಾಜಭವನ ಚಲೋ ಚಳವಳಿ ನಡೆಸಿದರು.
ನಗರದ ಸಿಟಿ ರೈಲ್ವೆ ನಿಲ್ದಾಣದ ಬಳಿ ಸಿಐಟಿಯು ನೇತೃತ್ವದಲ್ಲಿ ಸೇರಿದ ನೂರಾರು ಅಕ್ಷರ ದಾಸೋಹ ನೌಕರರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ 2019-20 ರ ಬಜೆಟ್ ನಲ್ಲಿ ಬಿಸಿಯೂಟ ಕೆಲಸಗಾರರಿಗೆ ನಯಾ ಪೈಸೆಯನ್ನೂ ಮೀಸಲಿಟ್ಟಿಲ್ಲ ಎಂದು ಆರೋಪಿಸಿದರು.
ತೋರಿಕೆಗಾಗಿ ಬೇಟಿ ಬಚಾವೋ, ಮಾತೃದೇವೋ ಭವ ಎನ್ನುವ ಬಿಜೆಪಿಯು ಲಕ್ಷಾಂತರ ಮಹಿಳೆಯರ ದುಡಿಮೆಯನ್ನು ಅವರ ಪ್ರಜಾಸತ್ತಾತ್ಮಕ ಹೋರಾಟವನ್ನು ಅವಹೇಳನ ಮಾಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾದ ಅಕ್ಷರ ದಾಸೋಹ ಯೋಜನೆಯು 2002 ರಲ್ಲಿ ಪ್ರಾರಂಭವಾಗಿ ಇಂದಿಗೆ 16 ವರ್ಷಗಳಾದರೂ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ನೌಕರರಿಗೆ ಕೆಲಸದ ಭದ್ರತೆಯಾಗಲಿ, ಸಮರ್ಪಕ ಕೂಲಿಯಾಗಲಿ ಇಲ್ಲ ಎಂದು ಆರೋಪಿಸಿದರು.
ಕೆಲಸ ಖಾಯಂಗೊಳಿಸದೇ ಈ ದುಡಿಯುವ ಮಹಿಳೆಯರನ್ನು ಶೋಷಣೆ ಮಾಡುತ್ತಲೇ ಬರಲಾಗಿದೆ. ಈ ಯೋಜನೆ ಅಡಿಯಲ್ಲಿ ಕೆಲಸ ಮಾಡುವವರಿಗೆ 7 ವರ್ಷಗಳಿಂದ ಗೌರವಧನವನ್ನು ಹೆಚ್ಚಳ ಮಾಡದೆ ದುಡಿಸಿಕೊಳ್ಳುತ್ತಿರುವುದು, ಖಾಸಗಿಕರಣ ಮಾಡುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಟೀಕಿಸಿದರು.
ನಮ್ಮ ರಾಜ್ಯದ 54,839 ಶಾಲೆಗಳಲ್ಲಿ 53,43,501 ಮಕ್ಕಳು ದಿನನಿತ್ಯ ಬಿಸಿ ಊಟ ಫಲಾನುಭವಿಗಳಾಗಿದ್ದಾರೆ. ಈ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 1,18,130 ಮಹಿಳೆಯರು ದುಡಿಯುತ್ತಿದ್ದಾರೆ. ಉಕ ಜಿಲ್ಲೆಯಲ್ಲಿ 4300 ರಷ್ಟು ನೌಕರರು ಕೆಲಸ ಮಾಡುತ್ತಿದ್ದಾರೆ.
ಇವರ ಮಾಸಿಕ ಕೂಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಇವೆರಡೂ ಸೇರಿದರೆ ಈಗ 2600 ಇದ್ದು, ಇದರಲ್ಲಿ ರಾಜ್ಯ ಸರ್ಕಾರ 2,000 ಕೇಂದ್ರ ಸರ್ಕಾರ 600 ಮಾತ್ರ ಕೊಡುತ್ತಿದೆ . 45ನೇ ಭಾರತೀಯ ಕಾರ್ಮಿಕ ಸಮ್ಮೇಳನ (Iಐಅ) ಪ್ರಕಾರ ಇವರನ್ನು “ಕಾರ್ಮಿಕರು ” ಎಂದು ಪರಿಗಣಿಸಿ ಕನಿಷ್ಠ ವೇತನ ಜಾರಿ ಮಾಡಬೇಕೆಂದು ಶಿಫಾರಸು ಮಾಡಿ 6 ವರ್ಷಗಳು ಕಳೆದಿದೆ.
7ನೇ ವೇತನ ಆಯೋಗವು 18000 ಸಾವಿರ ಕನಿಷ್ಠ ವೇತನ ಇಲ್ಲದೇ ಯಾರನ್ನೂ ದುಡಿಸತಕ್ಕದ್ದಲ್ಲ ಎಂದು ಶಿಫಾರಸು ಮಾಡಿದರೂ, ಕೂಡ ಕೇಂದ್ರ ಸರ್ಕಾರ ಕಿಂಚಿತ್ತೂ ಬೆಲೆ ಕೊಡದೆ ಈ ಯೋಜನೆಗೆ ಬರುವ ಅರ್ಧದಷ್ಟು ಅನುದಾನವನ್ನು ಕಡಿತ ಮಾಡಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಸುಪ್ರೀಂಕೋರ್ಟ್ ನಿರ್ಧಾರವನ್ನು ಕಡೆಗಣಿಸಿದೆ ಎಂದು ದೂರಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಗಲು ಯೋಜನೆಯು ಸರ್ಕಾರಕ್ಕೆ ಪ್ರಮುಖವಾಗಿದೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ 2019-20ರ ಬಜೆಟಿನಲ್ಲಿ ಬಿಸಿಯೂಟ ಯೋಜನೆಗೆ ಅನುದಾನ ನೀಡದೆ ಕೇಂದ್ರದಲ್ಲಿಯ ಮೋದಿ ಸರ್ಕಾರ ಬಿಸಿಯೂಟ ನೌಕರರಿಗೆ ಮಹಾ ದ್ರೋಹ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
