ತುಮಕೂರು
ಮಹಾನಗರ ಪಾಲಿಕೆ ವ್ಯಾಪ್ತಿಯ ಅರಳೀಮರದ ಪಾಳ್ಯದಲ್ಲಿ ಅಂಗನವಾಡಿ ಹಾಗೂ ಪ್ಲೇಗಿನಮ್ಮ ದೇವಸ್ಥಾನದ ಪಕ್ಕದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಅಂಗಡಿ ಮತ್ತು ದನದ ಕೊಟ್ಟಿಗೆ ನಿರ್ಮಾಣ ಮಾಡಿದ್ದಾರೆ ಎಂದು ಸ್ಥಳೀಯರು ಮನವಿ ಪತ್ರದ ಮೂಲಕ ಆರೋಪ ಮಾಡಿದ್ದಾರೆ.
ಕಳೆದ ನವೆಂಬರ್ ತಿಂಗಳಿನಲ್ಲಿಯೇ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಿಗೂ ಮನವಿ ಮಾಡಲಾಗಿದೆ. ಆದರೆ ಈವರೆಗೂ ಯಾರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿ ಪತ್ರದಲ್ಲಿ ತುಮಕೂರು ಮಹಾನಗರ ಪಾಲಿಕೆಗೆ ಸೇರಿದ ಅರಳೀಮರದಪಾಳ್ಯದಲ್ಲಿ ಅಂಗನವಾಡಿ ಮತ್ತು ಪ್ಲೇಗಿನಮ್ಮ ದೇವಾಲಯವಿದ್ದು, ಗ್ರಾಮದೇವತೆ ದೇವಸ್ಥಾನಕ್ಕೆ ನೂರಾರು ಜನ ಭಕ್ತರು ಬರುತ್ತಾರೆ. ಆದರೆ ಇಲ್ಲಿನ ಖಾಸಗಿ ವ್ಯಕ್ತಿಗಳು ದೇವಾಲಯ ಪಕ್ಕದಲ್ಲಿ ದನದ ಕೊಟ್ಟಿಗೆ ಹಾಗೂ ತಿಪ್ಪೇಗುಂಡಿಯನ್ನು ಮಾಡಿಕೊಂಡಿದ್ದಾರೆ.
ಸದರಿ ಪ್ರದೇಶದ ಸುತ್ತಲೂ ಜನವಸತಿಗಳಿದ್ದು, ತಿಪ್ಪೆಗುಂಡಿಯಿಂದ ಈ ಪ್ರದೇಶದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದು, ಇದರಿಂದ ಡೆಂಗ್ಯೂ, ಚಿಕನ್ಗುನ್ಯಾದಂತಹ ಮಾರಣಾಂತಿಕ ಕಾಯಿಲೆಗಳು ಹರಡುವ ಸಾಧ್ಯತೆಗಳಿವೆ. ಅಲ್ಲದೆ ಈ ಪ್ರದೇಶದಲ್ಲಿ ಶಾಲಾ ಮಕ್ಕಳು ಓಡಾಡಲು ಕೂಡ ತೊಂದರೆಯುಂಟಾಗುತ್ತಿದೆ. ಈ ಪ್ರದೇಶದಲ್ಲಿ ಅನಧಿಕೃತವಾಗಿ ದನದಕೊಟ್ಟಿಗೆ, ತಿಪ್ಪೇಗುಂಡಿ ಹಾಗೂ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಿ ನಾಗರಿಕರಿಗೆ ನೆಮ್ಮದಿ ಜೀವನ ಮಾಡಲು ಅನುಕೂಲಮಾಡಿಕೊಡಬೇಕು ಎಂದು ವಿನಂತಿಸಿಕೊಳ್ಳುತ್ತೇವೆ ಎಂದು ನಮೂದು ಮಾಡಲಾಗಿದೆ.
ಜಿಲ್ಲಾಧಿಕಾರಿಗಳು ಹಾಗೂ ಆಯುಕ್ತರಿಗೆ ನೀಡಿದ ಮನವಿಯಲ್ಲಿ ಸ್ಥಳೀಯರ ಸುಮಾರು ಮೂವತ್ತಕ್ಕೂ ಹೆಚ್ಚು ಜನ ತಮ್ಮ ಸಹಿಯನ್ನು ಮಾಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
