ದಾವಣಗೆರೆ:
ಛಾಯಾಗ್ರಾಹಕರ ಕಲ್ಯಾಣಕ್ಕಾಗಿ ಫೋಟೋಗ್ರಾಫರ್ಸ್ ಅಕಾಡೆಮಿ ಸ್ಥಾಪಿಸಬೇಕೆಂದು ಒತ್ತಾಯಿಸಿ ದಾವಣಗೆರೆ ಫೋಟೋಗ್ರಾಫರ್ಸ್ ಯೂತ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ಬೈಕ್ ರ್ಯಾಲಿ ನಡೆಸುವ ಮೂಲಕ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜಯದೇವ ವೃತ್ತದಿಂದ ಬೈಕ್ ರ್ಯಾಲಿ ಮೂಲಕ ಹೊರಟ ಫೋಟೋಗ್ರಾಫರ್‍ಗಳು, ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀನಾಥ್ ಅಗಡಿ, ರಾಜ್ಯಾದ್ಯಂತ 5 ಲಕ್ಷ ಜನ, ದಾವಣಗೆರೆಯಲ್ಲಿ 2 ಸಾವಿರಕ್ಕೂ ಹೆಚ್ಚು ವೃತ್ತಿನಿರತ ಫೋಟೋಗ್ರಾಫರ್ಸ್‍ಗಳು ಛಾಯಾಗ್ರಹಣ ವೃತ್ತಿ ನಂಬಿ ಜೀವನ ನಡೆಸುತ್ತಿದ್ದಾರೆ. ಸ್ವಾವಲಂಬಿಯಾಗಿ ಬದುಕುತ್ತಿರುವ ನಾವು ಈತನಕ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದೇ ವಂಚಿತರಾಗಿದ್ದೇವೆ. ನಾವು ಖರೀದಿಸುವ ಕ್ಯಾಮರಾ, ಉಪಕರಣಗಳ ಮೂಲಕ ತೆರಿಗೆ ಭರಿಸುತ್ತಿದ್ದೇವೆ. ಇನ್ನು ಡಿಜಿಟಲ್ ಕ್ಯಾಮರಾ, ಹೊಸ ಅವಿಷ್ಕಾರದ ಮೊಬೈಲ್‍ಗಳು ಬಂದ ಮೇಲೆ ಸಣ್ಣಪುಟ್ಟ ಛಾಯಾಗ್ರಾಹಕರು, ಸ್ಟುಡಿಯೋ ಮಾಲೀಕರು ವ್ಯಾಪಾರವಿಲ್ಲದೇ ಮುಚ್ಚುವ ಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದರು.
ಬಜೆಟ್‍ನಲ್ಲಿ ಛಾಯಾಗ್ರಾಹಕರಿಗೆ ಅನುದಾನ ಮೀಸಲಿಡಬೇಕು. ನಮ್ಮ ಜೀವನಕ್ಕೆ ಆರ್ಥಿಕ ಭದ್ರತೆ ಕಲ್ಪಿಸಬೇಕು. ನಮ್ಮ ಜೀವನಕ್ಕಾಗಲೀ, ನಮಗಾಗಲೀ ಭವಿಷ್ಯನೇ ಇಲ್ಲದಂತಾಗಿದೆ. ಆರ್ಥಿಕ ಭದ್ರತೆಯೂ ನಮಗೆ, ನಮ್ಮ ಕುಟುಂಬಗಳಿಗೆ ಇಲ್ಲ. ನಮ್ಮ ಬಹು ದಿನದ ಬೇಡಿಕೆಯಾದ ಫೋಟೋಗ್ರಾಫರ್ಸ್ ಅಕಾಡೆಮಿ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಪಿಎ ನಿರ್ದೇಶಕ ಎಚ್‍ಕೆಸಿ ರಾಜು, ಕಾರ್ಯದರ್ಶಿ ದುಗ್ಗೇಶ ಕಡೇಮನೆ, ಮಾಜಿ ಅಧ್ಯಕ್ಷ ಪ್ರಸನ್ನ, ಕೆ.ಪಿ.ನಾಗರಾಜ, ಕಿರಣಕುಮಾರ, ಅರುಣಕುಮಾರ, ಮಂದಾರ ಬಸವರಾಜ, ಮಂಗಳಮ್ಮ, ರುದ್ರಮ್ಮ, ಖಾಸಿಂ, ಶಶಿ ಅಂಗಡಿ ಮಂಜುನಾಥ, ವಿಜಯ ಜಾಧವ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








