ಕೊಳಗೇರಿ ಸಮಸ್ಯೆ ಚರ್ಚೆಗಾಗಿ ಸಭೆ ಕರೆಯಲು ಆಗ್ರಹ

ದಾವಣಗೆರೆ :

        ಕೊಳಗೇರಿ ನಿವಾಸಿಗಳ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕು ಹಾಗೂ ವಸತಿ ರಹಿತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

      ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೊಳಗೇರಿಗಳ ಅಭಿವೃದ್ಧಿಯನ್ನು ಕಡೆಗಣಿಸಿರುವ ಹಾಗೂ ವಸಹಿ ಹೀನರ ಸಮಸ್ಯೆ ಬಗೆಹರಿಸಿದ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾ ಸಂಚಾಲಕಿ ರೇಣುಕ ಯಲ್ಲಮ್ಮ ಹಾವೇರಿ, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಹಲವು ಸಮಸ್ಯೆಗಳಿದ್ದು, ಈ ಕೊಳಗೇರಿಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಸಹ ಇಲ್ಲವಾಗಿದೆ. ಹೀಗಾಗಿ ಕೊಳಗೇರಿ ನಿವಾಸಿಗಳು ಅತ್ಯಂತ ಹೀನಾಯವಾಗಿ ಜೀವನ ನಡೆಸುತ್ತಿದ್ದಾರೆಂದು ಆರೋಪಿಸಿದರು.

       ಕೊಳಗೇರಿ ನಿವಾಸಿಗಳು ಸಾಲ ಸೋಲ ಮಾಡಿ, ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ, ಈ ವರೆಗೂ ಕೇವಲ ಒಂದೇ ಕಂತಿನ ಹಣ ಫಲಾನುಭವಿಗಳಿಗೆ ಬಂದಿದ್ದು, ಇನ್ನುಳಿದ ಹಣ ಬಂದಿಲ್ಲ. ಮಂಡಕ್ಕಿ ಭಟ್ಟಿ 3ನೇ ಹಂತದಲ್ಲಿ ವಿದ್ಯುತ್ ಕಂಬಗಳಿಲ್ಲ. ವಾಜಪೇಯಿ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆಗಳ ಅಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಕೊಳಗೇರಿ ನಿವಾಸಿಗಳು ಪಾಲಿಕೆಗೆ ಅರ್ಜಿ ಸಲ್ಲಿಸಿ, ವರ್ಷ ಕಳೆದಿದೆ. ಮನೆ ನಿರ್ಮಾಣಕ್ಕೆ ಅನುಮತಿ ನೀಡಿ, ಈ ವರೆಗೂ ಪಾಲಿಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಆಪಾದಿಸಿದರು.

       ರಾಜೀವ್ ಆವಾಜ್ ಯೋಜನೆ ಅಡಿ 2120 ಮನೆಗಳು ಮಂಜೂರಾಗಿದ್ದು, ಇದುವರೆಗೂ 800 ಮನೆಗಳನ್ನು ಸಹ ನಿರ್ಮಿಸಲು ಹಣ ಬಿಡುಗಡೆ ಮಾಡಿಲ್ಲ. ಅಲ್ಲದೆ, ಕೊಳಗೇರಿಗಳಲ್ಲಿ ಬಹುತೇಕ ಬಾಡಿಗೆ ಮನೆಗಳನ್ನು ಪಡೆದು ನಿರ್ಗತಿಕರು ವಾಸವಾಗಿದ್ದಾರೆ. ಆದರೆ, ಈಗ ಮಾಲೀಕರು ಬಂದು ಮನೆ ನಿರ್ಮಿಸಿಕೊಂಡು ವಾಸವಾಗಲು ಮುಂದಾಗಿದ್ದಾರೆ. ಹೀಗಾಗಿ ಅಸಂಖ್ಯಾತ ಕೊಳಗೇರಿ ನಿವಾಸಿಗಳು ವಸತಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂದು ಅಲವತ್ತುಕೊಂಡರು

      ಕೊಳಗೇರಿಗಳ ಈ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಕ್ಷಣವೇ ಸಭೆ ಕರೆಯಬೇಕು. ನಿವೇಶನ ರಹಿತರ ಬಗ್ಗೆ ಕೂಡಲೇ ಸರ್ವೆ ನಡೆಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಿ, ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.

     ಪ್ರತಿಭಟನೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಶಬ್ಬೀರ್ ಸಾಬ್, ಮಂಜುನಾಥ್.ಎನ್, ಮೊಹಮ್ಮದ್ ಮೋಸಿನ್, ಮೊಹಮ್ಮದ್ ಹಯಾತ್, ಎನ್.ಮಲ್ಲೇಶ್, ನೀಲಮ್ಮ, ಸಿ.ಬಸವರಾಜ್, ಸೈಯದ್ ಸುಹಿಲ್ ಭಾಷಾ, ನಾಗರಾಜಪ್ಪ, ಮರಿಯಪ್ಪ, ಸಾವಿತ್ರಮ್ಮ, ಕಣಿವೆ ಮಾರಕ್ಕ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link