ಆಯುಕ್ತರ ಜೊತೆ ಸಭೆಯಲ್ಲಿ ಗುತ್ತಿಗೆದಾರರ ಅಳಲು :ಸದಸ್ಯರನ್ನು ಕಾಣದಿದ್ದರೆ ಕಾಮಗಾರಿ ಮಾಡಲಸಾಧ್ಯ 

ತುಮಕೂರು

     ಕಾಮಗಾರಿ ನಿರ್ವಹಿಸಲು ಕಾರ್ಯಾದೇಶ ಪಡೆದ ಗುತ್ತಿಗೆದಾರನಿಗೆ ಸಂಬಂಧಪಟ್ಟ ಇಂಜಿನಿಯರ್‍ಗಳು ನಿಯಮದ ಪ್ರಕಾರ ತಕ್ಷಣವೇ ಕಾಮಗಾರಿ ಕೈಗೊಳ್ಳಬೇಕಾದ ಸ್ಥಳವನ್ನು ಅಧಿಕೃತವಾಗಿ ವಹಿಸುವುದಿಲ್ಲ. ಅದಕ್ಕೆ ಬದಲಾಗಿ ಮೊದಲು ಹೋಗಿ ಆ ವಾರ್ಡಿನ ಕಾರ್ಪೋರೇಟರ್‍ರನ್ನು ಭೇಟಿಯಾಗಿ ಬನ್ನಿ ಎಂದು ಸಲಹೆ ಕೊಡುತ್ತಾರೆ.

     ಗುತ್ತಿಗೆದಾರನು ಅವರನ್ನು ಭೇಟಿ ಆಗದಿದ್ದರೆ ಆ ಕಾಮಗಾರಿಯ ಚಾಲನೆಯೇ ಆಗುವುದಿಲ್ಲ. ವಿನಾಕಾರಣ ಗುತ್ತಿಗೆದಾರ ತೊಂದರೆಗೆ ಸಿಲುಕುತ್ತಾನೆ” ಎಂದು ತುಮಕೂರು ಮಹಾನಗರ ಪಾಲಿಕೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೈ.ಆರ್.ವೇಣುಗೋಪಾಲ್ ಅವರು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರ ಎದುರು ಗುತ್ತಿಗೆದಾರರ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.

     ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ “ಪಾಲಿಕೆಯ ಗುತ್ತಿಗೆದಾರರ ಸಂಘ”ದವರೊಡನೆ ಪಾಲಿಕೆ ಆಯುಕ್ತರು ನಡೆಸಿದ ಚರ್ಚಾ ಸಭೆಯಲ್ಲಿ ಅವರು ಗುತ್ತಿಗೆದಾರರು ಎದುರಿಸುತ್ತಿರುವ ಬಹುಮುಖ ಸಮಸ್ಯೆಗಳನ್ನು ವಿವರಿಸುತ್ತ ಈ ಸಂಗತಿಯ ಮೇಲೂ ಬೆಳಕು ಚೆಲ್ಲಿದ್ದಾರೆ.

    ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಭೂಬಾಲನ್ ಅವರು ಕಾರ್ಯಾದೇಶ ಪಡೆದ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಕಾನೂನು ರೀತಿಯಲ್ಲಿ ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆಂದು ವೇಣುಗೋಪಾಲ್ ತಿಳಿಸಿದ್ದಾರೆ.

      ವಿವಿಧ ಕಾಮಗಾರಿಗಳ ಬಿಲ್ ಪಾವತಿಯಾಗುವಲ್ಲಿ ವಿನಾಕಾರಣ ವಿಳಂಬ ಆಗದಂತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಯಾವುದೇ ಕಾಮಗಾರಿಯ ಕಚೇರಿ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಸಾರ್ವಜನಿಕರಿಗೆ ಮತ್ತು ಗುತ್ತಿಗೆದಾರರಿಗೆ ತೊಂದರೆ ಆಗುತ್ತದೆ. ಆಗ ಸಂಬಂಧಿಸಿದ ಇಂಜಿನಿಯರ್ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಗುತ್ತಿಗೆದಾರರಿಂದ ಕಾಮಗಾರಿಗಳು ವಿಳಂಬವಾಗಿ ಸಾರ್ವಜನಿಕರಿಗೆ ತೊಂದರೆ ಆಗುವುದಾದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಆಯುಕ್ತರು ಗುತ್ತಿಗೆದಾರರ ಸಭೆಯಲ್ಲಿ ತಿಳಿಸಿದರು.

      ಗುತ್ತಿಗೆದಾರರ ಮತ್ತೊಂದು ಮನವಿಗೆ ಪ್ರತಿಕ್ರಿಯಿಸಿದ ಆಯುಕ್ತರು, ಪಾಲಿಕೆಯ ಕಟ್ಟಡದಲ್ಲೇ ಪಾಲಿಕೆ ಗುತ್ತಿಗೆದಾರರಿಗೆ ಸ್ಥಳಾವಕಾಶ ಕಲ್ಪಿಸುವ ಆಶ್ವಾಸನೆ ನೀಡಿದರು.

     ಇದಕ್ಕೂ ಮೊದಲು ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೈ.ಆರ್.ವೇಣುಗೋಪಾಲ್ ಮಾತನಾಡಿ, ಪಾಲಿಕೆಯಲ್ಲಿ ಸಕಾಲಕ್ಕೆ ಬಿಲ್ ಪಾವತಿ ಆಗದೆ ಗುತ್ತಿಗೆದಾರರ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುವಂತಾಗುತ್ತಿದೆ ಎಂದು ಗಮನ ಸೆಳೆದಿದ್ದರು. ಇದಲ್ಲದೆ, ಪ್ರತಿ ಕಾಮಗಾರಿಗೆ “ಮೂರನೇ ವ್ಯಕ್ತಿ ತಪಾಸಣೆ” (ಥರ್ಡ್ ಪಾರ್ಟಿ ಇನ್ಸ್‍ಪೆಕ್ಷನ್) ಎಂದು ಪ್ರಸ್ತುತ ಅತಿ ವಿಳಂಬ ಆಗುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ “ಮೂರನೇ ವ್ಯಕ್ತಿ ತಪಾಸಣೆ”ಯ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಬೇಕು ಎಂದು ವೇಣುಗೋಪಾಲ್ ಆಗ್ರಹಿಸಿದರು.

      ಈ ಸಭೆಯಲ್ಲಿ ಪಾಲಿಕೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ತಿಪ್ಪೇರುದ್ರಪ್ಪ, ಎಕ್ಸಿಕ್ಯುಟೀವ್ ಇಂಜಿನಿಯರ್ ಆಶಾ ಅವರು ಹಾಜರಿದ್ದು, ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಿದರು. ಸಭೆಯಲ್ಲಿ ಮುರಳಿಕೃಷ್ಣ, ನಟರಾಜು, ಪ್ರಸಾದ್, ರವೀಶಯ್ಯ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap