ತುಮಕೂರು
ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಅತ್ತ ಮುಂಬೈ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರೆ, ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.
ಸರ್ಕಾರಕ್ಕೆ ಸಂಕಷ್ಟ ಎದುರಾದಾಗ ಪಾರು ಮಾಡಲು ಮುಂದಾಗುತ್ತಿದ್ದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಪ್ರಯತ್ನವೂ ಸಹ ವಿಫಲವಾಗಿದ್ದು, ಮುಂದೇನು ಎಂಬ ನಡೆ ಈಗ ಎಲ್ಲರ ಚರ್ಚಾ ವಿಷಯವಾಗಿದೆ.ವಿಧಾನಸಭಾಧ್ಯಕ್ಷರ ಗೈರು ಹಾಜರಿಯಲ್ಲಿ ಅತೃಪ್ತ ಶಾಸಕರು ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಪತ್ರಗಳನ್ನು ನೀಡಿದ್ದು, ಈ ಪತ್ರಗಳ ಪರಿಶೀಲನೆ ಕಾರ್ಯ ಮಂಗಳವಾರ ನಡೆಯಲಿದೆ. ಸೋಮವಾರ ವಿಧಾನಸಭಾಧ್ಯಕ್ಷರು ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಕಚೇರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಂಗಳವಾರದ ತನಕ ಕಾದು ನೋಡುವ ತಂತ್ರವನ್ನೇ ಎಲ್ಲರೂ ಎದುರು ನೋಡುತ್ತಿದ್ದಾರೆ. ಸಭಾಧ್ಯಕ್ಷರು ಏನು ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.
ಸಭಾಧ್ಯಕ್ಷರು ಕೂಡಲೇ ರಾಜೀನಾಮೆ ಅಂಗೀಕರಿಸಬೇಕೆಂದೇನಿಲ್ಲ. ನಾಯಕರಿಂದ ವಿವರಣೆ ಪಡೆಯಬಹುದು. ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಕೆಲವು ದಿನಗಳ ಕಾಲ ಮುಂದೂಡಬಹುದು. ಅವರು ಈ ಆಯ್ಕೆಯಲ್ಲಿ ಸ್ವತಂತ್ರರು. ಯಾರೂ ಪ್ರಶ್ನಿಸಲು ಬರುವುದಿಲ್ಲ. ಹೀಗಾಗಿ ವಿಧಾನಸಭಾಧ್ಯಕ್ಷರ ನಡೆ ತೀವ್ರ ಕುತೂಹಲ ಕೆರಳಿಸಿದೆ. ಈ ನಡುವೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಬಹುಮತ ಸಾಬೀತುಪಡಿಸಲಿ ಎಂದು ವಿರೋಧ ಪಕ್ಷ ಮನವಿ ಸಲ್ಲಿಸಬಹುದು.
ಈ ಹಿನ್ನೆಲೆಯಲ್ಲಿಯೇ ಭಾನುವಾರ ರಾಜಧಾನಿಯಲ್ಲಿ ರಾಜಕೀಯ ಕಸರತ್ತುಗಳು ಚುರುಕಾಗಿವೆ. ರಾಜ್ಯಕ್ಕೆ ಆಗಮಿಸಿರುವ ಕೆ.ಸಿ.ವೇಣುಗೋಪಾಲ್, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಹೆಚ್.ಡಿ.ದೇವೇಗೌಡ ಸೇರಿದಂತೆ ಹಲವು ನಾಯಕರುಗಳು ಸಭೆ ನಡೆಸಿದ್ದಾರೆ. ಮತ್ತೊಂದೆಡೆ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಆ ಪಕ್ಷದ ಮುಖಂಡರುಗಳು ಸಭೆ ನಡೆಸಿದ್ದಾರೆ.