ಬ್ಯಾಂಕ್ ವಹಿವಾಟು: ಸಮಸ್ಯೆಗಳ ಸುಳಿಯಲ್ಲಿ ಗ್ರಾಹಕರು

ತುಮಕೂರು:

     ಬ್ಯಾಂಕಿಂಗ್ ವಹಿವಾಟು ಕ್ಷೇತ್ರದಲ್ಲಿ ಸಮಸ್ಯೆಗಳು ದಿನೆ ದಿನೇ ಉಲ್ಬಣಿಸುತ್ತಲೇ ಇದ್ದು, ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವ ವ್ಯವಸ್ಥೆಗಳಂತೂ ಬ್ಯಾಂಕಿಂಗ್ ವಲಯದಲ್ಲಿ ಕಂಡುಬರುತ್ತಿಲ್ಲ. ಒಂದಲ್ಲ ಒಂದು ಸಮಸ್ಯೆಗಳು ಬ್ಯಾಂಕ್ ಗ್ರಾಹಕರಿಗೆ ಎದುರಾಗುತ್ತಲೇ ಇವೆ.

    ಆನ್‍ಲೈನ್ ವಹಿವಾಟು, ನೇರ ನಗದು ವರ್ಗಾವಣೆ, ಎಟಿಎಂ ಇತ್ಯಾದಿ ವ್ಯವಸ್ಥೆಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನಿವಾರ್ಯ ಎನ್ನುವಂತಾಗಿದ್ದು, ಇಲ್ಲಿಯೂ ಸಹ ಎಡವಟ್ಟುಗಳು ಕಾಣಿಸಿಕೊಳ್ಳುತ್ತಿವೆ. ಬ್ಯಾಂಕ್‍ನಲ್ಲಿ ವ್ಯವಹಾರ ಮಾಡುವವರು, ಹಣ ಪಡೆಯುವವರು ಸಣ್ಣಪುಟ್ಟ ಸಮಸ್ಯೆಗಳಿಗೂ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

    ಕೆಲವು ಬ್ಯಾಂಕುಗಳ ಕಾರ್ಯವೈಖರಿಯಂತೂ ಗ್ರಾಹಕರಿಗೆ ಕಿರಿಕಿರಿ ಎನ್ನಿಸುತ್ತಿದೆ. ಸಮರ್ಪಕ ಮಾಹಿತಿ ನೀಡದೇ ಇರುವುದು, ಮುಂದೇನು ಮಾಡಬೇಕೆಂಬ ಮಾರ್ಗದರ್ಶನ ತೋರದಿರುವುದು ಇತ್ಯಾದಿ ಕಿರಿಕಿರಿಗಳಿಂದ ಗ್ರಾಹಕ ದಿನೆ ದಿನೆ ಬೇಸತ್ತು ಹೋಗುತ್ತಿದ್ದಾನೆ. ಮಾಹಿತಿ ನೀಡುವ ವ್ಯವಸ್ಥೆಯೂ ಇರುವುದಿಲ್ಲ.

    ಬ್ಯಾಂಕುಗಳಲ್ಲಿ ಸಿಬ್ಬಂದಿಯ ಸಂಖ್ಯೆಯೂ ಕಡಿಮೆ ಇದ್ದು, ಎಲ್ಲವನ್ನೂ ನಿಭಾಯಿಸಬೇಕಾದ ಪರಿಸ್ಥಿತಿಯಲ್ಲಿ ಗ್ರಾಹಕರೊಂದಿಗೆ ಸಿಟ್ಟು, ಸೆಡವುಗಳನ್ನು ಪ್ರದರ್ಶಿಸುವುದು, ಮಾತನಾಡದೆ ನಿರ್ಲಕ್ಷ್ಯ ವಹಿಸುವುದು ಇವೆಲ್ಲವೂ ಗ್ರಾಹಕರಿಗೆ ಅತ್ಯಂತ ಬೇಸರ ತರಿಸುತ್ತಿರುವ ಸಂಗತಿಗಳು. ನಾನೇ ಇಟ್ಟಿರುವ ಹಣವನ್ನು ನಾನೇ ಪಡೆಯಲಾಗದ ಸ್ಥಿತಿ ಇದೆಯಲ್ಲ ಎಂಬ ನೋವು ಕೆಲವೊಮ್ಮೆ ಗ್ರಾಹಕರಿಂದ ಕೇಳಿಬರುತ್ತಿದೆ. ಅನಕ್ಷರಸ್ಥರು, ಬ್ಯಾಂಕ್ ವಹಿವಾಟು ಗೊತ್ತಿಲ್ಲದವರು, ಆನ್‍ಲೈನ್ ವಹಿವಾಟಿಗೆ ಹೊಂದಿಕೊಳ್ಳಲು ಅಸಹಾಯಕರಾಗಿರುವವರು, ವಯೋವೃದ್ಧರು ಅಕ್ಷರಶಃ ಬ್ಯಾಂಕ್ ವ್ಯವಸ್ಥೆಯ ನಿಯಮಾವಳಿಗಳಲ್ಲಿ ತತ್ತರಿಸಿ ಹೋಗುತ್ತಿದ್ದಾರೆ.

    ಗ್ರಾಹಕರ ಹಣ ಅತ್ಯಂತ ಸುರಕ್ಷಿತ ಎಂದು ಹೇಳುವುದೇನೋ ಸರಿ. ಅದಕ್ಕೆ ತಕ್ಕಂತಹ ನಿಯಮಗಳನ್ನು ಕಠಿಣ ಮಾಡಲಿ. ಆದರೆ ಸುಲಲಿತ ವ್ಯವಹಾರಗಳನ್ನೆಲ್ಲಾ ಕಠಿಣಗೊಳಿಸಿ ಗ್ರಾಹಕರನ್ನು ಕತ್ತಲಿನಲ್ಲಿ ಇಡುವ ವ್ಯವಸ್ಥೆ ಬದಲಾಗಲಿ. ಅವರ ತೊಂದರೆಗಳನ್ನು ಆಲಿಸುವ ಕನಿಷ್ಠ ಸೌಜನ್ಯವನ್ನಾದರೂ ಬ್ಯಾಂಕ್ ಸಿಬ್ಬಂದಿ ತೋರಬಾರದೇಕೆ ಎನ್ನುತ್ತಾರೆ ಕೆಲವರು.

    ಪ್ರತಿ ಬ್ಯಾಂಕ್‍ಗಳಲ್ಲಿಯೂ ಎಟಿಎಂ ಸೌಲಭ್ಯಗಳಿವೆ. ಪಾಸ್‍ಬುಕ್ ಎಂಟ್ರಿ ಮಿಷಿನ್‍ಗಳಿವೆ. ಬ್ಯಾಂಕ್‍ಗಳಿಂದ ಎಟಿಎಂ ಕಾರ್ಡ್ ನೀಡಲಾಗುತ್ತದೆ. ಈ ಹಿಂದೆ ಇದ್ದ ರೀತಿಯಲ್ಲಿ ಟೋಕನ್ ಪಡೆದು ಹಣ ಪಡೆಯುವ ಪರಿಸ್ಥಿತಿ ಇಲ್ಲ. ಎಲ್ಲವೂ ಬದಲಾಗಿದೆ. ಹೀಗಿದ್ದರೂ ಸಮಸ್ಯೆಗಳು ಮಾತ್ರ ಹಿಂದಿಗಿಂತ ಈಗ ಹೆಚ್ಚುತ್ತಲಿವೆ. ಅದೆಷ್ಟೋ ಬ್ಯಾಂಕ್‍ಗಳಲ್ಲಿ ಪಾಸ್ ಬುಕ್ ಎಂಟ್ರಿ ಮಾಡಿಸಲು ಹೋದರೆ ಅಲ್ಲಿನ ಮೆಷಿನ್‍ಗಳು ಕಾರ್ಯನಿರ್ವಹಿಸುತ್ತಿಲ್ಲ.

   ಬ್ಯಾಂಕ್ ಒಳಗೆ ಇರುವ ಸಣ್ಣ ಮೆಷಿನ್‍ಗಳು ಕಾರ್ಯನಿರ್ವಹಿಸಿದರೂ ಅತ್ತ ಗಮನ ಕೊಡುವ ಮನಸ್ಥಿತಿ ಇರುವುದಿಲ್ಲ. ನಮಗೇಕೆ ಈ ಉಸಾಬರಿ ಎನ್ನುವವರೆ ಹೆಚ್ಚು. ಇದಕ್ಕೂ ಮಿಗಿಲಾಗಿ ಅಲ್ಲಿನ ಯಂತ್ರಗಳು ಪದೆ ಪದೆ ಕೆಟ್ಟು ಹೋಗುತ್ತಿವೆ. ಮೆಷಿನ್ ಸರಿಯಿಲ್ಲ ಎಂದು ಹೇಳಿ ಗ್ರಾಹಕರನ್ನು ಸಾಗ ಹಾಕುತ್ತಾರೆ. ಆದರೆ ಕೆಲವರು ತುರ್ತಾಗಿ ಪಾಸ್‍ಪುಸ್ತಕಗಳನ್ನು ಎಂಟ್ರಿ ಮಾಡಿಸಬೇಕಾಗಿರುತ್ತದೆ. ವ್ಯವಹಾರಗಳಿಗೆ ಇದು ಬೇಕಾಗಿಯೂ ಇರುತ್ತದೆ. ಇಂತಹವರೆಲ್ಲ ಅತಂತ್ರ ಸ್ಥಿತಿಗೆ ಸಿಲುಕುತ್ತಾರೆ.

    ಇನ್ನು ಎಟಿಎಂ ಕಾರ್ಡ್‍ಗಳದ್ದಂತೂ ಮತ್ತೊಂದು ಬಗೆಹರಿಯಲಾರದ ಸಮಸ್ಯೆ. ಕಾರ್ಡ್ ಜೇಬಿನಲ್ಲಿದ್ದರೂ ಹಣ ಪಡೆಯಲಾಗದ ಸ್ಥಿತಿಗೆ ಗ್ರಾಹಕರು ಬಂದು ನಿಲ್ಲುತ್ತಿದ್ದಾರೆ. ಕೆಲವು ಎಟಿಎಂಗಳಲ್ಲಿ ಹಣದ ಕೊರತೆ ಇದ್ದರೆ ಮತ್ತೆ ಕೆಲವು ಕಡೆ ನೋ ಕ್ಯಾಷ್ ಎಂಬ ನಾಮಫಲಕ ಹಾಕಲಾಗಿರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಎಟಿಎಂ ಕಾರ್ಡ್‍ಗಳು ಸ್ಥಗಿತಗೊಳ್ಳುತ್ತವೆ. ಈ ವಿಷಯವನ್ನು ಬ್ಯಾಂಕ್‍ಗಳಲ್ಲಿ ತಿಳಿಸಿದರೆ ಕಸ್ಟಮರ್ ಕೇರ್‍ಗೆ ಕರೆ ಮಾಡಿ ಎಂದಷ್ಟೇ ಹೇಳುತ್ತಾರೆ.

  ಎಲ್ಲಿಗೆ ಹೇಗೆ ಕರೆ ಮಾಡಬೇಕು ಎಂಬ ವಿಷಯ ಎಲ್ಲರಿಗೂ ತಿಳಿದಿರುವುದಿಲ್ಲ. ಇದರ ಮಾಹಿತಿಯನ್ನಾದರೂ ಕೊಡುವವರಿಲ್ಲ. ಹೀಗಾಗಿ ತುರ್ತು ಹಣದ ಅವಶ್ಯಕತೆ ಇರುವವರು ಕೈನಲ್ಲಿ ಕಾರ್ಡ್ ಇಟ್ಟುಕೊಂಡೂ ಪರದಾಡುವ ಸ್ಥಿತಿ ಬಂದೊದಗುತ್ತದೆ.ಬ್ಯಾಂಕ್‍ನಿಂದ ಪಡೆಯುವ ಪ್ರತಿಯೊಂದೂ ಸೌಲಭ್ಯಕ್ಕೂ ಶುಲ್ಕ ವಿಧಿಸಲಾಗುತ್ತದೆ. ಎಟಿಎಂ ವ್ಯವಸ್ಥೆಯಿಂದ ಹಿಡಿದು ಬ್ಯಾಂಕ್ ವ್ಯವಹಾರದಲ್ಲಿ ಪಾಲ್ಗೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಇಂತಿಷ್ಟು ಶುಲ್ಕಗಳು ಕಟ್ ಆಗುತ್ತಾ ಹೋಗುತ್ತವೆ. ಈ ರೀತಿ ಗ್ರಾಹಕರಿಂದ ಶುಲ್ಕ ಪಡೆದು ಸೂಕ್ತ ಮಾರ್ಗದರ್ಶನ ನೀಡದೆ ಹೋಗುವುದು ತಪ್ಪಲ್ಲವೆ ಎಂಬುದು ಹಲವು ಗ್ರಾಹಕರ ಪ್ರಶ್ನೆ.

     ಹಿಂದೆ ಬ್ಯಾಂಕುಗಳು ಗ್ರಾಹಕ ಸ್ನೇಹಿಯಾಗಿದ್ದವು. ಈಗ ಪಕ್ಕಾ ವ್ಯವಹಾರದ ಕೇಂದ್ರಗಳಾಗಿವೆ. ಅಲ್ಲಿ ಕೆಲಸ ಮಾಡುವವರು ಯಂತ್ರಗಳಂತಾಗಿದ್ದಾರೆ. ಗ್ರಾಹಕರ ಸಮಸ್ಯೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಆಲಿಸಿ ಪರಿಹರಿಸುವ ವ್ಯವದಾನಕ್ಕಿಂತ ಆ ಸಮಸ್ಯೆಯನ್ನು ವರ್ಗಾಯಿಸುವವರೇ ಹೆಚ್ಚುತ್ತಿದ್ದಾರೆ. ಇನ್ನು ಕೆಲವು ಕಡೆ ಬ್ಯಾಂಕುಗಳಲ್ಲಿ ಭಾಷೆಯೇ ಬಾರದ ಅನ್ಯ ಭಾಷಿಕರು ತುಂಬಿದ್ದಾರೆ. ಇವೆರಿಗೆಲ್ಲ ನಮ್ಮ ಕಷ್ಟಗಳೂ ಅರ್ಥವಾಗುವುದಿಲ್ಲ. ಇಂತಹ ಸಂಪತ್ತಿಗೆ ಈ ಬ್ಯಾಂಕ್ ವ್ಯವಸ್ಥೆಯನ್ನು ಆನ್‍ಲೈನ್ ವ್ಯವಸ್ಥೆಯಾಗಿ ಮಾರ್ಪಾಟು ಮಾಡಬೇಕಿತ್ತೆ ಎನ್ನುತ್ತಾರೆ ಕೆಲವರು.

    ಬ್ಯಾಂಕುಗಳಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಅದಕ್ಕಾಗಿಯೇ ಓರ್ವ ಸಿಬ್ಬಂದಿ ಇರಬೇಕು. ಇಲ್ಲವೆ ಅದಕ್ಕಾಗಿಯೇ ಪ್ರತ್ಯೇಕ ಅಧಿಕಾರಿ ನಿಗಾವಹಿಸಬೇಕು. ಎಲ್ಲದಕ್ಕೂ ಕಸ್ಟಮರ್ ಕೇರ್ ಅಂತಲೋ, ನಮಗೆ ಗೊತ್ತಿಲ್ಲ ಎಂದು ಗ್ರಾಹಕರನ್ನು ಅಲ್ಲಿಂದ ಸಾಗಿಸುವ ನೈಪುಣ್ಯತೆಯೋ ಇವೆಲ್ಲವೂ ಬ್ಯಾಂಕ್ ವ್ಯವಸ್ಥೆಯ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮವನ್ನಂತೂ ಉಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು, ಅಲ್ಲಿರುವ ಸಿಬ್ಬಂದಿ ಯೋಚಿಸುವುದು ಒಳಿತು. ಸಾರ್ವಜನಿಕರು ಬ್ಯಾಂಕ್‍ನಲ್ಲಿ ಇಡುವ ಹಣ, ಠೇವಣಿಗಳಿಂದಲೇ ಅಂತಹ ಬ್ಯಾಂಕ್ ವ್ಯವಸ್ಥೆ ಜೀವಂತವಾಗಿದೆ. ಅವರ ರಕ್ಷಣೆಯೂ ಆದ್ಯ ಕರ್ತವ್ಯ ಅಲ್ಲವೆ?

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap