ತಿಪಟೂರು
ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ
ನಗರದಲ್ಲಿ ಅಪ್ರಾಪ್ತರು ವಾಹನ ಚಲಾಯಿಸುತ್ತಿದ್ದು ಇದಕ್ಕೂ ನಮಗೂ ಸಂಬಂಧವೇ ಇಲ್ಲವೆಂಬಂತೆ ಇರುವ ಸಾರಿಗೆ ಇಲಾಖೆಯ ಅಧಿಕಾರಿಗಳು, ಆರಕ್ಷಕರು ಮತ್ತು ಹೆಚ್ಚಿನದಾಗಿ ತಲೆಕೆಡಿಸಿಕೊಳ್ಳದಿರುವುದು ಇಂದು ಒಂದೇ ವಾಹನದಲ್ಲಿ 4 ಜನಕುಳಿತುಕೊಂಡು ರೇಸಿಂಗ್, ವ್ಹೀಲಿಂಗ್ ಮಾಡುತ್ತಿರುವುದು ನಗರದಲ್ಲಿ ನಡೆಯುತ್ತಿದೆ.
ಕವಿಗಳ ಪ್ರಕಾರ 16ರ ವಯಸ್ಸು ಹುಚ್ಚುಕೋಡಿ ಮನಸ್ಸು, ಮನೋವಿಜ್ಞಾನಿಗಳ ಪ್ರಕಾರ ತಾರುಣ್ಯಾವಸ್ಥೆಯ ಕಾಲ ಎಂದು ಕರೆಸಿಕೊಳ್ಳುವ ನಮ್ಮ ಹದಿಹರೆಯದಲ್ಲಿ ಮಕ್ಕಳು ಮಾಡುತ್ತಿರುವ ಕಾರ್ಯಗಳು ಒಂದೇ ಎರಡೆ.ಈಗ ತಾನೆ ಸುರಕ್ಷಿತ ವಾತಾವರಣದಿಂದ ಹೊರಗೆ ಬಂದು ಪ್ರಪಂಚ ನೋಡುತ್ತಿರುವ ಮಕ್ಕಳ ಮನಸ್ಸು ಒಂದು ರೀತಿ ಮರ್ಕಟದ ರೀತಿ ಆಡಿಸುವುದಕ್ಕೂ ಅವರು ಆಡುವುದಕ್ಕೂ ಒಂದೇ ರೀತಿ ಇರುತ್ತದೆ. ಇನ್ನು ಹರೆಯದಲ್ಲಿ ಪೋಷಕರನ್ನು ಒಪ್ಪಿಸಿ ತಮಗೆ ಬೇಕಾದ ವಾಹನವನ್ನು ಕೊಡಿಸಿಕೊಂಡು ಕಾಲೇಜಿಗೆ ತರುವುದು ಅದರಲ್ಲಿ ಸ್ನೇಹಿತರನ್ನು ಕರೆದುಕೊಂಡು ಹೋಗುವ ಖುಷಿ ಅದನ್ನು ಅನುಭವಿಸಿದವರೆಗೆ ಗೊತ್ತಲ್ಲವೆ.
ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲವು ಮೆಕಾನಿಕ್‍ಗಳ ವಾಹನದ ಸೈಲೆನ್ಸರ್ ಬದಲಾವಣೆ, ಕರ್ಕಶ ಹಾರ್ನ್, ಚಿತ್ರವಿಚಿತ್ರ ಸ್ಟಿಕ್ಕರ್‍ಗಳನ್ನು ಮೆತ್ತಿಸಿಕೊಂಡು ಓಡಾಡುವ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ.ನಗರದ ಗಾಂಧಿನಗರ, ಇಂದಿರಾನಗರ, ಕೆ.ಆರ್.ಬಡಾವಣೆ, ಕೆರೆಗೋಡಿ ರಸ್ತೆ ಮುಖ್ಯವಾಗಿ ವೈ.ಟಿ.ರಸ್ತೆಯಲ್ಲಿ ಆಗಾಗಾ ಕಾಣಿಸಿಕೊಳ್ಳುವ ಬೇಕಾಬಿಟ್ಟಿ ವಾಹನ ಚಲಾಯಿಸಿ ಅಪಘಾತ ಉಂಟುಮಾಡುತ್ತಿದ್ದಾರೆಂದು ಸ್ಥಳೀಯರು ತಿಳಿಸುತ್ತಾರೆ.
ಇದರ ಬಗ್ಗೆ ಪತ್ರಿಕೆಗಳಲ್ಲಿ ಲೇಖನಗಳು ಬಂದಾಗ ಕೆಲವು ಪೋಷಕರು ಎಚ್ಚೆತ್ತುಕೊಂಡು ವಾಹನಗಳನ್ನು ಕೊಡುವುದಿಲ್ಲ.
ಬುಧವಾರ ಮಧ್ಯಾಹ್ನ ವೈ.ಟಿ.ರಸ್ತೆಯಲ್ಲಿ 2 ಡಿಯೋ ವಾಹನಗಳಲ್ಲಿ ಬಂದ ವಿದ್ಯಾರ್ಥಿಗಳು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದರು. ಇವರು 1 ದ್ವಿಚಕ್ರವಾಹನದಲ್ಲಿ 4 ಜನ, ಇನ್ನೊಂದು ವಾಹನದಲ್ಲಿ 3 ಜನ ಸ್ಪರ್ಧೆಗೆ ಬಿದ್ದವರಂತೆ ಬಂದು ಸ್ವಲ್ಪ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಿಕೊಂಡರು.
ಇನ್ನು ವಿದ್ಯಾರ್ಥಿಗಳು ಓಡಿಸುವ ವಾಹನದಲ್ಲಿ ಒಂದು ದರ್ಪಣಗಳಿರುವುದಿಲ್ಲ. ಇದರಿಂದ ಎಲ್ಲೆಂದರಲ್ಲಿ ನುಗ್ಗುವ ವಿದ್ಯಾರ್ಥಿಗಳು ಅಪಘಾತ ಮಾಡುತ್ತಿದ್ದು ನಾವು ಇರುವುದೇ ನಿಯಮಗಳನ್ನು ಉಲ್ಲಂಘಿಸಲು, ನಮ್ಮನ್ನು ತಡೆಯುವವರ್ಯಾರು ಎಂಬಂತೆ ವರ್ತಿಸುತ್ತಿದ್ದಾರೆ.
ಪೋಷಕರ ಪಾತ್ರ ಮಹತ್ವದ್ದು ಎಚ್ಚೆತ್ತುಕೊಳ್ಳಿ : ಇನ್ನು ಅಪ್ರಾಪ್ತರು ವಾಹನವನ್ನು ತೆಗೆದುಕೊಂಡು ಬರಲು ಮುಖ್ಯ ಕಾರಣ ಪೋಷಕರು. ಸ್ಥಳೀಯವಾಗಿ, ಹಾಲು, ತರಕಾರಿ, ನೀರು ಮುಂತಾದ ದಿನಿತ್ಯದ ಕೆಲಸಗಳಿಗಾಗಿ ಮಕ್ಕಳು ವಾಹನವಿಲ್ಲದೆ ಹೋಗುವುದೆ ಇಲ್ಲ. ಇವರು ಸುಮ್ಮನೆ ಹೋಗುವುದಿಲ್ಲ ಅತಿವೇಗವಾಗಿ ನುಗ್ಗುತ್ತಾರೆ, ಆದರೆ ಆ ವಾಹನವನ್ನು ತಡೆಯುವ ಶಕ್ತಿಯಿಲ್ಲದೆ ದಿನನಿತ್ಯ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ. ಈಗಲಾದರು ಪೋಷಕರು ಎಚ್ಚೆತ್ತುಕೊಳ್ಳದೆ ಹೋದರೆ ತಮ್ಮ ಮಕ್ಕಳ ಪ್ರಾಣದ ಜೊತೆಗೆ ಇತರೆ ಅಮಾಯಕರ ಪ್ರಾಣಹೋಗುವುದರಲ್ಲಿ ಸಂಶಯವಿಲ್ಲ.
ಕಣ್ಣುಮುಚ್ಚಿ ಕೂತ ಆರಕ್ಷಕರು :
ಇನ್ನು ಇಂತಹ ವಿದ್ಯಾರ್ಥಿಗಳು ವಾಹನವನ್ನು ಓಡಿಸದಂತೆ ತಡೆಯುವಲ್ಲಿ ಆರಕ್ಷಕರು ಗಮನಿಸಿದರು ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದೆ ಹೋಗಿ ಚಳ್ಳಹಣ್ಣು ತಿನ್ನಿಸುತ್ತಿದ್ದಾರೆ. ಇನ್ನು ಆರಕ್ಷಕರು ಇಂತಿಷ್ಟೇ ದೂರುಗಳನ್ನು ದಾಖಲಿಸಿದರೆ ಸಾಕೆಂಬಂತೆ ಇರುವುದು ವಿದ್ಯಾರ್ಥಿಗಳಿಗೆ ವರದಾನವಾಗಿದೆ.ಈಗಲಾದರು ಪೋಷಕರು, ಆರಕ್ಷಕರು ಎಚ್ಚೆತ್ತುಕೊಂಡು ಮುಂದೆ ಭಾರತ ರತ್ನಗಳಾಗಬೇಕಾದ ವಿದ್ಯಾರ್ಥಿಗಳು ಬೀದಿ ಹೆಣವಾಗದಂತೆ ನೋಡಿಕೊಳ್ಳಬೇಕಾಗಿರುವುದು ಪೋಷಕರ ಆದ್ಯ ಕರ್ತವ್ಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ