ಇತಿಹಾಸ ಪುನರ್ ರಚನೆ ಅನಿವಾರ್ಯ: ಬಿದರಿ

ದಾವಣಗೆರೆ:

       ಜನರಿಂದ ಮರೆ ಮಾಚಲಾಗಿರುವ ವಿಷಯಗಳನ್ನು ಬೆಳಕಿಗೆ ತರಲು ಇತಿಹಾಸ ಪುನರ್‍ರಚನೆ ಅನಿವಾರ್ಯವಾಗಿದೆ ಎಂದು ನಿವೃತ್ತ ಡಿಜಿಪಿ ಶಂಕರ್ ಬಿದರಿ ಪ್ರತಿಪಾದಿಸಿದರು.ಸಮೀಪದ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಅಧ್ಯಯನ ಮತ್ತು ಸಂಶೋಧನ ವಿಭಾಗದಿಂದ ‘ಭಾರತದ ಇತಿಹಾಸ ಮತ್ತು ಇತಿಹಾಸ ರಚನಾ ಶಾಸ್ತ್ರ– ಇತಿಹಾಸ ಪುನರ್‍ರಚನೆಯಲ್ಲಿರುವ ಸವಾಲುಗಳ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಯಾವುದೋ ಧೃಡೀಕರಿಸಲಾಗದ ಆಧಾರದ ಮೇಲೆ ರಚನೆಯಾಗಿರುವ ಇತಿಹಾಸವನ್ನು ನಂಬದೇ, ವಸ್ತುನಿಷ್ಠವಾಗಿರುವ ಮಾಹಿತಿಯನ್ನು ಆಧಾರವನ್ನಾಗಿ ಮಾಡಿಕೊಂಡು ಇತಿಹಾಸದ ಪುನರ್‍ರಚನೆಯ ಮೂಲಕ ಭಾರತದ ಸಂಪೂರ್ಣ ಮಾಹಿತಿ ದೊರೆಯುವಂತೆ ಮಾಡಬೇಕಾಗಿದೆ. ನಮ್ಮ ಇತಿಹಾಸ ಭಾರತದ ಪ್ರತಿಬಿಂಬ ಆಗಿರುವುದರಿಂದ ಪ್ರತಿಯೊಬ್ಬ ಭಾರತೀಯರು ಅದರ ರಕ್ಷಣೆಗೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.

          ಭಾರತ ಭೌಗೋಳಿಕವಾಗಿ ಏಕತೆ ಹೊಂದಿದ್ದರೂ ಸಹ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆಯಿಂದ ರಾಷ್ಟ್ರೀಯತೆ ಸಾಧಿಸಲಾಗಲಿಲ್ಲ. ಅಲ್ಲದೇ, ಭರತ ಖಂಡವು ಹಲವು ರಾಜರ ಆಳ್ವಿಕೆಯಿಂದಾಗಿ ವಿವಿಧ ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿದ್ದರಿಂದ ರಾಜಕೀಯ ಏಕತ್ವ ಇಲ್ಲದೇ ರಾಷ್ಟ್ರೀಯವಾದ ಕನಸಾಗಿ ಉಳಿದಿತ್ತು. ಆದರೆ, 70ರ ದಶಕದ ನಂತರ ಭಾರತೀಯರಲ್ಲಿ ರಾಷ್ಟ್ರೀಯತೆ ಎಂಬ ಪರಿಕಲ್ಪನೆ ಜಾಗೃತಗೊಂಡಿದೆ ಎಂದು ನುಡಿದರು.

        ಇಂದು ನಾವು ನಮ್ಮಲ್ಲಿರುವ ಫಲವತ್ತಾದ ಭೂಮಿ, ನದಿ, ಭೌಗೋಳಿಕ ಗುಣಲಕ್ಷಣಗಳಿಂದ ಸಂಪದ್ಭರಿತವಾಗಿದ್ದೇವೆ. ಪ್ರಾಚೀನಕಾಲದಲ್ಲಿ ಹಿಂದು ಧರ್ಮಕ್ಕೆ ಬೇರೆ ಧರ್ಮಗಳ ಪೈಪೋಟಿ ಇದ್ದದು ಸಹ ಇತಿಹಾಸದಲ್ಲಿ ದಾಖಲಾಗಿದೆ. ಪ್ರಚಲಿತ ದಿನಮಾನದಲ್ಲಿ ಅಂತಹ ಅನಾರೋಗ್ಯಕರ ವಾತವರಣವಿಲ್ಲದ ಕಾರಣ ನಾವು ಜೀವಿಸಲು ಸಾಧ್ಯವಾಗಿದೆ ಎಂದ ಅವರು, ಚಾಲುಕ್ಯ, ವಿಜಯನಗರ, ಗುಪ್ತ ಸಾಮ್ರಾಜ್ಯಗಳು 229 ವರ್ಷಗಳ ಕಾಲ ಆಳ್ವಿಕೆ ಮಾಡಿದರೂ ಇತಿಹಾಸದಲ್ಲಿ ಇದರ ಬಗ್ಗೆ ಹೆಚ್ಚಿನ ಉಲ್ಲೇಖ ಇಲ್ಲದಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

        ಭಾರತವು ಐತಿಹಾಸಿಕ, ಭೌಗೋಳಿಕ, ಸಾಂಸ್ಕತಿಕ ವಿಭಿನ್ನತೆಯನ್ನು ಹೊಂದಿರುವ ದೇಶವಾಗಿದ್ದು, ಇಲ್ಲಿ ಶಾಂತಿಯುತಜೀವನ ನಡೆಸಲು ಮುಕ್ತ ಮನಸ್ಸಿನಿಂದ ವೈವಿಧ್ಯೆತೆಯನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇಬೇಕೆಂದು ಸಲಹೆ ನೀಡಿದರು.ದ್ರಾವಿಡಿಯನ್ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗ ಮುಖ್ಯಸ್ಥ ಫ್ರೊ.ಅರವಿಂದ್‍ಕುಮರ್ ಮಾತನಾಡಿ, ನಮ್ಮ ಸಾಂಸ್ಕತಿಕ ವೈಭವವನ್ನು ಉಳಿಸಿಕೊಳ್ಳಲಿಕ್ಕಾದರೂ ಇತಿಹಾಸ ಅಧ್ಯಯನ ಮಾಡುವುದು ಅತ್ಯವಶ್ಯವಾಗಿದೆ. ಇತಿಹಾಸದ ಘಟನೆಗಳು ಬದಲಾಗದಿದ್ದರೂ ಅವುಗಳನ್ನು ನೋಡುವ ದೃಷ್ಟಿಕೋನ ಕಾಲಕಾಲಕ್ಕೆ ಬದಲಾಗುತ್ತವೆ. ಮನುಕುಲದ ಸಾಮಾಜಿಕ ವಾಸ್ತವತೆಯನ್ನು ಇತಿಹಾಸ ಕಟ್ಟಿಕೊಡಲಿದೆ ಎಂದು ತಿಳಿಸಿದರು.

       ದಾವಣಗೆರೆ ವಿವಿ ಕುಲಪತಿ ಪ್ರೊ.ಎಸ್.ವಿ.ಹಲಸೆ ಮಾತನಾಡಿ, ಭಾರತದ ಇತಿಹಾಸ ಅತೀ ಮುಖ್ಯವಾದುದ್ದಾಗಿದೆ. ನೈಜ ಸಂಗತಿಗಳನ್ನು ಅರಿಯುವುದು ನಮ್ಮ ಧ್ಯೇಯವಾಗಬೇಕು. ಇತಿಹಾಸದ ನಿಖರವಾದ ಮಾಹಿತಿಯ ಜ್ಞಾನ ಪಡೆದು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳೋಣ ಎಂದು ಕರೆ ನೀಡಿದರು.

       ದಾವಣಗೆರೆ ವಿವಿಯ ಕುಲಸಚಿವ ಪ್ರೊ.ಪಿ.ಕಣ್ಣನ್ ಮಾತನಾಡಿ, ಇತಿಹಾಸ ಎನ್ನುವುದು ಸಾಮಾನ್ಯ ವಿಜ್ಞಾನಕ್ಕಿಂತ ವಿಭಿನ್ನವಾದುದ್ದಾಗಿದೆ. ಅದನ್ನು ವಿಶೇಷವಾದ ವಿಜ್ಞಾನ ಎಂಬುದಾಗಿಯೂ ಕರೆಯುತ್ತಾರೆ. ಇತಿಹಾಸ ರಚನಾ ವಿಧಾನ ಇತಿಹಾಸಕ್ಕಿಂತ ಮುಖ್ಯವಾದದ್ದು. ಆದ್ದರಿಂದ ಇತಿಹಾಸ ರಚನೆಯಲ್ಲಿ ಅದರ ಸ್ವರೂಪ, ಉದ್ದೇಶ, ಮಹತ್ವ ಮತ್ತು ಜ್ಞಾನಕ್ಕೆ ಹೆಚ್ಚಿನ ಮಹತ್ವ ಸಿಕ್ಕಾಗ ವಸ್ತುನಿಷ್ಠ ಇತಿಹಾಸ ಹೊರಬರಲು ಸಾಧ್ಯವಾಗಲಿದೆ ಎಂದರು.ವೇದಿಕೆಯಲ್ಲಿ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ.ವೆಂಕಟ್‍ರಾವ್ ಎಂ. ಪಾಲಾಟಿ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link