ರಂಗಭೂಮಿಗೆ ಸೋಲಿಲ್ಲ, ಸವಾಲಿವೆ: ಐರಣಿ

ದಾವಣಗೆರೆ :

       ರಂಗಭೂಮಿಗೆ ಸೋಲಿಲ್ಲ, ಆದರೆ, ಹಲವು ಸವಾಲುಗಳಿವೆ ಎಂದು ಹಿರಿಯ ಪತ್ರಕರ್ತ, ರಂಗ ಕಲಾವಿದ ಬಸವರಾಜ ಐರಣಿ ಅಭಿಪ್ರಾಯಪಟ್ಟರು.

          ಇಲ್ಲಿನ ನರಹರಿ ಶೇಟ್ ಸಭಾಭವನದ ಎದುರಿನ ಶ್ರೀಕುಮಾರೇಶ್ವರ ರಂಗಮಂದಿರದಲ್ಲಿ ಬುಧವಾರ ಕರ್ನಾಟಕ ರಾಜ್ಯ ರಂಗಭೂಮಿ ಕಲಾವಿದರ ಒಕ್ಕೂಟ ಹಾಗೂ ಶ್ರೀಕುಮಾರೇಶ್ವರ ನಾಟಕ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

         ಹಲವು ಮಹನೀಯರು ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಅನೇಕ ದುಃಖ-ದುಮ್ಮಾನ, ಅವಮಾನ-ಅಪಮಾನಗಳನ್ನು ಸಹಿಸಿಕೊಂಡು, ಉಳಿಸಿ ಬೆಳೆಸಿರುವ ರಂಗಭೂಮಿಗೆ ಎಂದಿಗೂ ಸೋಲಿಲ್ಲ. ಆದರೆ, ಸವಾಲುಗಳಿವೆ. ಆ ಸವಾಲುಗಳನ್ನು ನಿವಾರಣೆಯಾದರೆ, ಪ್ರೇಕ್ಷಕರು ರಂಗಭೂಮಿಯತ್ತ ಮುಖ ಮಾಡಲಿದ್ದಾರೆ ಎಂದರು.

         ಕೆಲ ವೈಫಲ್ಯಗಳಿಂದ ರಂಗಭೂಮಿ ಮುಸುಕಾಗಿದೆಯೇ ಹೊರತು, ಅದು ಎಂದೂ ನಶಿಸಿ ಹೋಗಲು ಸಾಧ್ಯವಿಲ್ಲ. ಚಲನಚಿತ್ರ ಸೇರಿದಂತೆ ಎಂಥ ಮಾಧ್ಯಮಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಗಂಡುಕಲೆ ರಂಗಭೂಮಿಗೆ ಇದೆ ಎಂದು ನುಡಿದರು.ಈಗಾಗಲೇ ಟಿವಿ ವಾಹಿನಿಗಳಿಂದ ಪ್ರೇಕ್ಷಕರು ಬೇಸತ್ತಿದ್ದಾರೆ. ಈ ಪ್ರೇಕ್ಷಕರನ್ನು ರಂಗಭೂಮಿಯತ್ತ ಸೆಳೆಯಬೇಕಾದರೆ, ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನವನ್ನು ರಂಗಪ್ರಯೋಗಕ್ಕೆ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾಟಕ ಕಂಪೆನಿಗಳು ಪ್ರಯೋಗಶೀಲತೆಯನ್ನು ಕಾಣಬೇಕೆಂದು ಸಲಹೆ ನೀಡಿದರು.

           ಪ್ರತಿವರ್ಷ ರಂಗಾಯಣ, ನಿನಾಸಂ, ಶಿವ ಸಂಚಾರ ತಂಡಗಳು ಸೇರಿದಂತೆ ಇತರೆ ತಂಡಗಳಿಂದ 200ರಿಂದ 300 ಜನ ಕಲಾವಿದರು ತರಬೇತಿ ಪಡೆದು ಹೊರ ಬರುತ್ತಿದ್ದಾರೆ. ಆದರೆ, ರಂಗಭೂಮಿಯಲ್ಲಿ ಸರಿಯಾದ ಪ್ರೋತ್ಸಾಹ ಸಿಗದ ಕಾರಣ ಧಾರವಾಹಿ, ಸಿನಿಮಾ ಮಾಧ್ಯಗಳ ಕಡೆಗೆ ಮುಖ ಮಾಡಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

          60-70ರ ದಶಕಗಳಲ್ಲಿ ದಾವಣಗೆರೆಯಲ್ಲಿ ನಾಲ್ಕು ನಾಟಕ ಕಂಪೆನಿಗಳು ನೆಲೆಸಿದ್ದರು. ಪ್ರೇಕ್ಷಕರಿಂದ ರಂಗ ಮಂದಿರಗಳು ಭರ್ತಿಯಾಗಿ, ರಂಗಮಂದಿರ ತುಂಬಿದೆ ಎಂಬ ನಾಮಫಲಕಗಳನ್ನು ಅಳವಡಿಸಲಾಗುತ್ತಿತ್ತು. ಹೀಗಾಗಿ ಕೆಲ ಪ್ರೇಕ್ಷಕರು ಟಿಕೇಟ್‍ಗಾಗಿ ಮೂರ್ನಾಲ್ಕು ಬಾರಿ ರಂಗಮಂದಿರದ ಕಡೆ ಬರುತ್ತಿದ್ದರು. ಇಂತಹ ಸಂಭ್ರಮ ಇಂದು ಕಳೆಗುಂದಿದ್ದು, ಅದಕ್ಕೆ ಮತ್ತೆ ಚೈತನ್ಯ ತುಂಬಲು ಪ್ರಯತ್ನಶೀಲರಾದರೆ, ರಂಗಭೂಮಿಯ ಗತವೈಭವ ಮರಕಳಿಸಲು ಸಾಧ್ಯವಿದೆ ಎಂದರು.

         ಸರ್ಕಾರಿ ಬರೀ ಕಂಪನಿಗಳಿಗೆ ಅನುದಾನ, ಕಲಾವಿದರಿಗೆ ಮಾಶಾಸನ ನೀಡಿದರೆ ಸಾಲದು. ನಾಟಕ ಕಂಪನಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಆಗ್ರಹಿಸಿದರು.

             ಕಾರ್ಯಕ್ರಮ ಉದ್ಘಾಟಿಸಿದ ಶ್ರೀಕುಮಾರೇಶ್ವರ ನಾಟಕ ಸಂಘದ ಮಾಲೀಕ ಬಿ.ಕುಮಾರಸ್ವಾಮಿ ಮಾತನಾಡಿ, ವಿಶ್ವವನ್ನೇ ರಂಗಭೂಮಿಯನ್ನಾಗಿಸಿದ ಕೀರ್ತಿ ತ್ರಿಮೂರ್ತಿಗಳಿಗೆ ಸಲ್ಲಲಿದೆ. 8 ತಿಂಗಳಕಾಲ ತಿಪ್ಪೇರುದ್ರಸ್ವಾಮಿ ನಾಟಕವನ್ನು ನೋಡಿ, ಬೆಂಬಲಿಸಿದ ಕಲಾವಿದರ ಊರು ದಾವಣಗೆರಯಾಗಿದೆ. ಎ.ಬಿ.ವರದಚಾರ್ಯ, ಗುಬ್ಬಿವೀರಣ್ಣ, ಸುಬ್ಬಯ್ಯನಾಡ್, ಓಬಳೇಶ್ವರ್, ಶಾಂತಕುಮಾರ್ ಸೇರಿದಂತೆ ಹಲವರು ತಮ್ಮ ಜೀವಮಾನವನ್ನೇ ರಂಗಭೂಮಿಗಾಗಿ ಮುಡುಪಾಗಿಟ್ಟಿದ್ದಾರೆ. ಹಿರಿಯ ಕಲಾವಿದೆ ದಿ.ಚಿಂದೋಡಿಲೀಲಾ ಅವರು ನಾಟಕ ಅಕಾಡೆಮಿ ಅಧ್ಯಕ್ಷೆಯಾಗಿದ್ದಾಗ ಗುಬ್ಬಿ ವೀರಣ್ಣ ಕಂಪನಿ ಸಂಕಷ್ಟದಲ್ಲಿದ್ದಾಗ ಸಹಕಾರ ನೀಡಿ ಉಳಿಸಿ, ಬೆಳೆಸುವುದರ ಜೊತೆಗೆ ಎಲ್ಲಾ ಕಂಪೆನಿಗಳಿಗೂ ಅನುದಾನ ನೀಡಲು ಆರಂಭಿಸಿದರು ಎಂದು ಸ್ಮರಿಸಿದರು.

          ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರಂಗಭೂಮಿ ಕಲಾವಿದರ ಒಕ್ಕೂಟದ ಚಿಂದೋಡಿ ಶಂಭುಲಿಂಗಪ್ಪ, ಕಲಾವಿದರಾದ ವೀರಯ್ಯಸ್ವಾಮಿ, ರಿತ್ತಿ ಸಾವಿತ್ರಿ, ತುರವನೂರು ಷರೀಫ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link