ತಿಪಟೂರು :
ಕನ್ನಡ ನಾಟಕ, ಸಿನಿಮಾ ಮತ್ತು ಸಾಹಿತ್ಯದ ಮೂಲಕ ವೈಚಾರಿಕ ಪ್ರಜ್ಞೆಯನ್ನು ನೆಲೆಗೊಳಿಸಲು ಗಿರೀಶ್ ಕಾರ್ನಾಡ್ ಅವರು ಕಡೆವರೆಗೂ ಹೋರಾಡಿದರು ಎಂದು ಕತೆಗಾರ ಎಸ್. ಗಂಗಾಧರಯ್ಯ ತಿಳಿಸಿದರು.
ಸಮಾನ ಮನಸ್ಕರ ವೇದಿಕೆಯಿಂದ ನಡೆದ ಗಿರೀಶ್ ಕರ್ನಾಡ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಕೇವಲ ಸಾಹಿತ್ಯ ಮತ್ತು ನಾಟಕವನ್ನು ಅವರು ನೆಚ್ಚಿಕೊಳ್ಳದೆ ಹೋರಾಟವನ್ನು ಕೂಡ ಗಂಭೀರವಾಗಿ ಪರಿಗಣಿಸಿದ್ದರು. ಕನ್ನಡ ಮನಸ್ಸುಗಳನ್ನು ಸದಾ ಜಾಗೃತ ಸ್ಥಿತಿಯಲ್ಲಿಡಲು ಪ್ರಯತ್ನಿಸಿದ್ದರು. ವೈದಿಕ ಆಚರಣೆಗಳನ್ನು ವಿರೋಧಿಸುತ್ತಲೇ ಬಂದ ಅವರು ಸಾವಿನಲ್ಲೂ ಅದನ್ನು ಪಾಲಿಸಿದರು. ಡಾ. ಯು.ಆರ್. ಅನಂತಮೂರ್ತಿ ಮತ್ತು ಗಿರೀಶ್ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಾಹಿತಿಗಳು. ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಏರಿಸಿದ ಮೇರು ಪ್ರತಿಭೆಗಳು ಎಂದರು.
ರಂಗಕರ್ಮಿ ಸತೀಶ್ ತಿಪಟೂರು ಮಾತನಾಡಿ, ಕನ್ನಡ ನಾಟಕ ಲೋಕಕ್ಕೆ ಕಾರ್ನಾಡದ ಕೊಡುಗೆ ಅಪರಿಮಿತ. ನಾಟಕಗಳನ್ನು ಭಿನ್ನ ನೆಲೆಯಲ್ಲಿ ಪರಿಭಾವಿಸಿ, ಪ್ರತಿಪಾದಿಸಿದ ಅವರು ವಿಚಾರಗಳನ್ನು ವೈವಿಧ್ಯಮಯವಾಗಿ ಹೇಳಿದ್ದರು. ಕನ್ನಡ ರಂಗಭೂಮಿಗೆ ಅಮೂಲ್ಯ ಆಕರಗಳನ್ನು ಒದಗಿಸಿದ ಅವರು ಚರಿತ್ರೆಯನ್ನು ಭಿನ್ನ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ ಎಂದರು.
ಪ್ರಾಚಾರ್ಯೆ ಗೀತಾಲಕ್ಷ್ಮೀ, ಯುವ ಜನತೆಯಲ್ಲಿ ವೈದಿಕ ಮನಸ್ಸುಗಳು ವಿಷ ಬಿತ್ತುತ್ತಿರುವ ಈ ಸಂದರ್ಭದಲ್ಲಿ ಪ್ರಗತಿಪರ ಸಾಹಿತ್ಯದ ಜವಾಬ್ದಾರಿ ಹೆಚ್ಚಿದೆ ಎಂದರು.ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್, ಒಳನಾಡು ನೀರಾವರಿ ಸಮಿತಿಯ ಉಜ್ಜಜ್ಜಿ ರಾಜಣ್ಣ, ಸೌಹಾರ್ದ ತಿಪಟೂರು ಕಾರ್ಯದರ್ಶಿ ಅಲ್ಲಾ ಬಕಾಶ್, ನಾಟ್ಯ ನಿರ್ದೇಶಕಿ ವಾಣಿ ಸತೀಶ್, ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಬಿ.ಟಿ. ಕುಮಾರ್, ದಲಿತ ಮುಖಂಡ ಮಂಜುನಾಥ್ ಇದ್ದರು.