3 ಕಡೆ `ವೆಂಡರ್ ಜೋನ್’ಗೆ ಪಾಲಿಕೆ ಸಮ್ಮತಿ

ತುಮಕೂರು

      ತುಮಕೂರು ನಗರದ ಮೂರು ಪ್ರಮುಖ ಸ್ಥಳಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ “ಬೀದಿ ಬದಿ ವ್ಯಾಪಾರಿಗಳ ವಲಯ” (ವೆಂಡರ್ ಜೋನ್) ವನ್ನು ಅಭಿವೃದ್ಧಿಪಡಿಸಬಹುದೆಂದು ತುಮಕೂರು ಮಹಾನಗರ ಪಾಲಿಕೆಯು ತನ್ನ “ನಿರಾಕ್ಷೇಪಣೆ’` ವ್ಯಕ್ತಪಡಿಸಿದೆ.
ನಗರದ ಅಶೋಕ ರಸ್ತೆಯ ಖಾಸಗಿ ಬಸ್ ನಿಲ್ದಾಣ, ಮಂಡಿಪೇಟೆಯ ಮಾರಿಯಮ್ಮ ನಗರ ಮತ್ತು ಸೋಮೇಶ್ವರ ಪುರಂ ಮುಖ್ಯ ರಸ್ತೆಯಲ್ಲಿ ಅಂಡರ್‍ಪಾಸ್ ಬಳಿ ಇರುವ ಪಾಲಿಕೆಯ ಹಳೆ ಮಳಿಗೆಗಳ ಸ್ಥಳವನ್ನು “ಬೀದಿಬದಿ ವ್ಯಾಪಾರಿಗಳ ವಲಯ”ಗಳನ್ನಾಗಿ ರೂಪಿಸಲು ಗುರುತಿಸಲಾಗಿದೆ.

       ಸ್ಮಾರ್ಟ್‍ಸಿಟಿ ಕಂಪನಿಯ ಈ ಪ್ರಸ್ತಾವನೆಗೆ ಇತ್ತೀಚೆಗೆ (ಮಾರ್ಚ್ 6) ಏರ್ಪಟ್ಟಿದ್ದ ತುಮಕೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ “ನಿರಾಕ್ಷೇಪಣೆ ಪತ್ರ” ನೀಡಲಾಗಿದೆ.

        ಸದರಿ ಮೂರು ಸ್ಥಳಗಳನ್ನು ಸ್ಮಾರ್ಟ್‍ಸಿಟಿ ಕಂಪನಿಯು ಸ್ಮಾರ್ಟ್‍ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಿದೆ. ಬಳಿಕ ಅಲ್ಲಿ ನೆಲಅಂತಸ್ತಿನಲ್ಲಿ ಆಯಾ ಭಾಗದ ಬೀದಿಬದಿ ವ್ಯಾಪಾರಿಗಳಿಗೆ ನಿಯಮಾನುಸಾರ ಸೌಲಭ್ಯಗಳೊಂದಿಗೆ, ಸ್ಥಳಾವಕಾಶ ಕಲ್ಪಿಸಲಾಗುವುದು. ಇಂತಹ ವ್ಯಾಪಾರಿಗಳಿಗೆ ಪಾಲಿಕೆಯು ತನ್ನ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಬಾಡಿಗೆ ನಿಗದಿಪಡಿಸಲಿದೆ. ಇನ್ನು ಆಯಾ ಸ್ಥಳದಲ್ಲಿ ಅಗತ್ಯವಿದ್ದಲ್ಲಿ ಮೊದಲನೇ ಅಂತಸ್ತು ನಿರ್ಮಿಸಿ ಅಲ್ಲಿ ಮಳಿಗೆಗಳನ್ನು ನಿರ್ಮಿಸಿ ಖಾಸಗಿಗೆ ಅಥವಾ ಕಚೇರಿಗಳಿಗೆ ಬಾಡಿಗೆಗೆ ನೀಡಬಹುದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

       ತುಮಕೂರು ನಗರದಲ್ಲಿ “ಬೀದಿಬದಿ ವ್ಯಾಪಾರಿಗಳ ವಲಯ” ಸ್ಥಾಪಿಸಬೇಕೆಂಬ ವಿಷಯ ಬಹುದಿನಗಳಿಂದ ಚರ್ಚೆಯಲ್ಲಿದೆ. ರಸ್ತೆ ಬದಿ ಎಲ್ಲೆಂದರಲ್ಲಿ ಇರುವ ವ್ಯಾಪಾರಿಗಳನ್ನು ಅಲ್ಲಿಂದ ಸ್ಥಳಾಂತರಿಸಿ ನಿಗದಿತ ಸ್ಥಳದಲ್ಲಿ ಮಾತ್ರ ಅವರು ವ್ಯಾಪಾರ ಮಾಡುವಂತೆ ವ್ಯವಸ್ಥೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಪಾಲಿಕೆಯಿಂದ ಈಗಾಗಲೇ ಸುಮಾರು 800 ರಷ್ಟು ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ “ಗುರುತು ಪತ್ರ” ನೀಡಲಾಗಿದೆ.

        ಜೊತೆಗೆ ಬೀದಿಬದಿ ವ್ಯಾಪಾರಿಗಳಿಗೆ ತರಬೇತಿಯನ್ನೂ ಕೊಡಲಾಗಿದೆ. ಪ್ರಸ್ತುತ ಈ ನಿಟ್ಟಿನಲ್ಲಿ ಸ್ಮಾರ್ಟ್‍ಸಿಟಿ ಕಂಪನಿಯು ಮೂರು ಪ್ರಮುಖ ಸ್ಥಳಗಳಲ್ಲಿ “ವಲಯ” ರೂಪಿಸಲು ಮುಂದಾಗಿದ್ದು, ಇದಕ್ಕೆ ಪಾಲಿಕೆಯು ತನ್ನ “ನಿರಾಕ್ಷೇಪಣೆ” ನೀಡಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಉಂಟಾಗುವುದರ ಜೊತೆಗೆ, ಪಾಲಿಕೆಯ ಸಂಪನ್ಮೂಲ ಕ್ರೋಡೀಕರಣಕ್ಕೂ ಇದು ನೆರವಾಗಲಿದೆ ಎಂದು ಹೇಳಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link