ಚಿತ್ರದುರ್ಗ:
ಎಲ್ಲಾ ಜಯಂತಿಗಳನ್ನು ಬಿಟ್ಟು ಟಿಪ್ಪುಜಯಂತಿಯನ್ನು ಮಾತ್ರ ರದ್ದು ಪಡಿಸಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊದಲು ಜಾತಿರಾಜಕಾರಣ, ದ್ವೇಷದ ರಾಜಕಾರಣ ಮಾಡುವುದನ್ನು ಬಿಟ್ಟು ರಾಜ್ಯ ಅಭಿವೃದ್ದಿ ಕಡೆ ಗಮನ ಕೊಡಲಿ ಎಂದು ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ ಮನವಿ ಮಾಡಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡೆ ದಿನದಲ್ಲಿ ಟಿಪ್ಪುಜಯಂತಿಯನ್ನು ರದ್ದುಮಾಡುವ ಅವಶ್ಯಕತೆಯೇನಿತ್ತು. ರಾಷ್ಟ್ರಪತಿ ರಾಮನಾಥ್‍ಕೋವಿಂದ್‍ರವರು ಬೆಂಗಳೂರಿಗೆ ಬಂದಾಗ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ. ಜಾತಿ ರಾಜಕಾರಣ ಮಾಡಲ್ಲ ಎಂದು ಹೇಳುವ ಯಡಿಯೂರಪ್ಪನವರು ಹಳೆ ಚಾಳಿಯನ್ನು ಬಿಡದೆ. ಟಿಪ್ಪು ಜಯಂತಿಯನ್ನು ರದ್ದುಪಡಿಸಿರುವುದು ಟಿಪ್ಪು ಅಭಿಮಾನಿಗಳಿಗೆ ನೋವುಂಟು ಮಾಡಿರುವುದರಿಂದ ಆ.6 ರಂದು ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿದರು.
ರಾಕೆಟ್ ಪಿತಾಮಹ ಎಂದೆ ಮೊಟ್ಟ ಮೊದಲಿಗೆ ಹೆಸರು ಗಳಿಸಿದ್ದ ಟಿಪ್ಪು ಫೋಟೋ ಅಮೇರಿಕಾದ ನಾಸದಲ್ಲಿದೆ. ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಪಥನಗೊಳಿಸಿ ಒಬ್ಬೊಬ್ಬ ಶಾಸಕರುಗಳಿಗೆ ಐವತ್ತು ಕೋಟಿ ರೂ. ಕಾಣಿಕೆ ನೀಡಿ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪನವರು ಟಿಪ್ಪು ಒಬ್ಬ ದೇಶಭಕ್ತ ಎನ್ನುವುದನ್ನು ಮರೆತು ಜೇನುಗೂಡಿಗೆ ಕಲ್ಲು ಹಾಕಿದ್ದಾರೆ. ರಾಜ್ಯದಲ್ಲಿ ಮಳೆ-ಬೆಳೆಯಿಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಇದರ ಕಡೆ ಗಮನ ಕೊಡಬೇಕೆ ವಿನಃ ಹಿಂದು-ಮುಸ್ಲಿಂರ ನಡುವೆ ಕಿತ್ತಾಟವಿಡುವ ಕೀಳು ರಾಜಕಾರಣ ಮಾಡುವುದು ಸರಿಯಲ್ಲ. ಏಳುನೂರು ಎಂಟನೂರು ದೇವಸ್ಥಾನಗಳಿಗೆ ಮಠಗಳಿಗೆ ಟಿಪ್ಪು ಹಣ ನೀಡಿದ್ದಾರೆ. ಕನ್ನಂಬಾಡಿ ಕಟ್ಟೆಗೆ ಮೊದಲು ನೀಲನಕ್ಷೆ ಸಿದ್ದಪಡಿಸಿದವರು ಟಿಪ್ಪು. ವರ್ಷವಿಡಿ ಅವರ ಜಯಂತಿಯನ್ನು ಆಚರಿಸುತ್ತೇವೆ. ಹಠದ ರಾಜಕಾರಣ ಮಾಡುವ ಬದಲು ಅಭಿವೃದ್ದಿಗೆ ಒತ್ತು ಕೊಡಿ ಜಾತಿ ಬೇದವಿಲ್ಲದೆ ನಿಮಗೆ ಸಹಕಾರ ನೀಡುತ್ತೇವೆಂದರು.
ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್ ಮಾತನಾಡಿ ಸ್ವಾತಂತ್ರ ಸೇವಾನಿಯಾಗಿದ್ದ ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ಸರ್ಕಾರ ಘೋಷಿಸಿದ್ದನ್ನು ಸಹಿಸಿಕೊಳ್ಳಲು ಆಗದ ಈಗಿನ ಮುಖ್ಯಮಂತ್ರಿ ಅಧಿಕಾರಕ್ಕೇರಿದ್ದೇ ತಡ ಟಿಪ್ಪುಜಯಂತಿ ರದ್ದುಪಡಿಸಿರುವುದು ಯಾವ ನ್ಯಾಯ. ಮುಸ್ಲಿಂರ ಮೇಲೆ ಹಿಂದುಳಿದವರು, ದಲಿತರನ್ನು ಎತ್ತಿಕಟ್ಟುವುದು ಬಿಜೆಪಿ., ಆರ್.ಎಸ್.ಎಸ್.ನವರ ತಂತ್ರಗಾರಿಕೆ. ಟಿಪ್ಪು ಜಯಂತಿಯನ್ನು ವಿರೋಧಿಸುವವರೆ ನಿಜವಾದ ದೇಶದ್ರೋಹಿಗಳು ಎಂದು ಕಿಡಿಕಾರಿದರು.
ಟಿಪ್ಪು ವ್ಯಕ್ತಿತ್ವ ಅಮೇರಿಕಾದವರಿಗೆ ಗೊತ್ತಿದೆ. ಆದರೆ ನಮ್ಮ ದೇಶದವರಿಗೆ ಗೊತ್ತಿಲ್ಲದಿರುವುದು ನೋವಿನ ಸಂಗತಿ. ಬಿ.ಎಸ್. ಯಡಿಯೂರಪ್ಪನವರಿಗೆ ನಿಜವಾಗಿಯೂ ತಾಕತ್ತಿದ್ದರೆ ಬಸವ ಜಯಂತಿ, ಅಂಬೇಡ್ಕರ್ ಜಯಂತಿ ಹಾಗೂ ಕನಕ ಜಯಂತಿಯನ್ನು ರದ್ದುಪಡಿಸಲಿ ಎಂದು ಸವಾಲು ಹಾಕಿದ ಮುರುಘರಾಜೇಂದ್ರ ಒಡೆಯರ್ ಓಟಿನ ರಾಜಕಾರಣ ಮಾಡುವುದನ್ನು ಮೊದಲು ನಿಲ್ಲಸಲಿ ಎಂದು ಒತ್ತಾಯಿಸಿದರು.
ದಲಿತ ನಾಯಕ ಎಂ.ಜಯಣ್ಣ ಮಾತನಾಡುತ್ತ ರಾಜ್ಯದ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿ ಇನ್ನು ಸಚಿವ ಸಂಪುಟ ರಚನೆಯೇ ಆಗಿಲ್ಲ. ಆಗಲೆ ಅವಸರ ಅವಸರವಾಗಿ ಟಿಪ್ಪು ಜಯಂತಿಯನ್ನು ರದ್ದುಪಡಿಸುವ ಅಗತ್ಯತೆ ಏನಿತ್ತು? ಸಂಪುಟ ಸಹೋದ್ಯೋಗಿಗಳೊಂದಿಗೆ ಗಂಭೀರವಾಗಿ ಚರ್ಚಿಸಿ ನಂತರ ತೀರ್ಮಾನ ತೆಗೆದುಕೊಳ್ಳಬಹುದಿತ್ತು. ಇದರ ಹಿಂದೆ ಕೋಮುವಾದಿಗಳ ಕುತಂತ್ರವಡಗಿದೆ ಎಂದು ಹೇಳಿದರು.
ನಮ್ಮದು ಜಾತ್ಯತೀತ ದೇಶ. ಎಲ್ಲರ ಭಾವನೆಗಳನ್ನು ಗೌರವಿಸಬೇಕು. ಟಿಪ್ಪು ಮುಸಲ್ಮಾನ ಜಾತಿಗೆ ಸೇರಿದವನು ಎನ್ನುವ ಕಾರಣಕ್ಕಾಗಿ ಜಯಂತಿಯನ್ನೇ ರದ್ದುಪಡಿಸಿರುವುದು ಯಾರ ಮನ ಮೆಚ್ಚಿಸಲು ಎನ್ನುವುದನ್ನು ಬಿ.ಎಸ್.ವೈ.ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಇದೊಂದು ದಲಿತ, ಅಲ್ಪಸಂಖ್ಯಾತರ ವಿರುದ್ದ ತೆಗೆದುಕೊಂಡಿರುವ ಆತುರದ ತೀರ್ಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯವಾದಿ ಸಿ.ಶಿವುಯಾದವ್ ಮಾತನಾಡಿ ಇದು ರಾಜಪ್ರಭುತ್ವವೋ, ಪ್ರಜಾಪ್ರಭುತ್ವವೋ ಎನ್ನುವುದು ಗೊತ್ತಾಗುತ್ತಿಲ್ಲ. ಏಕಚಕ್ರಾಧಿಪತಿಯಂತೆ ವರ್ತಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಜಾತಿ ವಿರೋಧಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಕೊಟ್ಟವರ್ಯಾರು ಎಂದು ಖಾರವಾಗಿ ಪ್ರಶ್ನಿಸಿದರು.ಮುದಾಸಿರ್ ನವಾಜ್, ಬಾಳೆಕಾಯಿ ಶ್ರೀನಿವಾಸ್, ಟಿ.ಶಫಿವುಲ್ಲಾ, ಸೈಯದ್ ಇಸ್ಮಾಯಿಲ್, ಹೆಚ್.ಶಬ್ಬೀರ್‍ಭಾಷ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.