ಚಳ್ಳಕೆರೆ
ರಾಷ್ಟ್ರದಲ್ಲಿ ರೈತ ಸಮುದಾಯವನ್ನು ಹೊರತು ಪಡಿಸಿದರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದೇ ಕಾರ್ಮಿಕ ವರ್ಗ. ರಾಷ್ಟ್ರದಾದ್ಯಂತ ಕೋಟ್ಯಾಂತರ ಕಾರ್ಮಿಕರು ಹಗಲಿರುಳು ಶ್ರಮವಹಿಸುತ್ತಿರುವ ಹಿನ್ನೆಲೆಯಲ್ಲಿ ದೇಶ ಉತ್ತಮ ಸ್ಥಿತಿಯಲ್ಲಿದೆ. ಕಾರ್ಮಿಕ ವರ್ಗ ಕೈಕಟ್ಟಿ ಕುಳಿತರೆ ಇಡೀ ದೇಶದ ಸ್ಥಿತಿಯೇ ಬದಲಾಗುತ್ತದೆ. ಆದರೆ, ರಾಷ್ಟ್ರವನ್ನು ಆಳುತ್ತಿರುವ ಕೇಂದ್ರ ಸರ್ಕಾರಕ್ಕೆ ಕಾರ್ಮಿಕ ಶಕ್ತಿಯ ಬಗ್ಗೆ ಅರಿವಿಲ್ಲವೆಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸೈಯದ್ ಮುಜೀಬ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಅವರು, ಬುಧವಾರ ಇಲ್ಲಿನ ಶ್ರಮಿಕರ ಭವನದಲ್ಲಿ ಸಿಐಟಿಯು ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರ ಬೇಡಿಕೆಗಳ ಕುರಿತು 2019ರ ಜನವರಿ 8 ಮತ್ತು 9 ಎರಡು ದಿನಗಳ ಕಾಲ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಕರೆ ನೀಡುರುವ ಹಿನ್ನೆಲೆಯಲ್ಲಿ ಮುಷ್ಕರ ಯಶಸ್ಸಿಕುರಿತು ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಸುಧೀರ್ಘ ಚರ್ಚೆ ನಡೆಸಲು ಸಹ ಈ ಸಮಾವೇಶವನ್ನು ಹಮ್ಮಿಕೊಂಡಿದೆ. ಕಾರ್ಮಿಕ ಸಮೂಹ ಸಂಘಟನೆಯಾಗದ ಹೊರತು ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯೆ ವಹಿಸುತ್ತಲೇ ಹೋಗುತ್ತದೆ. ಆದ್ದರಿಂದ ಎರಡು ದಿನಗಳ ರಾಷ್ಟ್ರ ವ್ಯಾಪಿ ಮುಷ್ಕರದಲ್ಲಿ ಸಂಘದ ಎಲ್ಲಾ ಮುಖಂಡರು ಹಾಗೂ ಸಂಘದ ಸದಸ್ಯರು ತಪ್ಪದೆ ಭಾಗವಹಿಸುವಂತೆ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ, ಕಳೆದ ಹಲವಾರು ವರ್ಷಗಳಿಂದ ಕಾರ್ಮಿಕ ಸಮುದಾಯದ ಬೇಡಿಕೆಗಳ ಈಡೇರಿಕೆ ಕುರಿತು ಹಂತ ಹಂತವಾಗಿ ಪ್ರತಿಭಟನೆ ನಡೆಸಿದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಮುಂಬರುವ ದಿನಗಳ ಹೋರಾಟ ಫಲಪ್ರದವಾಗಬೇಕಾದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಅಧ್ಯಕ್ಷ ಕೆ.ವಿ.ವೀರಭದ್ರಪ್ಪ ಮಾತನಾಡಿ, ತಾಲ್ಲೂಕಿನಲ್ಲಿಯೇ ಸಾವಿರಾರು ಹಮಾಲರು ಕಾರ್ಯನಿರ್ವಹಿಸುತ್ತಿದ್ದರೂ ಅವರ ಬೇಡಿಕೆಯ ಬಗ್ಗೆ ಸರ್ಕಾರ ನಿರ್ಲಕ್ಷ್ಯೆ ವಹಿಸಿದೆ. ನಾವು ಹೋರಾಟ ಮಾಡದೇ ಮೌನವಾಗಿದ್ದಲ್ಲಿ ಮುಂದೆ ನಮ್ಮ ಮಕ್ಕಳ ಭವಿಷ್ಯಕ್ಕೆ ಅಪಾಯವಿದೆ. ಅದ್ದರಿಂದ ಪ್ರತಿಯೊಬ್ಬ ಕಾರ್ಮಿಕರು ಸಂಘದ ಸಲಹೆ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಡಿ.ಎಂ.ಮಲಿಯಪ್ಪ, ತಾಲ್ಲೂಕು ಉಪಾಧ್ಯಕ್ಷ ಕೆ.ಎಂ.ಮಹಂತೇಶ್, ಖಜಾಂಚಿ ಟಿ.ನಿಂಗಣ್ಣ, ಕೆ.ಬಿ.ಜಯಣ್ಣ, ಗಂಗಮ್ಮ, ಇಂದಿರಮ್ಮ, ಎಸ್.ರಾಜಣ್ಣ, ಸಿ.ಕೆ.ಗೌಸ್‍ಪೀರ್ ಎಚ್.ಒ.ನಾಗರಾಜು ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/26CLK2P.gif)