ಹರಪನಹಳ್ಳಿ:
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬೆಲವತ್ತಹಳ್ಳಿ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಪಟ್ಟಣದ ಕಲಾವಿದ ಚನ್ನೇಶ ಬಡಿಗೇರ ಅವರು ಸುಂದರ ತೇರು ತಯಾರಿಸಿದ್ದಾರೆ.ಸುಮಾರು 21 ಅಡಿ, 10 ಅಡಿ ಅಗಲದ ತೇರು ಇದಾಗಿದೆ. ಕಳೆದ ಆರು ತಿಂಗಳಿಂದ ಕಲಾವಿದ ಚನ್ನೇಶ ಅವರು ಈ ತೇರು ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೆ ಸಹೋದರ ವೀರೇಶ್ ಬಡಿಗೇರ ಹಾಗೂ ಆರು ಜನ ಸಹಾಯಕರಾಗಿ ಕೆಲಸ ಮಾಡಿದ್ದಾರೆ.
ಹಸ್ತಬಯಲು (ಎಂಟು ಮೂಲೆ) ಮಾದರಿಯ ತೇರು ಆಗಿದ್ದು, ಮೂರುವರೆ ಟನ್ ತೂಕದ್ದಾಗಿದೆ. ಸಾಗವಾನಿ, ಬೇವು, ಮತ್ತಿ ಕಟ್ಟಿಗೆ ತಯಾರಿಸಿದರೆ, ಗೋಪುರವನ್ನು ಕಬ್ಬಿಣದಿಂದ ತಯಾರಿಸಲಾಗಿದೆ. ತೇರು ನಿರ್ಮಾಣದ ಕಾರ್ಯ ಸಂಪೂರ್ಣಗೊಂಡಿದ್ದು, ಭಾನುವಾರ ಬೆಲವತ್ತಹಳ್ಳಿ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಲಿದೆ ಎಂದು ಚನ್ನೇಶ್ ಬಡಿಗೇರ ತಿಳಿಸಿದ್ದಾರೆ.