10 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸ

ತುರುವೇಕೆರೆ

      ಸರ್ಕಾರದಿಂದ 10 ಕೋಟಿ ರೂಪಾಯಿಗಳ ಅನುದಾನದಲ್ಲಿ ಕ್ಷೇತ್ರದಾದ್ಯಂತ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಶಾಸಕ ಮಸಾಲಜಯರಾಮ್ ಹೇಳಿದರು.

       ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಗುರುವಿನ ಮಠದ ಗ್ರಾಮದಲ್ಲಿ ಸೋಮವಾರ ಜಿ.ಮಲ್ಲೇನಹಳ್ಳಿಯಿಂದ ಗುರುವಿನ ಮಠದ ಮಾರ್ಗವಾಗಿ ಬೀಸ್ನಹಳ್ಳಿಯವರೆಗೆ ಸಿಎಂಜಿಆರ್‍ವೈ ಯೋಜನೆಯಡಿ 1270 ಮೀಟರ್ ಉದ್ದದ 97 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ಕ್ರಿಯಾಯೋಜನೆಯಲ್ಲಿ ಇರುವ ಕೆಲಸಗಳನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ ಹಣ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ.

      ಕ್ಷೇತ್ರ ವ್ಯಾಪ್ತಿಯ ವಾಸುದೇವರ ಅಣೆಕಟ್ಟೆಯಿಂದ ಕಲೂರು ಕೆರೆಯ ಅಣೆಕಟ್ಟು ನಿರ್ಮಿಸಲು 10 ಕೋಟಿ 76 ಲಕ್ಷ ರೂಪಾಯಿಗಳ ಅನುದಾನ ತರಲಾಗಿದೆ ಎಂದ ಅವರು, ಕಳೆದ 15 ವರ್ಷಗಳ ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳೆ ನಡೆದಿಲ್ಲ ಹಾಗೂ ನಾನು ಅಧಿಕಾರದಲ್ಲಿ ಇಲ್ಲದಿದ್ದರೂ 400 ವಿದ್ಯುತ್ ಪರಿವರ್ತಕಗಳನ್ನು ತಮ್ಮ ಪಕ್ಷದ ಮುಖ್ಯಮಂತ್ರಿಗಳಿಂದ ರೈತರಿಗೆ ಕೊಡಿಸುವಲ್ಲಿ ಸಫಲವಾಗಿದ್ದೇನೆಂದು ತಾಲ್ಲೂಕಿನ ಜನತೆಯನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಜಿ ಶಾಸಕರು ಮಾಡುತ್ತಿದ್ದಾರೆಂದು ಆರೋಪಿಸಿದರು.

       ಮಾಜಿ ಶಾಸಕ ಎಚ್.ಬಿ.ನಂಜೇಗೌಡ ಮಾತನಾಡಿ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಟ್ಟಣದ ದಬ್ಬೇಘಟ್ಟ ರಸ್ತೆ ಅಗಲೀಕರಣವನ್ನು ಕೆಲ ವಿರೋಧಗಳ ನಡುವೆಯೂ ಚಾಲನೆ ನೀಡಿ ಪಟ್ಟಣಗರಿಂದ ಪ್ರಶಂಸೆಗೆ ಮಸಾಲಜಯರಾಮ್ ಪಾತ್ರರಾಗಿದ್ದಾರೆ. ಜೆಡಿಎಸ್ ಕ್ಷೇತ್ರವಾಗಿರುವ ದಬ್ಬೇಘಟ್ಟ ಹೋಬಳಿಯನ್ನು ಬಿಜೆಪಿ ಕ್ಷೇತ್ರವಾಗಿ ಪರಿವರ್ತಿಸಲು ಎಲ್ಲರೂ ಸಂಕಲ್ಪ ಮಾಡಬೇಕಿದೆ ಎಂದರು.
ವಕೀಲ ಮುದ್ದೇಗೌಡ ಮಾತನಾಡಿ ಒಕ್ಕಲಿಗರಿರುವ ಬಿಜೆಪಿಯಲ್ಲಿ ಶಾಸಕರಾಗಿ ರಾಜ್ಯದಲ್ಲಿ ಬಿಜೆಪಿಯಿಂದ ಗೆದ್ದು ಬಂದ ವ್ಯಕ್ತಿಗಳು. ಇಬ್ಬರೆ ಹಾಗಾಗಿ ಮೈತ್ರಿ ಸರ್ಕಾರ ಮುರಿದರೆ ಖಂಡಿತವಾಗಿಯೂ ಮಸಾಲಜಯರಾಮ್ ಸಚಿವರಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

         ಗುರುವಿನಮಠದ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯುತ್ ಪರಿವರ್ತಕ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಿದರು. ನಂತರ ಇತ್ತೀಚೆಗೆ ನಿಧನರಾದ ಸೈನಿಕರಿಗೆ ಮೌನಾಚರಣೆ ಸಲ್ಲಿಸಿದರು. ನಂತರ ಶಾಸಕ ಮಸಾಲಜಯರಾಮ್ ಮತ್ತು ಮಾಜಿ ಶಾಸಕ ಎಚ್.ಬಿ.ನಂಜೇಗೌಡ ಹಾಗೂ ಮುಖಂಡ ಕೊಂಡಜ್ಜಿ ವಿಶ್ವನಾಥ್ ಅವರುಗಳನ್ನು ಗ್ರಾಮಸ್ಥರು ಅಭಿನಂದಿಸಿದರು.

         ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ವಿ.ಟಿ.ವೆಂಕಟರಾಮ್, ಟಿಎಪಿಸಿಎಂಎಸ್ ಅಧ್ಯಕ್ಷ ಮೈನ್ಸ್ ರಾಜು, ಗ್ರಾ.ಪಂ.ಸದಸ್ಯರಾದ ಹರೀಶ್, ಕುಬೇರ, ಮುಖಂಡರುಗಳಾದ ಕಡೇಹಳ್ಳಿ ಸಿದ್ದೇಗೌಡ, ಶಂಕರೇಗೌಡ, ಬೋರೇಗೌಡ, ಸುರೇಶ್, ಅಮ್‍ಆದ್ಮಿ ಕೃಷ್ಣಮೂರ್ತಿ, ಬಿ.ಎಂಎಸ್.ಉಮೇಶ್, ಮುದ್ದೇಗೌಡ, ಕಾಂತರಾಜು, ಕೆಂಪೇಗೌಡ, ಜಯಣ್ಣ, ಪ್ರದೀಪ್, ಕೋಳಿ ವೆಂಕಟೇಶ್, ಮಂಜೇಗೌಡ, ಬೋಜೇಗೌಡ, ಚಿಕ್ಕೇಗೌಡ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link