ಭಿನ್ನಮತ ಶಮನ ದಿನೇಶ್ ಗುಂಡೂರಾವ್ ಬೆನ್ನಿಗೆ …!!

ಬೆಂಗಳೂರು

     ಮಂತ್ರಿಮಂಡಲ ಪುನಾರಚನೆ, ನಿಗಮ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ನಂತರ ಉಂಟಾಗಿರುವ ಬಂಡಾಯ, ಭಿನ್ನಮತ ಶಮನಗೊಳಿಸುವ ಜವಾಬ್ದಾರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಹೆಗಲಿಗೆ ಬಿದ್ದಿದೆ.

         ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊಣೆ ನೋಡಿಕೊಳ್ಳುತ್ತಿರುವ ಕೆ.ಸಿ. ವೇಣುಗೋಪಾಲ್ ಅವರುವಿಂದು ನಗರಕ್ಕೆ ಆಗಮಿಸುತ್ತಿದ್ದು, ಅತೃಪ್ತರ ಜತೆ ಚರ್ಚೆ ನಡೆಸಿ ಸಮಾಧಾನಪಡಿಸಲು ಮುಂದಾಗಲಿದ್ದಾರೆ.

        ಒಂದು ಕಡೆ ರಾಮಲಿಂಗಾ ರೆಡ್ಡಿ ಅವರಂತಹ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ಬೆಂಬಲಿಗರ ಹೋರಾಟ ತೀವ್ರಗೊಂಡಿದೆ. ಇನ್ನುಳಿದಂತೆ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಸುಧಾಕರ್, ನಾಗೇಂದ್ರ, ಅಜಯ್ ಸಿಂಗ್ ಮತ್ತಿತರರ ಅಸಮಾಧಾನವನ್ನು ಸಹ ಕಡೆಗಣಿಸುವಂತಿಲ್ಲ. ಪಕ್ಷ ಮತ್ತು ಸರ್ಕಾರದ ರಥ ಒಂದೇ ಹಳಿಯ ಮೇಲೆ ನಡೆಯುವಂತೆ ಮಾಡುವ ಮಹತ್ತರ ಜವಾಬ್ದಾರಿ ಈ ನಾಯಕರ ಮೇಲಿದ್ದು, ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಕೆರಳಿದೆ.

        ಸಚಿವ ಸ್ಥಾನದಿಂದ ತಮ್ಮನ್ನು ಪದಚ್ಯುತಗೊಳಿಸಿದ ಬೆಳವಣಿಗೆಯಿಂದ ರಮೇಶ್ ಜಾರಕಿಹೊಳಿ ತೀವ್ರ ಅಸಮಾಧಾನಗೊಂಡಿದ್ದು, ಅವರ ಮುಂದಿನ ದಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕಾಗಿ ಅವರು ನಾಲ್ಕು ದಿನಗಳ ಕಾಲಾವಕಾಶ ಕೇಳಿದ್ದಾರೆ. ಇನ್ನು ಪಕ್ಷೇತರ ಶಾಸಕ ಶಂಕರ್ ಅವರನ್ನು ಸಂಪುಟದಿಂದ ಕೈಬಿಟ್ಟ ನಂತರ ಅವರು ಮುಂದೇನು ಮಾಡುತ್ತಾರೆ ಎಂದು ಬಹಿರಂಗವಾಗಿ ಹೇಳಿಲ್ಲ. ಈ ಇಬ್ಬರನ್ನೂ ಸಮಾಧಾನಪಡಿಸುವ ಜವಾಬ್ದಾರಿಯನ್ನು ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರಿಗೆ ವಹಿಸಿದ್ದಾರೆ ಎನ್ನಲಾಗಿದೆ. ಇನ್ನು ಬಹುಕಾಲದಿಂದಲೂ ತಮ್ಮ ಆಪ್ತ ಬಳಗದಲ್ಲಿರುವ ಶಂಕರ್ ಅವರನ್ನು ಸಹ ಸಂತೈಸುವುದು ಸಿದ್ದರಾಮಯ್ಯ ಅವರಿಗೆ ಅಷ್ಟೇನು ದೊಡ್ಡ ಸಮಸ್ಯೆಯಾಗದು.

         ಸತೀಶ್ ಜಾರಕಿಹೊಳಿ ಮೂಲಕ ರಮೇಶ್ ಜಾರಕಿಹೊಳಿ ಅವರನ್ನು ಕಟ್ಟಿ ಹಾಕಲು ಸಿದ್ದರಾಮಯ್ಯ ಈಗಾಗಲೇ ತಂತ್ರಗಾರಿಕೆ ರೂಪಿಸಿದ್ದಾರೆ. ಇನ್ನು ರಾಮಲಿಂಗಾ ರೆಡ್ಡಿ ಅವರಂತಹ ಹಿರಿಯ ನಾಯಕರನ್ನು ನೇರವಾಗಿಯೇ ಹೈಕಮಾಂಡ್ ನಿಭಾಯಿಸಲು ಉದ್ದೇಶಿಸಿದೆ. ಅವರ ಅಸಮಾಧಾನಕ್ಕೆ ಕೆ.ಸಿ. ವೇಣುಗೋಪಾಲ್ ಮೂಲಕ ಮದ್ದು ಕಂಡು ಹಿಡಿಯುವ ಸಾಧ್ಯತೆಯಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link