ಕುಣಿಗಲ್
ಬಾಲ್ಯದ ಆಟಗಳು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ನೆನಪಿಸುವ ಹಾಗೂ ಉಳಿಸಿ ಬೆಳೆಸುವ ಮತ್ತು ಇಂದಿನ ಮಕ್ಕಳಿಗೆ ಪರಿಚಯಿಸುವ ಕ್ರೀಡೆಯೇ ಗ್ರಾಮೀಣ ಕ್ರೀಡಾ ಉತ್ಸವದ ಉದ್ದೇಶ ಎಂದು ಅಖಿಲ ಕರ್ನಾಟಕ ಡಾ|| ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಹಾಗೂ ಪುರಸಭಾ ಸದಸ್ಯರಾದ ರಂಗಸ್ವಾಮಿ ತಿಳಿಸಿದರು.
ಸೋಮವಾರ ಜಿಕೆಬಿಎಂಎಸ್ ಮೈದಾನದಲ್ಲಿ ಅಖಿಲ ಕರ್ನಾಟಕ ಡಾ|| ರಾಜ್‍ಕುಮಾರ್ ಕನ್ನಡ ಅಭಿಮಾನಿಗಳ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ಕ್ರೀಡಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಸ್ಪರ್ಧೆಗಾಗಿ ಅಲ್ಲ ಮನರಂಜನೆಗಾಗಿ ಗ್ರಾಮೀಣ ಭಾಗಗಳ ಕ್ರೀಡೆಗಳನ್ನು ಪ್ರೋತ್ಸಾಹಿಸುವುದೆ ಮುಖ್ಯ ಉದ್ದೇಶ, ಈ ಕ್ರೀಡೋತ್ಸವವನ್ನು ಪ್ರತಿ ವರ್ಷವೂ ತಪ್ಪದೆ ನಡೆಸಲಾಗುತ್ತದೆ ಎಂದರು.
ಪುರಸಭಾ ಸದಸ್ಯರಾದ ಶಂಕರ್ ಮಾತನಾಡಿ, ಇದು ನಿಜವಾದ ಗ್ರಾಮೀಣ ಕ್ರೀಡೆಯ ದರ್ಶನವಾಗಿದೆ. ಕಂಪ್ಯೂಟರ್‍ನಲ್ಲಿ ಆಟವಾಡುವ ಮಕ್ಕಳಿಗಂತೂ ಈ ಕ್ರೀಡೋತ್ಸವ ಗ್ರಾಮೀಣ ಕ್ರೀಡೆಗಳ ಕಲಿಕೆಗೂ ಅವಕಾಶವಾಗಲಿದೆ ಎಂದರು. ಪ್ರತಿವರ್ಷ ಈ ಕ್ರೀಡೋತ್ಸವವನ್ನು ಡಾ|| ರಾಜ್ ಸಂಘವು ಹಮ್ಮಿಕೊಳ್ಳುತ್ತಿದ್ದು ಚಿಕ್ಕವರಿಂದ ಹಿಡಿದು ದೊಡ್ಡವರಿಗೂ 1500 ಜನರು ಭಾಗವಹಿಸಲಿದ್ದು ಹೆಣ್ಣು, ಗಂಡು, ಮಕ್ಕಳು, ದೊಡ್ಡವರೆನನ್ನದೆ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ.
ಕ್ರೀಡೆಯಲ್ಲಿ ಗಿಲ್ಲಿದಂಡ, ಗೋಲಿ, ಮಡಿಕೆಒಡೆಯುವ ಸ್ಪರ್ಧೆ, ಬುಗುರಿ, ಹಗ್ಗ ಜಗ್ಗಾಟ, ಟೈರಾಟ, ಕುಂಟೆಬಿಲ್ಲೆ, ನದಿ ದಡ, ಗೋಣಿ ಚೀಲ ಓಟ, ಅಳಗುಣಿ ಮಣೆ, ಲಗೋರಿ ಹೀಗೆ ಹಲವಾರು ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಆದ್ಯತೆ ನೀಡಿ ನಡೆಸಲಾಗುತ್ತಿದೆ.
ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ರೀತಿಯ ತಿಂಡಿಗಳಾದ ರೆವೆಉಂಡೆ, ಖರ್ಜಿಕಾಯಿ, ಭತಾಸು, ಕಡ್ಲೆಪುರಿ, ಕಡ್ಲೆಕಾಯಿ, ಚಕ್ಕುಲಿ, ನಿಂಬೆಹುಳಿ ಪೆಪ್ಪರ್ ಮೆಂಟ್ ಹೀಗೆ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಉಚಿತವಾಗಿ ತಿನ್ನುವಷ್ಟು ಸ್ಟಾಲ್‍ಗಳ ಮೂಲಕ ವಿತರಿಸಲಾಗುತ್ತಿತ್ತು. ನೋಡುಗರಿಗಂತೂ ಹಳ್ಳಿಯ ಸೊಗಡಿನ ಹಿಂದಿನ ಕಾಲದ ಆಟಗಳು ನೆನಪಿಸುತ್ತಿದ್ದವು .
ಬಂದವರೆಲ್ಲಾ ಕ್ರೀಡೆಯಲ್ಲಿ ಭಾಗವಹಿಸುವುದರೊಂದಿಗೆ ತಯಾರಿಸಿದ ತಿಂಡಿಗಳನ್ನು ಉಚಿತವಾಗಿ ಪಡೆದು ಸವಿಯುತ್ತಿದ್ದರು. ಕ್ರೀಡಾ ಉತ್ಸವದಲ್ಲಿ ಪುರಸಭಾ ಸದಸ್ಯರಾದ ಜಗದೀಶ್, ಕನ್ನಡಸೇನೆಯ ಅಧ್ಯಕ್ಷರಾದ ಶ್ರೀನಿವಾಸ್, ಬಣ್ಣದ ಲೋಕದ ಸಾಂಸ್ಕøತಿಕ ವೇದಿಕೆ ಅಧ್ಯಕ್ಷರಾದ ದಿನೇಶ್ ಕುಮಾರ್, ಮಾಜಿ ತಾ.ಪಂ. ಅಧ್ಯಕ್ಷರಾದ ಎಸ್.ಆರ್.ಚಿಕ್ಕಣ್ಣ, ಶ್ರೀನಿವಾಸ್, ರಮೇಶ್, ರಂಗನಾಥ್, ಡಾ|| ಜಿ.ಪರಮೇಶ್ವರ್ ಯುವಸೇನೆಯ ರಾಜ್ಯಾಧ್ಯಕ್ಷರಾದ ನಗುತಾ ರಂಗನಾಥ್, ಡಾ|| ರಾಜ್ ಕುಮಾರ್ ಸಂಘದ ಕಾರ್ಯದರ್ಶಿ ಬೆಟ್ಟಸ್ವಾಮಿ, ಖಜಾಂಚಿ ನರಸಿಂಹ ಮೂರ್ತಿ ಇನ್ನು ಹಲವಾರು ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
