ತುಮಕೂರು
ಲೋಕಸಭಾ ಕ್ಷೇತಲ್ಲಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಕ್ಷೇತ್ರಕ್ಕೆ ಯಾವುದೇ ಅಭಿವೃದ್ದಿ ಕೆಲಸ ಮಾಡದೆ ವೈಯುಕ್ತಿಕ ನಿಂದನೆಯಲ್ಲಿಯೇ ಕಾಲ ಕಳೆದಿದ್ದು, ಇಂತಹ ವ್ಯಕ್ತಿಗೆ ಕೊರಟಗೆರೆ ವಿಧಾನ ಸಭಾಕ್ಷೇತ್ರದಲ್ಲಿ ಠೇವಣಿ ಕಳೆದುಕೊಳ್ಳ್ಳುವಂತೆ ಸಮ್ಮಿಶ್ರ ಪಕ್ಷಗಳ ಕಾರ್ಯಕರ್ತರು ಒಟ್ಟಿಗೆ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಪಟ್ಟಣದ ಊರ್ಡಿಗೆರೆ ವೃತ್ತದ ಜಾಮೀಯಾ ಸಮುದಾಯ ಭವನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಮೈತ್ರಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಬಿಜೆಪಿ ಅಭ್ಯರ್ಥಿಜಿ.ಎಸ್ ಬಸವರಾಜು ತನ್ನ ಕಾಲಾವಧಿಯಲ್ಲಿ ಕ್ಷೇತ್ರಕ್ಕೆ ಅಭಿವೃದ್ದಿ ಕೆಲಸ ಮಾಡದೆ ಕಾಲಹರಣ ಮಾಡಿ ಈಗ ಅಭಿವೃದ್ದಿಯ ಮಂತ್ರ ಪಠಿಸುತ್ತಿರುವುದು ನಾಚಿಕೆ ಗೇಡಿನ ವಿಚಾರ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷದ ಈಶ್ವರಪ್ಪ, ಸಿ.ಟಿ.ರವಿ, ಅನಂತಕುಮಾರ ಹೆಗಡೆ ಕ್ಷೇತ್ರದ ಅಭಿವೃದ್ದಿ ಮಾಡದೆ ವಿರೋಧ ಪಕ್ಷದವರ ವೈಯಕ್ತಿಕ ಮತ್ತು ಮನ ನೋಯಿಸುವುದು ಬಿಜೆಪಿ ಪಕ್ಷದ ಸಂಸ್ಕøತಿಯನ್ನು ತೋರಿಸುತ್ತದೆ. ದೇಶದ ಬಡಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿದ ಮೋದಿಯ ಹೆಸರಿನ ಮೇಲೆ ಮತ ಕೇಳುವುದೊಂದೆ ಅವರ ಅಭಿವೃದ್ದಿ ಕೆಲಸವಾಗಿದೆ ಎಂದು ಆರೋಪ ಮಾಡಿದರು.
ರಾಜ್ಯ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ತುಮಕೂರು ಕ್ಷೇತ್ರದಲ್ಲಿ ಪ್ರಮುಖವಾಗಿ ಇಬ್ಬರು ವ್ಯಕ್ತಿಗಳು ಕಣದಲ್ಲಿದ್ದಾರೆ. ಒಬ್ಬರು ದೇಶ ಕಂಡ ರೈತ ಪರ ಹೋರಾಟಗಾರ ಮಾಜಿ ಪ್ರಧಾನಿ ದೇವೇಗೌಡರು ಮತ್ತೊಬ್ಬ ದೇಶದಲ್ಲೆ ಅತ್ಯಂತ ಸುಳ್ಳುಗಾರ ಜಿ.ಎಸ್.ಬಸವರಾಜು. ಇಬ್ಬರಲ್ಲಿ ದೇವೆಗೌರಿಗೆ ಬಸವರಾಜು ಸರಿದೂಗುವುದೇಇಲ್ಲ, ಜಿ.ಎಸ್.ಬಸವರಾಜು ಜಿಲ್ಲಾದ್ಯಂತ ಮೋದಿ ನೋಡಿ ನನಗೆ ಮತ ಹಾಕಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಇವರ ಸಾಧನೆ ಏನು? ಇವರಿಗೆ ಮತದಾರ ಯಾವ ಮಾನದಂಡ ಇಟ್ಟು ಮತ ಹಾಕಬೇಕು ಎಂದು ಬಸವರಾಜು ವಿರುದ್ದ ಕಿಡಿಕಾರಿದರು.
ಇನ್ನು ಮಾಜಿ ಶಾಸಕ ಸುರೇಶ್‍ಗೌಡ ಬುದ್ದಿ ಸ್ಥಿಮಿತವಿಲ್ಲದೆ ಮಾತನಾಡುತ್ತಿದ್ದು, ಅವರಿಗೆ ಆರೊಗ್ಯ ತಪಾಸಣೆ ಅವಶ್ಯಕತೆ ಇದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಮಹಾನ್ ಸುಳ್ಳುಗಾರ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದ್ದು, ತುಮಕೂರು ಲೋಕಸಭಾ ಕ್ಷೇತ್ರದಿಂದ ದೇವೆಗೌಡರವರನ್ನು ಅತಿ ಹೆಚ್ಚು ಅಂತರದ ಮತಗಳಿಂದ ಗೆಲ್ಲಿಸುವ ಜವಾಬ್ದಾರಿ ಎರಡು ಪಕ್ಷಗಳ ಕಾರ್ಯಕರ್ತರ ಮೇಲಿದೆ ಎಂದರು.
ಶಿರಾ ಕ್ಷೇತ್ರದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ನಮ್ಮ ಭಾರತದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡ ಮೇಲು ಮಾಡಿದ ಕೀರ್ತಿ ಮೋದಿಗೆ ಸಲ್ಲುತ್ತದೆ. ದೇಶದಲ್ಲಿ ಸಾವಿರಾರು ಫ್ಯಾಕ್ಟರಿಗಳು ಮುಚ್ಚಿಕೊಂಡು ವಿದೇಶಿ ಕಂಪನಿಗಳು ತಮ್ಮ ದೇಶಗಳಿಗೆ ಹಿಂದಿರುಗಿ ಹೋಗಿವೆ. ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಮೋದಿ ಸರಕಾರದಲ್ಲಿ ಅತಿ ಹೆಚ್ಚಿನ ಸಮಸ್ಯೆ ಎದುರಾಗಿದೆ. ಇಂತಹವರು ನಮಗೆ ಮತ್ತೊಮ್ಮೆ ಬೇಕಾ ಎಂದು ಮತದಾರರು ಯೋಚನೆ ಮಾಡಬೇಕು ಎಂದು ಹೇಳಿದರು.
ಕೊರಟಗೆರೆ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ, ಮೈತ್ರಿ ಸರಕಾರದ ಲೋಕಸಭಾ ಅಭ್ಯರ್ಥಿ ದೇವೇಗೌಡರಿಗೆ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಬೆಂಬಲಿಸಿ ದೇಶದ ಸೇವೆಗೆ ಅವಕಾಶ ಮಾಡಿಕೊಡಬೇಕು. ರಾಜ್ಯದರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿದ ಮುಖ್ಯಮಂತ್ರಿ ಕುಮಾರಣ್ಣನಿಗೆ ಶಕ್ತಿಯನ್ನು ನಾವೆಲ್ಲರೂ ನೀಡಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಶಾಸಕ ವೀರಭದ್ರಯ್ಯ, ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿತೂಪಲ್ಲಿ, ಮಾಜಿ ಸಚಿವ ಜಯಚಂದ್ರ, ಮಾಜಿ ಶಾಸಕರುಗಳಾದ ರಫೀಕ್‍ಅಹಮದ್, ಷಫೀಅಹಮದ್, ತಿಮ್ಮರಾಯಪ್ಪ, ನಿಂಗಪ್ಪ, ಆರ್.ನಾರಾಯಣ್, ಜೆಡಿಎಸ್ ಮಾಧ್ಯಮ ವಕ್ತಾರ ರಮೇಶ್‍ಬಾಬು, ಜಿ.ಪಂ.ಅಧ್ಯಕ್ಷೆ ಲತಾ, ಸದಸ್ಯರಾದ ಪ್ರೇಮಾ, ಶಿವರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಂಗಮುತ್ತಯ್ಯ, ಕಾರ್ಯಾಧ್ಯಕ್ಷ ನರಸಿಂಹರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಕೆಪಿಸಿಸಿ ಸದಸ್ಯ ಜಿ.ವೆಂಕಟಾಚಲಯ್ಯ, ಮುರಳಿಧರ ಹಾಲಪ್ಪ, ಕೆ.ಎಂ.ಎಫ್ ನಿರ್ದೇಶಕ ಈಶ್ವರಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಜಿಲ್ಲಾ ಕಾರ್ಯದರ್ಶಿ ಕವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.