ದಾವಣಗೆರೆ:
ನಾವು ನೀರು-ಮಣ್ಣು ಕದ್ದು ನಮ್ಮ ಸಂಸ್ಥೆಗಳಿಗೆ ಹಾಕಿಕೊಳ್ಳುವವರಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಹೊನ್ನಾಳಿ ತಾಲೂಕಿನ ಮಾದನಬಾವಿ, ದಾನಿಹಳ್ಳಿ, ಕೊಡಚಿಗೊಂಡನಹಳ್ಳಿ, ದೊಡ್ಡೇತ್ತಿನಹಳ್ಳಿ, ಕಂಚಿನಹಳ್ಳಿ, ಕೊಡಿಕೊಪ್ಪ, ಗಂಜೇನಹಳ್ಳಿ ಸೇರಿದಂತೆ ಹಲವೆಡೆ ಬಿರುಸಿನ ಪ್ರಚಾರ ನಡೆಸಿ ಜನರೊಂದಿಗೆ ಮಾತನಾಡಿದ ಅವರು, ನೆನ್ನೆ ಚೀಲೂರಿನಲ್ಲಿ ಕಾಂಗ್ರೆಸ್ಸಿಗರು ಸಂಸದರು ಒಂದು ಪುಟ್ಟಿ ಮಣ್ಣು ಸಹ ಹಾಕಿಲ್ಲ ಎಂದಿದ್ದಾರೆ. ಅವರು ಇನ್ನೊಮ್ಮೆ ಬಂದು ಮಾತನಾಡಿದರೇ ಹೇಳಿ, ಸಿದ್ದೇಶ್ವರ್ ಅವರು ನೀರು-ಮಣ್ಣು ಕದಿಯುವವರಲ್ಲ. ರಸ್ತೆಯಲ್ಲಿ ಮಣ್ಣು ಹಾಕುವವರಲ್ಲ. ಸಿಸಿ ರಸ್ತೆ ಮಾಡಿಸುವವರು, ಕೆರೆ ತುಂಬಿಸುವವರು ಎಂಬುದನ್ನು ನೀವೇ ಹೇಳಿ ಎಂದು ಸಭಿಕರಿಗೆ ಕರೆ ನೀಡಿದರು.
ಬಡ ಕುಟುಂಬದಲ್ಲಿ ಹುಟ್ಟಿದ ಹಿಂದುಳಿದ ವರ್ಗಕ್ಕೆ ಸೇರಿರುವ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡುವ ಮೂಲಕ ಇಡೀ ಪ್ರಪಂಚಕ್ಕೆ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ಹಲವು ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆಂದು ಹೇಳಿದರು.
ಸ್ವಚ್ಛ ಭಾರತ ಯೋಜನೆಯ ಮೂಲಕ ಪ್ರತಿ ಮನೆಗಳಿಗೂ ಶೌಚಾಲಯ ನಿರ್ಮಿಸಿ ಕೊಟ್ಟಿದ್ದಾರೆ. ಸರ್ವರಿಗೂ ಸೂರು ಯೋಜನೆಯಡಿಯಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ನೀಡಿ ಮನೆ ಹಾಗೂ ನಿವೇಶನ ಇರುವವರಿಗೆ ಮನೆ ನಿರ್ಮಿಸಿಕೊಡುವುದು ನರೇಂದ್ರ ಮೋದಿಯವರ ಕನಸಾಗಿದ್ದು, ಈಗಾಗಲೇ ಒಂದು ಕೋಟಿ ಮನೆ ಮಂಜೂರು ಆಗಿವೆ. ಹೊಗೆ ಮುಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ಬಡ ಕುಟುಂಬಳಿಗೆ ಉಚಿತ ಅಡಿಗೆ ಅನಿಲ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಜಿಲ್ಲೆಯಲ್ಲಿಯೇ 1 ಲಕ್ಷಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಅನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಬಿಪಿಎಲ್ ಕುಟುಂಬದ ಸದಸ್ಯರಿಗೆ 5 ಲಕ್ಷದ ವರೆಗೆ ಆರೋಗ್ಯ ವಿಮೆ ನೀಡಲಾಗುತ್ತಿದ್ದು, ಈಗಾಗಲೇ 1,20,000 ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡುಗಳನ್ನು ಜಿಲ್ಲೆಯಲ್ಲಿ ಅಂಚೆಯ ಮೂಲಕ ಕಳುಹಿಸಲಾಗಿದೆ. ತಲುಪದವು ದಾಖಲೆಗಳೊಂದಿಗೆ ಆರೋಗ್ಯ ಕೇಂದ್ರಕ್ಕೆ ಹೋಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಕೃಷಿ ಸಮ್ಮಾನ್ ಯೋಜನೆಯಡಿಯಲ್ಲಿ ಸಣ್ಣ ರೈತರಿಗೆ ವರ್ಷಕ್ಕೆ ಆರು ಸಾವಿರ ರೂ. ನೀಡುತ್ತಿದ್ದು, ಮುಂದೆ ನಾವು ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ರೈತರಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದರು.
ನಾನು ಈಗಾಗಲೇ ಮೂರ್ನಾಲ್ಕು ಬಾರಿ ಹಳ್ಳಿ-ಹಳ್ಳಿಗಳಿಗೂ ಭೇಟಿ ನೀಡಿ, ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಉದ್ದೇಶದಿಂದ ಈ ಬಾರಿ ಕಮಲದ ಚಿಹ್ನೆಯ ಬಟನ್ ಒತ್ತುವ ಮೂಲಕ ನನ್ನನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಕೂಲಂಬಿ ಬಸವರಾಜ್, ಶಾಂತರಾಜ್ ಪಾಟೀಲ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ