ಬೆಂಗಳೂರು
ನಗರದಲ್ಲಿ ಹೆಚ್ಚಾಗುತ್ತಿರುವ ರೌಡಿ ಚಟುವಟಿಕೆಗಳನ್ನು ಮಟ್ಟಹಾಕಿ ಅಕ್ರಮ ದಂಧೆಗೆ ಕಡಿವಾಣ ಹಾಕಲು ರೌಡಿ ಮುಲಾಮ, ಜೆಸಿಬಿ ನಾರಾಯಣ, ತನ್ವೀರ್, ಮಹಿಮಾ, ದಡಿಯಾ ಮಹೇಶ, ದೂದ್ ರವಿ, ರಾಬ್ರಿಗಿರಿ, ಕುಮ್ಮಿ ಸೇರಿ 20ಕ್ಕೂ ಹೆಚ್ಚು ರೌಡಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ಕಚೇರಿಗೆ ಕರೆತಂದು ವಿಚಾರಣೆ ನಡೆಸಿದರು.
ದಾಳಿಯಲ್ಲಿ ರೌಡಿಗಳ ಮನೆಯಲ್ಲಿ 1 ನಕಲಿ ಪಿಸ್ತೂಲು, 7 ಚಾಕು, 2 ತಲ್ವಾರ್, 2 ಲಕ್ಷ 20 ಸಾವಿರ ಮೌಲ್ಯದ ನಿಷೇಧಿತ ನಕಲಿ ನೋಟುಗಳು, 2 ನೋಟು ಎಣಿಕಾ ಯಂತ್ರ, 300 ಗ್ರಾಂ ಚಿನ್ನ, 3 ಕಾರುಗಳು, 120ಕ್ಕೂ ಹೆಚ್ಚು ಯಮಿನೊ ನಿವೇಶನಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯಕ್ತ ಸುನೀಲ್‍ಕುಮಾರ್ ತಿಳಿಸಿದ್ದಾರೆ.
ದಾಳಿ ವೇಳೆ ರೌಡಿ ದಡಿಯಾ ಮಹೇಶ್ ಮನೆಯಲ್ಲಿ 6 ಕೋಬ್ರಾ ಸ್ಪ್ರೇ ಟಿನ್ ಹಾಗೂ ನಕಲಿ ಪಿಸ್ತೂಲು ಪತ್ತೆಯಾಗಿದ್ದು, ಇತ್ತೀಚೆಗೆ ಶ್ರೀರಾಮ ಸಂಘಟನೆ ಸೇರಿರುವ ಆತನ ಪತ್ನಿ ರೌಡಿ ಯಶಸ್ವಿನಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಲು ರಚಿಸಲಾಗಿದ್ದ ಸಿಸಿಬಿ ಅಧಿಕಾರಿಗಳ 11 ವಿಶೇಷ ತಂಡಗಳು ಗುರುವಾರ ಮುಂಜಾನೆಯಿಂದ ಏಕಕಾಲಕ್ಕೆ ರೌಡಿಗಳ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ ವಶಕ್ಕೆ ತೆಗೆದುಕೊಂಡಿರುವ ರೌಡಿಗಳ ಅಪರಾಧ ಕೃತ್ಯಗಳು, ರಿಯಲ್ ಎಸ್ಟೇಟ್ ದಂಧೆ, ಅಕ್ರಮ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಠಾಣೆಗಳಿಂದ ಮಾಹಿತಿ ತರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೌಡಿಗಳ ಮನೆ ಮೇಲೆ ಅಲ್ಲದೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಕ್ಲಬ್‍ಗಳು, ರಿಕ್ರಿಯೇಶನ್ ಕ್ಲಬ್‍ಗಳು, ಜೂಜಾಟದ ಅಡ್ಡೆ, ಕ್ರಿಕೆಟ್ ಬೆಟ್ಟಿಂಗ್ ದಂಧೆ ಮೇಲೆಯೂ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮನೆಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಹಣ ಹಾಗೂ ಮಾರಕಾಸ್ತ್ರ ವಶಪಡಿಸಿಕೊಂಡಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಸಿಸಿಬಿ ಡಿಸಿಪಿ ಗಿರೀಶ್ ಅವರು ರೌಡಿಗಳ ಪರೇಡ್ ಮಾಡಿದ್ದಾರೆ. ರೌಡಿಗಳ ಪರೇಡ್ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ