ಬೆಂಗಳೂರು :
ಕೇಂದ್ರದ ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಜಾಫರ್ ಷರೀಫ್ ಬೆಂಗಳೂರಿನಲ್ಲಿಂದು ನಿಧನ ಹೊಂದಿದರು.ಅವರಿಗೆ 85 ವರ್ಷ ವಯಸ್ಸಾಗಿತ್ತು. ಪಿ.ವಿ. ನರಸಿಂಹರಾವ್ ಸಂಪುಟದಲ್ಲಿ ಜಾಫರ್ ಷರೀಫ್ ಅವರು 1991ರಲ್ಲಿ ಅವರು ರೈಲ್ವೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ರಾಜ್ಯದ ರೈಲ್ವೆ ಅಭಿವೃದ್ಧಿಗೆ ನೀಡಿದ ಕೊಡುಗೆ ಅನನ್ಯವಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯಿಲಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯದ ರೈಲ್ವೆ ಅಭಿವೃದ್ಧಿಗೆ, ವಿಶೇಷವಾಗಿ ಗೇಜ್ ಪರಿವರ್ತನೆಗೆ ಅವರು ಕೊಟ್ಟ ಕೊಡುಗೆಯನ್ನು ಎಂದೂ ಮರೆಯುವಂತಿಲ್ಲ, ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಸಾರ್ವಜನಿಕ ಜೀವನದಲ್ಲಿ ಸಂಯಮ ಕಾಪಾಡಿಕೊಂಡು ಬಂದ ಆದರ್ಶ ರಾಜಕಾರಿಣಿ ಎಂದು ಶೋಕ ವ್ಯಕ್ತಪಡಿಸಿದ್ದಾರೆ. ಜಾಫರ್ ಷರೀಫ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕಾರಿಣಿಗಳು, ಸಮಾಜದ ವಿವಿಧ ಗಣ್ಯವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ.
ಚಳ್ಳಕೆರೆ ಕರೀಂ ಜಾಫರ್ ಷರೀಫ್ (ಸಿ.ಕೆ.ಜಾಫರ್ ಷರೀಫ್) ಸಂಸದರಾಗಿ, ರೈಲ್ವೆ ಸಚಿವರಾಗಿ ರಾಜ್ಯದ ಜನರಿಗೆ ಚಿರಪರಿಚಿತರು. ರೈಲ್ವೆ ಮಾರ್ಗಗಳ ಅಭಿವೃದ್ಧಿ, ಗೇಜ್ ಪರಿವರ್ತನೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ನಿಧನ ಯಲಹಂಕ ರೈಲ್ವೆ ನಿಲ್ದಾಣದ ಸಮೀಪದ ರೈಲು ಮತ್ತು ಗಾಲಿ ಕಾರ್ಖಾನೆ ಸ್ಥಾಪನೆ ಹಿಂದೆ ಜಾಫರ್ ಷರೀಫ್ ಶ್ರಮವಿದೆ.
ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜಾಫರ್ ಷರೀಫ್ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಪಿ.ವಿ.ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ (1991-1995) ಸಿ.ಕೆ.ಜಾಫರ್ ಷರೀಫ್ ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2004ರ ಲೋಕಸಭೆ ಚುನಾವಣೆಯಲ್ಲಿ ನಿವೃತ್ತ ಪೆÇಲೀಸ್ ಅಧಿಕಾರಿ ಸಾಂಗ್ಲಿಯಾನ ವಿರುದ್ಧ ಸೋಲು ಅನುಭವಿಸಿದ್ದರು. ನಂತರ ಅವರು ರಾಜಕೀಯವಾಗಿ ಮೇಲೇಳಲೇ ಇಲ್ಲ.
ಕಾಂಗ್ರೆಸ್‍ನ ಪ್ರಭಾವಿ ಮುಖಂಡರಾಗಿದ್ದ ಷರೀಫ್ ಅವರು ಪಿ.ವಿ.ನರಸಿಂಹ ಅವರ ಆಡಳಿತದಲ್ಲಿ ಕೇಂದ್ರ ರೈಲ್ವೆ ಸಚಿವರಾಗಿ ರಾಜ್ಯ ಸೇರಿದಂತೆ ದೇಶಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷ ಹೋಳಾದಾಗ ಇಂದಿರಾಗಾಂಧಿಯವರ ಪರವಾಗಿ ನಿಂತು ಪ್ರಬಲವಾಗಿ ಪ್ರತಿಪಾದಿಸಿದ್ದ ಜಾಫರ್ ಷರೀಫ್ ಅವರು ಇಂದಿರಾ ಕುಟುಂಬಕ್ಕೆ ಅತ್ಯಂತ ಆತ್ಮೀಯರಾಗಿದ್ದರು. ರೈಲ್ವೆ ಸಚಿವರಾಗಿದ್ದಾಗ ಬೆಂಗಳೂರಿನ ರೈಲ್ವೆ ಅಚ್ಚು ಮತ್ತು ಗಾಲಿ ಕಾರ್ಖಾನೆ ರೂವಾರಿ, ಮೀಟರ್‍ಗೇಜ್‍ಗಳನ್ನು ಬ್ರಾಡ್‍ಗೇಜ್‍ಗಳಿಗೆ ಪರಿವರ್ತಿಸುವ ಮಹತ್ವದ ನಿರ್ಧಾರ ಕೈಗೊಂಡರು.
ಹಲವು ಹೊಸ ರೈಲ್ವೆ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಪ್ರಭಾವಿ ಹಾಗೂ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದರು. ಎಸ್.ಎಂ.ಕೃಷ್ಣ, ಸಿದ್ದರಾಮಯ್ಯನವರ ಆಡಳಿತದಲ್ಲಾಗಲಿ ತಮ್ಮ ಪಕ್ಷದವರು ಎಂದು ನೋಡದೆ ನೇರ ಹಾಗೂ ನಿಷ್ಠೂರವಾಗಿ ಮಾತನಾಡುತ್ತಿದ್ದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಮೊಮ್ಮಗ ರೆಹಮಾನ್ ಷರೀಫ್‍ಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಹಲವು ರಾಜಕೀಯ ಬಿಕ್ಕಟ್ಟುಗಳನ್ನು ಬಗೆಹರಿಸಲು ಹೈಕಮಾಂಡ್ ಜೊತೆ ಚರ್ಚಿಸುತ್ತಿದ್ದರು.
ಇಂದಿರಾಗಾಂಧಿಯವರ ಆಪ್ತರೂ ಆಗಿದ್ದ ಅವರು ರಾಜೀವ್‍ಗಾಂಧಿಯವರೊಂದಿಗೂ ಕೂಡ ಅನ್ಯೋನ್ಯ ಸಂಬಂಧ ಇಟ್ಟುಕೊಂಡಿದ್ದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಅವರಿಗೆ ಅತ್ಯಂತ ಪ್ರಿಯವಾದ ಕ್ಷೇತ್ರ. ಈ ಕ್ಷೇತ್ರದಲ್ಲಿ ಸತತವಾಗಿ ಆರು ಬಾರಿ ಗೆದ್ದು ಲೋಕಸಭೆ ಪ್ರವೇಶಿಸಿದ್ದರು. ಕೇವಲ ಅಲ್ಪಸಂಖ್ಯಾತರಿಗಷ್ಟೇ ಮುಖಂಡರಾಗಿರದೆ, ಎಲ್ಲ ವರ್ಗದವರ ಹಿತ ಚಿಂತಕರಾಗಿದ್ದರು.
ಮಾಜಿ ಪ್ರಧಾನಿ ದೇವೇಗೌಡರ ಜೊತೆ ಕೂಡ ಆತ್ಮೀಯ ಸಂಬಂಧ ಹೊಂದಿದ್ದರು. ದೇಶದಲ್ಲಿ ಜಾತ್ಯತೀತ ಶಕ್ತಿಗಳು ಬಲಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಅವರ ಚಿಂತನೆ ಇತ್ತು. ತಮ್ಮ ಸಂಸದರ ನಿಧಿಯನ್ನು ಹಲವು ಶಾಲಾ ಕಾಲೇಜುಗಳ ಕೊಠಡಿಗಳ ನಿರ್ಮಾಣ, ಕಂಪ್ಯೂಟರ್ ಕೇಂದ್ರಗಳ ಸ್ಥಾಪನೆ, ಅನಾಥ ಮಕ್ಕಳ ಸಂಸ್ಥೆಗಳಿಗೆ ನೆರವು ನೀಡುವುದಕ್ಕೆ ಬಳಸುತ್ತಿದ್ದರು. ತಮ್ಮೊಂದಿಗೆ ಹಲವು ನಾಯಕರುಗಳನ್ನು ಹುಟ್ಟುಹಾಕಿದ್ದರು. ಅಲ್ಪಸಂಖ್ಯಾತ ಮುಖಂಡರಷ್ಟೇ ಅಲ್ಲ, ಇತರೆ ವರ್ಗದ ನಾಯಕತ್ವ ಇರುವವರನ್ನು ಗುರುತಿಸಿ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಬೆಳೆಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ