ಚುನಾವಣೆ ಬಳಿಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಸಜ್ಜಾದ ಸಾರಿಗೆ ಸಂಸ್ಥೆ…!!!

ಬೆಂಗಳೂರು

       ಲೋಕಸಭೆ ಚುನಾವಣೆಯ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆಯಾಗುವುದು ನಿಶ್ಚಿತ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

       ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಪ್ರತಿ ಲೀಟರ್ ಡೀಸೆಲ್‍ಗೆ ಮೂರು ರೂ ಹೆಚ್ಚಳವಾಗಿದೆ.ಇದರಿಂದಾಗಿ ಪ್ರತಿ ತಿಂಗಳು ಸಾರಿಗೆ ಸಂಸ್ಥೆ ಹದಿನೈದು ಕೋಟಿ ರೂಗಳಷ್ಟು ಹೊರೆ ಹೊರಬೇಕಿದೆ ಎಂದರು.

       ಅಂದರೆ ವರ್ಷಕ್ಕೆ ನೂರಾ ಎಂಬತ್ತು ಕೋಟಿ ರೂಪಾಯಿಗಳಷ್ಟು ಹೊರೆ ಬೀಳಲಿದ್ದು ಇದನ್ನು ಭರಿಸುವ ಶಕ್ತಿ ಸಂಸ್ಥೆಗಿಲ್ಲ.ಹೀಗಾಗಿ ಬಸ್ ಪ್ರಯಾಣ ದರವನ್ನು ಶೇಕಡಾ ಹದಿನೆಂಟರಷ್ಟು ಹೆಚ್ಚಳ ಮಾಡಲು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದರು.

        ಅವರು ಕೂಡಾ ಲೋಕಸಭಾ ಚುನಾವಣೆಯವರೆಗೆ ಸುಮ್ಮನಿರಲು ಸೂಚಿಸಿದ್ದಾರೆ.ಆದರೆ ಲೋಕಸಭಾ ಚುನಾವಣೆಯ ನಂತರ ಬಸ್ ಪ್ರಯಾಣ ದರವನ್ನು ಏರಿಕೆ ಮಾಡದೆ ಸುಮ್ಮನಿರಲು ಸಾಧ್ಯವೇ ಇಲ್ಲ ಎಂದು ನುಡಿದರು.

      ಈ ಮಧ್ಯೆ ಸಾರಿಗೆ ಸಂಸ್ಥೆಗೆ ಮೂರು ಸಾವಿರ ಹೊಸ ಬಸ್ಸುಗಳನ್ನು ಖರೀದಿಸಲಾಗುವುದು ಎಂದ ಅವರು,ಆ ಪೈಕಿ ಒಂದೂವರೆ ಸಾವಿರ ಬಸ್ಸುಗಳು ಕೆ.ಎಸ್.ಆರ್.ಟಿ.ಸಿ ಗೆ ಹಾಗೂ ಒಂದೂವರೆ ಸಾವಿರ ಬಸ್ಸುಗಳು ಬಿ.ಎಂ.ಟಿ.ಸಿ ಗೆ ಲಭ್ಯವಾಗಲಿವೆ ಎಂದರು.

      ಕಂಪ್ಯೂಟರ್ ಖರೀದಿ ಹಗರಣ,ರಗಜಿನ್ ಖರೀದಿ ಹಗರಣ ಸೇರಿದಂತೆ ವಿವಿಧ ಹಗರಣಗಳಲ್ಲಿ ಸಾರಿಗೆ ಸಂಸ್ಥೆಯ ಮೂವತ್ತಕ್ಕೂ ಹೆಚ್ಚು ಮಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

       ಇದೇ ರೀತಿ ಸಾರಿಗೆ ಇಲಾಖೆಯಲ್ಲಿ ಮತ್ತಷ್ಟು ಹಗರಣಗಳು ನಡೆದಿದ್ದು ಈ ಎಲ್ಲವನ್ನೂ ಸೇರಿಸಿ ಸಮಗ್ರ ತನಿಖೆ ನಡೆಸಲಾಗುವುದು ಎಂದ ಅವರು,ಎಲೆಕ್ಟ್ರಿಕ್ ಬಸ್‍ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಅಧಿಕಾರಿಗಳು ನಡೆಸಿದ ಪ್ರಯತ್ನವೂ ಒಂದು ಹಗರಣ ಎಂದರು.

      ಸಾರಿಗೆ ಸಂಸ್ಥೆಯ ವತಿಯಿಂದ ಎಂಭತ್ತು ಎಲೆಕ್ಟ್ರಿಕ್ ಬಸ್ಸುಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಬೇಕು ಎಂಬ ಹಿಂದಿನ ಸರ್ಕಾರದ ಯೋಚನೆಗೆ ಪೂರಕವಾಗಿ ಕೆಲ ಅಧಿಕಾರಿಗಳು ಎಂಭತ್ತರ ಬದಲಿಗೆ ನೂರೈವತ್ತು ಎಲೆಕ್ಟ್ರಿಕ್ ಬಸ್ಸುಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಮುಂದಾಗಿದ್ದರು.

     ಕೇಳಿದರೆ ಡೀಸೆಲ್ ಪ್ರತಿ ಲೀಟರ್‍ಗೆ ಐವತ್ತೆಂಟು ರೂಪಾಯಿ.ಆದರೆ ಎಲೆಕ್ಟ್ರಿಕ್ ಬಸ್ಸುಗಳು ಮೂವತ್ತೇಳು ರೂಪಾಯಿಯಲ್ಲಿ ಅಷ್ಟೇ ದೂರ ಓಡುತ್ತವೆ ಎಂದು ಹೇಳಿದ್ದರು.ಆದರೆ ನಾನು ಬಂದ ಮೇಲೆ ಖಾಸಗಿಯವರಿಂದ ಬಾಡಿಗೆ ಆಧಾರದ ಮೇಲೆ ಎಲೆಕ್ಟ್ರಿಕ್ ಬಸ್ಸುಗಳನ್ನು ಪಡೆಯುವ ಯೋಜನೆಯನ್ನು ರದ್ದುಗೊಳಿಸಿದೆ.

      ಯಾಕೆಂದರೆ ಬಸ್ಸು ಓಡಿಸಲಿ,ಬಿಡಲಿ ದಿನಕ್ಕೆ ಇನ್ನೂರು ಕಿಮೀ ಲೆಕ್ಕದಲ್ಲಿ ಅವರಿಗೆ ಬಾಡಿಗೆ ಹಣ ಪಾವತಿಸುವುದು ಸರಿಯಲ್ಲ.ಹೀಗೆ ಮಾಡುವ ಮೂಲಕ ಸರ್ಕಾರದ ನೆತ್ತಿಯ ಮೇಲೆ ವಿನಾಕಾರಣ ವಾರ್ಷಿಕ ಮೂವತ್ತೈದು ಕೋಟಿ ರೂಪಾಯಿಗಳ ಹೊರೆ ಹೇರಲು ಹೊರಟಿದ್ದರು.ಅದನ್ನು ತಡೆಗಟ್ಟಲಾಗಿದೆ ಎಂದು ಹೇಳಿದರು.

       ಇಷ್ಟಾದರೂ ಬಾಡಿಗೆ ಆಧಾರದ ಮೇಲೆ ಅಗತ್ಯಕ್ಕಿಂತ ಹೆಚ್ಚು ಬಸ್ಸುಗಳನ್ನು ಪಡೆಯಲು ಹೊರಟಿದ್ದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟ ಪಡಿಸಿದರು.

       ಇದಕ್ಕೂ ಮುನ್ನ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನಕ್ಕೆ ಸಾರಿಗೆ ಸಂಸ್ಥೆಯ ವತಿಯಿಂದ ಇಪ್ಪತ್ತೈದು ಲಕ್ಷ ರೂಪಾಯಿಗಳ ಚೆಕ್ ಅನ್ನು ಅವರು ವಿತರಿಸಿದರು.ಮತ್ತು ಪ್ರತಿಷ್ಟಾನದ ಪ್ರಮುಖರಾದ ಹಂ.ಪ.ನಾಗರಾಜಯ್ಯ ಹಾಗೂ ಶ್ರೀಮತಿ ಕಮಲಾ ಹಂಪನಾ ಅವರು ಈ ಚೆಕ್ ಅನ್ನು ಸ್ವೀಕರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap