ಶ್ರೀ ಮರುಳಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ

ಚಿಕ್ಕನಾಯಕನಹಳ್ಳಿ

       ತಾಲ್ಲೂಕು ಕಸಬಾ ಹೋಬಳಿಯ ಹಲವೆಡೆ ವಿವಿಧ ದೇವರುಗಳ ಅಗ್ನಿಕೊಂಡೋತ್ಸವಗಳು ವಿಜೃಂಭಣೆಯಿಂದ ಜರುಗಿದವು.ಪಟ್ಟಣದ ಹೊರವಲಯ ಭಾವನಹಳ್ಳಿ ಬಳಿಯ ನಿರ್ವಾಣೇಶ್ವರ ಗದ್ದುಗೆಯಲ್ಲಿ ನಿರ್ವಾಣೇಶ್ವರಸ್ವಾಮಿ ಅಗ್ನಿಕೊಂಡೋತ್ಸವ, ಪಟ್ಟಣದ ಬಳಿ ಇರುವ ದಬ್ಬೇಘಟ್ಟದ ಶ್ರೀ ಮರುಳಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಅಗ್ನಿ ಕುಂಡೋತ್ಸವ ವಿಜೃಂಭಣೆಯಿಂದ ನಡೆಯಿತು ಹಾಗೂ ಅಣೆಕಟ್ಟೆ ಬಸವೇಶ್ವರ ಸ್ವಾಮಿ ಅಗ್ನಿಕೊಂಡೋತ್ಸವ ಜರುಗಿತು.

       ನಿರ್ವಾಣೇಶ್ವರ ಅಗ್ನಿಕೊಂಡೋತ್ಸವದಲ್ಲಿ ಪಟ್ಟಣದ ಗ್ರಾಮದೇವತೆ ಎಲ್ಲಮ್ಮದೇವಿ, ಬ್ಯಾಲದಕೆರೆ ಕರಿಯಮ್ಮದೇವಿ, ದುರ್ಗಮ್ಮದೇವಿ ಭಾಗವಹಿಸಿದ್ದವು. ಪಟ್ಟದ ನಂದಿಯನ್ನು ಕಿಚ್ಚು ಆಯಿಸುವುದರೊಂದಿಗೆ ಅಗ್ನಿಕುಂಡೋತ್ಸವಕ್ಕೆ ಚಾಲನೆ ನೀಡಲಾಯಿತು. ನಗಾರಿ ಬಸವ, ಸೋಮ ಹಾಗೂ ದೇವತೆಗಳು ಕೆಂಡ ಹಾಯ್ದವು. ಗುಡಿ ಗೌಡರಾದ ಗೋಪಾಲಗೌಡ, ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು, ಪುರಸಭಾ ಸದಸ್ಯರಾದ ಸಿ.ಬಿ.ತಿಪ್ಪೇಸ್ವಾಮಿ, ರೇಣುಕಮ್ಮ, ಮುಖಂಡರಾದ ಇಟ್ಟಿಗೆರಂಗಸ್ವಾಮಯ್ಯ, ಅಗ್ನಿಕುಂಡೋತ್ಸವದ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು. ಬಂದ ಭಕ್ತರಿಗೆ ಮಜ್ಜಿಗೆ ಪಾನಕ, ಸೇವೆ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

        ಪಟ್ಟಣದ ಹೊರವಲಯ ದಬ್ಬೆಘಟ್ಟದ ಪವಾಡ ಪುರುಷ ಮರುಳಸಿದ್ದೇಶ್ವರ ಸ್ವಾಮಿ ಅಗ್ನಿಕೊಂಡೋತ್ಸವದಲ್ಲಿ ಭಕ್ತರು ಸುಡುವ ಬಿಸಿಲನ್ನೂ ಲೆಕ್ಕಿಸದೆ ಭಾಗವಹಿಸಿದ್ದರು. ದಬ್ಬೇಘಟ್ಟ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ನೂರಾರು ಭಕ್ತರು ಕೆಂಡ ಹಾಯುವ ಮೂಲಕ ಹರಕೆಯನ್ನು ತೀರಿಸಿದರು.

ಆಚರಣೆಯ ಹಿನ್ನೆಲೆ 

       ಪವಾಡ ಪುರುಷ ಮರುಳಸಿದ್ದೇಶ್ವರರು ಸಂಚರಿಸುತ್ತಾ ದಬ್ಬೇಘಟ್ಟಕ್ಕೆ ಬಂದಾಗ ಗ್ರಾಮಸ್ಥರು ಮಾರಿಯ ಕಾಟದಿಂದ ತಮ್ಮನ್ನು ರಕ್ಷಿಸುವಂತೆ ಮರುಳಪ್ಪಜ್ಜಯ್ಯನಿಗೆ ದುಂಬಾಲು ಬೀಳುತ್ತಾರೆ. ಆಗ ಮರುಳಸಿದ್ದೇಶ್ವರಸ್ವಾಮಿ ತನ್ನ ಕಣ್ಣುಗಳನ್ನು ಕೆಂಡದುಂಡೆ ಮಾಡಿ ಮಾರಿಯನ್ನು ಹೆದರಿಸುತ್ತಾರೆ. ಮಾರಿ ಭಯದಿಂದ ಊರು ಬಿಟ್ಟು ತೆರಳುತ್ತಾಳೆ. ಇದರಿಂದಾಗಿ ಮರುಳಸಿದ್ದೇಶ್ವರಸ್ವಾಮಿಗೆ ಕೆಂಡದಯ್ಯ ಎಂಬ ಹೆಸರು ಬಂದಿದೆ. ಇದರ ನೆನಪಿಗಾಗಿ ಮರುಳಸಿದ್ದೇಶ್ವರಸ್ವಾಮಿ ಕೆಂಡದ ಅಭಿಷೇಕ ಹಾಗೂ ಅಗ್ನಿಕುಂಡೋತ್ಸವವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.

       ಕಸಬಾ ಹೋಬಳಿ ಅಣೆಕಟ್ಟೆ ಬಸವೇಶ್ವರ ದೇವರ ಅಗ್ನಿಕೊಂಡೋತ್ಸವ ನಡೆಯಿತು. ನಂತರ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ನೆರವೇರಿತು. ಭಕ್ತರು ಹಣ್ಣು ಕಾಯಿ ಸೇವೆ ನೆರವೇರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link