ಕ್ಷೇತ್ರಗಳತ್ತ ಮುಖ ಮಾಡಿದ ಶಾಸಕರು…!!!

ಬೆಳಗಾವಿ

        ಭಾರಿ ನೀರಿಕ್ಷೆಯೊಂದಿಗೆ ಕ್ಷೇತ್ರದ ಸಮಸ್ಯೆಗೆ ಸರ್ಕಾರದಿಂದ ಪರಿಹಾರ ಪಡೆಯಬೇಕೆಂದು ಬೆಳಗಾವಿ ಅಧಿವೇಶನಕ್ಕೆ ಹುಮ್ಮಸ್ಸಿನಲ್ಲಿ ಆಗಮಿಸಿದ್ದ ನಾಡಿನ 200ಕ್ಕೂ ಹೆಚ್ಚು ಶಾಸಕರು ಸಮಸ್ಯೆಗೆ ಉತ್ತರ ಕಂಡುಕೊಳ್ಳಲಾಗದೇ ಭಾರದ ಹೆಜ್ಜೆಯೊಂದಿಗೆ ಪುನಃ ತಮ್ಮ ಕ್ಷೇತ್ರಗಳತ್ತ ಮುಖ ಮಾಡಿದರು. 

        ಡಿಸೆಂಬರ್ 10ರಿಂದ ಆರಂಭವಾದ ಅಧಿವೇಶನದಲ್ಲಿ ಬರ, ನೆರೆ, ಕೃಷಿ, ಶಿಕ್ಷಣ, ಹಣಕಾಸು ಅಕ್ರಮಗಳು ಸೇರಿ ಜನ ಸಾಮಾನ್ಯರ ಸಮಸ್ಯೆಗಳನ್ನು ಬಿಚ್ಚಿಟ್ಟು ಸರ್ಕಾರವನ್ನು ಬಡಿದೆಬ್ಬಿಸಲು ಹಾತೊರೆದಿದ್ದ ಶಾಸಕರಿಗೆ ನಿರಾಸೆ ಉಂಟಾಯಿತು. ಬರದ ಮೇಲಿನ ಚರ್ಚೆಯ ಕುರಿತಾಗಿ ಕೃಷಿ, ಪಶುಸಂಗೋಪನೆ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು ಉತ್ತರಿಸಿದರಾದರೂ, ಮುಖ್ಯಮಂತ್ರಿಯಿಂದ ಉತ್ತರ ಬರಲಿಲ್ಲ.

       ಪ್ರಾದೇಶಿಕ ತಾರತಮ್ಯದಿಂದ ಉತ್ತರ ಕರ್ನಾಟಕ ಭಾಗಕ್ಕೆ ಹಿನ್ನೆಡೆಯಾಗಿದೆ ಎಂಬ ಕೂಗಿನ ಬಗ್ಗೆ ಈ 10 ದಿನದಲ್ಲಿ ದೊಡ್ಡ ಚರ್ಚೆ ನಿರೀಕ್ಷಿಸಲಾಗಿತ್ತು. ಆದರೆ, ಮೂರು ಶಾಸಕರ ಅಭಿಪ್ರಾಯ ಮಂಡನೆ ಹೊರತಾಗಿ ಬೇರೇನೂ ನಡೆಯಲೇ ಇಲ್ಲ. ಮೈತ್ರಿ ಸರ್ಕಾರಚನೆಯಾದ ಬಳಿಕ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಗಂಭೀರ ಆರೋಪ ಕೇಳಿಬಂದಿತ್ತು. ಮಂತ್ರಿ ಮಂಡಲದಲ್ಲಿ ಉತ್ತರ ಕರ್ನಾಟಕದವರಿಗೆ ಸೂಕ್ತ ಅವಕಾಶ ಸಿಗದಿರುವುದರಿಂದ ಹಾಗೂ ಪ್ರಮುಖ ಖಾತೆ ನೀಡದ್ದರ ಬಗ್ಗೆ ಆಡಳಿತ ಪಕ್ಷಗಳಲ್ಲೇ ಆಕ್ಷೇಪವಿತ್ತು. ಈ ಕಾರಣದಿಂದ ಈ ಬಾರಿ ಅಧಿವೇಶನದ ಬಗ್ಗೆ ಹೆಚ್ಚು ಮಹತ್ವ ಪಡೆದುಕೊಂಡಿತ್ತು.

         ಮಲೆನಾಡಿನ ಸಮಸ್ಯೆಗಳ ಬಗ್ಗೆಯೂ ವಿಚಾರ ಚೆರ್ಚೆ ಯಾಗಬೇಕಿತ್ತು, ವಿವಿಧ ಜಿಲ್ಲೆಗಳ ನೀರಾವರಿ ಯೋಜನೆಗಳು ನೆಲಬಿಟ್ಟು ಮೇಲೆಳೆದ್ದರ ಬಗ್ಗೆ ಸರ್ಕಾರವನ್ನು ತಿವಿಯಲು ಶಾಸಕರು ದಾಖಲೆ ಸಹಿತ ಆಗಮಿಸಿದ್ದರು. ಕೃಷ್ಣ ಮೇಲ್ದಂಡೆ ಯೋಜನೆಗೆ ಉದಾಸೀನ ಬಗ್ಗೆ ಎಚ್ಚರಿಸಲು, ಬೇಗ ಕಾಣದ ಕೊಡಗು ಪುನರ್ ನಿರ್ಮಾಣ ಕಾರ್ಯದ ಬಗ್ಗೆ, ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಉಂಟಾಗಿರುವ ಮೀಸಲು ಗೊಂದಲ ನಿವಾರಣೆಗೆ ಶಾಸಕರು ಸಿದ್ಧತೆ ನಡೆಸಿದ್ದಾರಾದರೂ ಅವಕಾಶವೇ ಸಿಗಲಿಲ್ಲ.

         ಪ್ರಶ್ನೋತ್ತರ, ನಿಲುವಳಿ ಸೂಚನೆ, ನಿಯಮ 69ರ ಮೇಲಿನ ಸಾರ್ವಜನಿಕ ಜರೂರು ವಿಚಾರಗಳ ಬಗ್ಗೆ ಚರ್ಚೆ ವಿಶೇಷ ಚರ್ಚೆ ಗಮನ ಸೆಳೆಯುವ ಸೂಚನೆ ಹೀಗೆ ವಿವಿಧ ಮಾರ್ಗಗಳಲ್ಲಿ ಸಮಸ್ಯೆಗಳನ್ನು ಹೇಳಿಕೊಂಡು ಶಾಸಕರು ಸರ್ಕಾರದಿಂದ ಉತ್ತರ ಬಯಸಿದ್ದರು. ಹತ್ತು ದಿನಗಳಲ್ಲಿ ಮೊದಲ ಒಂದು ವಾರ ಹೊರತುಪಡಿಸಿ ಎರನೇ ವಾರದಲ್ಲಿ ಸದನ ತನ್ನ ಕಟ್ಟುಪಾಡುಗಳನ್ನು ಅನುಸರಿಸಲು ಅವಕಾಶವೇ ಸಿಗಲಿಲ್ಲ.

25 ಶಾಸಕರಿಗೆ ಮರಳು ಸಮಸ್ಯೆ!

         ಮರಳು ಮಾಫಿಯಾ ಹಾವಳಿಯಿಂದ ಜನ ಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ 25 ಶಾಸಕರು ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಕೋರಿದ್ದರು. ತಮ್ಮ ಭಾಗದಲ್ಲಿ ದಿನದಿನಕ್ಕೂ ಬಿಗಡಾಯಿಸುತ್ತಿರುವ ಮರಳು ಸಮಸ್ಯೆ, ಅಧಿಕಾರಿಗಳ ಉಪಟಳದ ಬಗ್ಗೆ ಶಾಸನ ಸಭೆಯಲ್ಲಿ ಹೇಳಿಕೊಳ್ಳಲು ಸ್ಪೀಕರ್ ಬಳಿ ದಂಬಾಲು ಬಿದ್ದಿದ್ದರೂ ಸಂಕಟ ಹೇಳಿಕೊಳ್ಳಲು ಸಮಯಾವಕಾಶ ಸಿಗದೇ ಸಂಕಟದಿಂದಲೇ ಕ್ಷೇತ್ರದತ್ತ ಹೆಜ್ಜೆ ಹಾಕಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap