ಚಿತ್ರದುರ್ಗ:
ಚಿಕಿತ್ಸೆಗಾಗಿ ಚೆನ್ನೈಗೆ ತೆರಳಿರುವ ತುಮಕೂರು ಸಿದ್ದಗಂಗಾಮಠದ ನಡೆದಾಡುವ ದೇವರು, ಶತಮಾನ ಕಂಡ ಶತಾಯುಷಿ, ತ್ರಿವಿದ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ ಡಾ.ಶಿವಕುಮಾರ ಮಹಾಸ್ವಾಮೀಜಿರವರು ಶೀಘ್ರವೇ ಗುಣಮುಖರಾಗಲೆಂದು ಸರ್ವಧರ್ಮ ವೇದಿಕೆಯಿಂದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಸರ್ವಧರ್ಮ ವೇದಿಕೆಯ ರಾಜ್ಯಾಧ್ಯಕ್ಷ ಜಾದೂಮೋಹನ್‍ಕುಮಾರ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಾ.ಶಿವಕುಮಾರ ಮಹಾಸ್ವಾಮೀಜಿರವರು ಚೇತರಿಸಿಕೊಂಡು ಸಿದ್ದಗಂಗಾ ಮಠಕ್ಕೆ ಮರಳಿ ಬರಲಿ ಎಂದು ನೀಲಕಂಠೇಶ್ವರಸ್ವಾಮಿಯಲ್ಲಿ ಪ್ರಾರ್ಥಿಸಿದರು.
ಡಾ.ಶಿವಕುಮಾರ ಮಹಾ ಸ್ವಾಮಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ಸೆ.5 ರಿಂದ ರಾಜ್ಯಾದ್ಯಂತ ವಿವಿಧ ಜಿಲ್ಲೆ. ತಾಲೂಕುಗಳಲ್ಲಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ತೆರೆದ ಕಾರು, ಬೈಕ್‍ನಲ್ಲಿ ಸಂಚರಿಸುತ್ತಿರುವ ಜಾದೂ ಮೋಹನ್‍ಕುಮಾರ್ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವತನಕ ಆಂದೋಲನ ನಿಲ್ಲುವುದಿಲ್ಲ ಎಂದು ತಿಳಿಸಿದರು.
ಸರ್ವಧರ್ಮ ವೇದಿಕೆ ಉಪಾಧ್ಯಕ್ಷ ವಿಜಯಕುಮಾರ್, ರೀನವೀರಭದ್ರಪ್ಪ, ಪ್ರಸನ್ನಕುಮಾರ್, ಭಾಗ್ಯಮ್ಮ ಗೊಂಡಬಾಳ್‍ಬಸವರಾಜ್, ಕೆ.ಸಿ.ರುದ್ರೇಶ್, ಲತೀಶ್, ಧರಣಿ ಸಂಸ್ಥೆಯ ಕಾರ್ಯದರ್ಶಿ ರಮನಾಗರಾಜ್, ಗೌರಮ್ಮ,ಸುನಿತ, ಅಸ್ಲಂಭಾಷ, ಹಾಸ್ಯ ಕವಿ ಜಗನ್ನಾಥ್, ಚಿನ್ಮಯಾನಂದ ಇನ್ನು ಮುಂತಾದವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು. ಡಾ.ಶಿವಕುಮಾರ ಮಹಾಸ್ವಾಮಿಗಳು ಶೀಘ್ರವೇ ಗುಣಮುಖರಾಗಲೆಂದು ಪ್ರಾರ್ಥಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ