ಬೆಂಗಳೂರು
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದು, ಹೀಗಾಗಿ ಜಾತ್ಯಾತೀತ ಶಕ್ತಿಗಳು ಒಗ್ಗೂಡಿವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೂರಾರು ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಮುನ್ನಡೆಸುವ ಸಾರಥ್ಯವನ್ನು ರಾಹುಲ್ ಗಾಂಧಿ ವಹಿಸಿಕೊಂಡಿದ್ದಾರೆ. ಮೇಲಾಗಿ, ಪ್ರಧಾನಿಯಾಗುವ ಆಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಈ ದೇಶದ ರಾಜಕಾರಣ ಹಾಗೂ ಹೊರದೇಶದ ರಾಜಕಾರಣವನ್ನು ಅತ್ಯಂತ ಸೂಕ್ಷ್ಮವಾಗಿ ಅವರು ಗಮನಿಸುತ್ತಿದ್ದಾರೆ. ರಾಹುಲ್ ಗಾಂಧಿಯವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದರು.
ದೇಶದಲ್ಲಿ ಐದು ರಾಜ್ಯಗಳ ಚುನಾವಣೆ ನಡೆಯುತ್ತಿದೆ. ಅದಕ್ಕೆ, ಪೂರ್ವದಲ್ಲಿ ರಾಜ್ಯದಲ್ಲಿ ಉಪ ಚುನಾವಣೆಗಳು ನಡೆಯುತ್ತಿದೆ. ಕಾಂಗ್ರೆಸ್, ಜೆಡಿಎಸ್ – ಕಾಂಗ್ರೆಸ್ ನಾಯಕತ್ವದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಸಣ್ಣ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡದೇ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಉಪ ಚುನಾವಣೆಯ ಗೆಲುವು ಶಕ್ತಿ ಪ್ರದರ್ಶನಕ್ಕೆ ಅಲ್ಲ. ರಾಷ್ಟ್ರದ ಹೊಸ ರಾಜಕೀಯ ಬೆಳವಣಿಗೆಗೆ ನಾಂದಿಯಾಗಲಿದೆ ಎಂದು ತಿಳಿಸಿದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿದ್ದೇವೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ 13 ಕಡೆ ಚುನಾವಣೆ ಆಗಿದೆ. ಒಂದು ಕಡೆ ಮಾತ್ರ ಬಿಜೆಪಿ ಗೆದ್ದಿದೆ. ಬಿಜೆಪಿಯನ್ನು ದೂರ ಇಡಲು ನಾವು ಒಂದಾಗಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷ ಹೊರತುಪಡಿಸಿ ದೇಶದಲ್ಲಿ ತೃತೀಯ ರಂಗ ಅಸಾಧ್ಯ ಅಲ್ಲದೆ ಕಾಂಗ್ರೆಸ್ ನೇತೃತ್ವದಲ್ಲಿಯೇ ಚುನಾವಣೆಗಳನ್ನು ಎದುರಿಸಿದ ಬಿಜೆಪಿಯನ್ನು ಮುಗಿಸಲು ಸಾಧ್ಯ ಎಂದರು.
ಎಸ್.ಪಿ, ಬಿ.ಎಸ್.ಪಿ, ಟಿ.ಟಿ.ಪಿ, ಎನ್.ಸಿ.ಪಿ, ಡಿ.ಎಂ.ಕೆ, ಜೆಡಿಎಸ್ ಮೊದಲಾದ ಪಕ್ಷಗಳೊಂದಿಗೆ ಮಹಾಮೈತ್ರಿ ರಚನೆ ಸಂದರ್ಭದಲ್ಲಿ ಬಿಎಸ್‍ಪಿ ನಾಯಕಿ ಮಾಯಾವತಿ ಹೊರ ಬಂದಿದ್ದಾರೆ. ಈಗ ನಡೆಯುತ್ತಿರುವ ಚುನಾವಣೆಗಳ ಫಲಿತಾಂಶ ಹೊರ ಬಂದ ಮೇಲೆ ಮತ್ತೆ ಅವರು ಹಿಂತಿರುಗುವ ಸಾಧ್ಯತೆ ಇದೆ ಎಂದರು.
ಕರ್ನಾಟಕದಲ್ಲಿ ಈಗ ಜೆಡಿಎಸ್, ಕಾಂಗ್ರೆಸ್ ಒಂದಾಗಿ ಉಪಚುನಾವಣೆಯನ್ನು ಯಾವುದೇ ಹೊಂದಾಣಿಕೆ ಸಮಸ್ಯೆ ಇಲ್ಲದೆ ಎದುರಿಸುತ್ತಿದ್ದು ಎಲ್ಲಾ ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ವಿರುದ್ಧವಾಗಿ ಬರಲಿದೆ. ಇದರ ನಂತರ ಹೊಸ ರಾಜಕೀಯ ಧೃವೀಕರಣ ನಡೆಯಲಿದೆಂದರು.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಒಂದಾಗಿರುವುದರಿಂದ ಬಿಜೆಪಿಯವರು ಭಯದಿಂದ ನಮ್ಮ ಮೈತ್ರಿ ಬಗ್ಗೆ ಏನೆಲ್ಲಾ ಮಾತನಾಡುತ್ತಿದ್ದಾರೆಂದರು.ಈ ಉಪಚುನಾವಣೆಗಳ ಫಲಿತಾಂಶ ಮುಂದಿನ ಚುನಾವಣೆಗಳ ದಿಕ್ಕೂಚಿ ಎಂಬುದನ್ನು ನಿರಾಕರಿಸುವಂತಿಲ್ಲ, ಜಾತ್ಯಾತೀತ ಶಕ್ತಿಗಳ ಒಂದುಗೂಡಿರುವುದರಿಂದ ಇದು 2019ರ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದರು.
ವಾಲ್ಮೀಕಿ ಸಮಾಜವನ್ನು ಎಸ್ಪಿಗೆ ಸೇರಿಸಲು ರಾಜಕೀಯ ಮೀಸಲಾತಿಗೆ ನನ್ನ ಹೋರಾಟ ಪರಿಗಣಿಸಿ ವಾಲ್ಮೀಕಿ ಪ್ರಶಸ್ತಿ ನೀಡಿದೆ. ಆದರೆ ನನಗೆ ಲಂಡನ್ ನಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮ ಇದ್ದಕಾರಣ ಪ್ರಶಸ್ತಿಯನ್ನು ಅಂದು ಸ್ವೀಕರಿಸಿಲ್ಲ. ಬೇರೊಂದು ದಿನ ಸ್ವೀಕರಿಸುವೆ, ಈ ಬಗ್ಗೆ ತಪ್ಪು ತಿಳಿಯಬೇಕಿಲ್ಲ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು 85 ಸಾವಿರ ಮತಪಡೆದಿದ್ದಾರೆ. ಈಗ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಇಲ್ಲಿ ಉಗ್ರಪ್ಪ ಅವರಿಗೆ ಗೆಲುವು ಸಾಧ್ಯ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ