ದಾವಣಗೆರೆ:
ವೀರಶೈವ-ಲಿಂಗಾಯತ ಸಮಾಜ ಬಾಂಧವರನ್ನು ನಿಂದಿಸಿ, ಪಕ್ಷಕ್ಕೆ ಮುಜುಗರ ಉಂಟು ಮಾಡಿರುವ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪನವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಜಿ.ಪಂ.ಸದಸ್ಯ, ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕೆ.ಎಸ್.ಬಸವಂತಪ್ಪ ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾರನ್ನೋ ಹೆದರಿಸಿ, ಬೆದರಿಸಿ, ನಿಂದಿಸಿ ಜಾತಿ ಆಧಾರದಲ್ಲಿ ಮತ ಕೇಳುವ ಸಂಸ್ಕತಿ ಕಾಂಗ್ರೆಸ್ಸಿನದ್ದಲ್ಲ. ಪ್ರೀತಿ-ವಿಶ್ವಾಸದಿಂದ ಮತ ಕೇಳಬೇಕು. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಕ್ಷೇತ್ರದ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಆಗಲೀ ಹೀಗೆ ಬೆದರಿಸಿ, ಹೆದರಿಸಿ, ಬೇರೊಂದು ಜಾತಿ ನಿಂದಿಸಿ ಮತ ಕೇಳುವಂತೆ ಯಾರಿಗೂ ಹೇಳಿಲ್ಲ ಎಂದರು.
ಮೊನ್ನೆ ನಡೆದ ಲೋಕಸಭೆ ಚುನಾವಣೆಯಂದು ಮಾಯಕೊಂಡ ಕ್ಷೇತ್ರದ ನೇರ್ಲಿಗೆ ಗ್ರಾಮದಲ್ಲಿ ಮತ ಕೇಳುವ ವಿಚಾರವಾಗಿ ಡಾ.ವೈ.ರಾಮಪ್ಪ ಬೆದರಿಕೆ ಹಾಕಿ, ಮತ ಕೇಳಿದ್ದನ್ನು ನಾವು ಖಂಡಿಸುತ್ತೇವೆ ಎಂದ ಅವರು, ಡಬಲ್ ಡಿಗ್ರಿ ಮಾಡಿರುವ, ಡಾಕ್ಟರೇಟ್ ಪಡೆದ ಡಾ.ವೈ.ರಾಮಪ್ಪ ಸಾರ್ವಜನಿಕವಾಗಿ ಹೀಗೆ ಮತ್ತೊಂದು ಜಾತಿ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ನಾನೂ ಗಮನಿಸಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಗೆ ಸ್ಪರ್ದಿಸಿದ್ದ ಡಾ.ರಾಮಪ್ಪ ಹೀಗೆ ಮತ್ತೊಂದು ಜಾತಿ ನಿಂದಿಸಿ, ಮತ ಕೇಳಬೇಕಿತ್ತು. ಹಿಂದೆ ಜಿಪಂ ಸದಸ್ಯ ಆಗುವಾಗ, ಜಿಪಂ ಅಧ್ಯಕ್ಷನಾಗುವಾಗಲೂ ಹೀಗೆ ಜಾತಿ ನಿಂದಿಸಬೇಕಿತ್ತು. ಎಂದಿಗೂ ಇಲ್ಲದ ಮಂಜಪ್ಪ ಚುನಾವಣೆಗೆ ಸ್ಪರ್ಧಿಸಿದ್ದಾಗಲೇ ಹೀಗೆ ವರ್ತಿಸಲು ಕಾರಣವೇನು? ಎಂದು ಪ್ರಶ್ನಿಸಿದರು.
ಎಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಕೊಡದ ನೇರ್ಲಿಗೆಯಲ್ಲಿ ನಾನು ವಿಧಾನಸಭೆ ಚುನಾವಣೆಯಲ್ಲಿ ಲೀಡ್ ಪಡೆದಿದ್ದೇನೆ. ಎಲ್ಲರೊಂದಿಗೂ ಸಾಮರಸ್ಯ, ಸೌಹಾರ್ದತೆಯಿಂದ ಮತ ನೀಡುವಂತೆ ಮನವಿ ಮಾಡಿದ್ದರಿಂದ ಇಂತಹ ಪರಿವರ್ತನೆ ಸಾಧ್ಯವಾಗಿದೆ ಎಂದರು.
ವಿಧಾನಸಭೆ ಚುನಾವಣೆಗೆ ದಲಿತನಾದ ನಾನು ಸ್ಪರ್ಧಿಸಿದಾಗ ಇದೇ ಡಾ.ವೈ.ರಾಮಪ್ಪ ನನ್ನ ಪರ ಪ್ರಚಾರ ಮಾಡಲಿಲ್ಲ. ಬದಲಿಗೆ ಬಿಜೆಪಿ ಅಭ್ಯರ್ಥಿ .ಲಿಂಗಣ್ಣನ ಪರ ಇದೇ ರಾಮಪ್ಪ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಾನು ಸಾಕ್ಷ್ಯಗಳನ್ನೂ ಒದಗಿಸಬಲ್ಲೆ. ಆಗಲೇ ಈ ಎಲ್ಲಾ ವಿಚಾರದ ಬಗ್ಗೆ ಕೆಪಿಸಿಸಿ ನಾಯಕರಿಗೆ ಲಿಖಿತ ದೂರು ನೀಡಿದ್ದೇನೆ. ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನ್ನ ವಿರುದ್ಧ ಕೆಲಸ ಮಾಡುವಾಗ ರಾಮಪ್ಪನವರ ಕಾಂಗ್ರೆಸ್ ರಕ್ತ ಎಲ್ಲಿ ಹೋಗಿತ್ತು ಎಂದು ಖಾರವಾಗಿ ಪ್ರಶ್ನಿಸಿದರು.
ರಾಜ್ಯಾದ್ಯಂತ ಅಹಿಂದ, ವೀರಶೈವ ಲಿಂಗಾಯತರು ಸಹೋದರತ್ವ, ಪ್ರೀತಿ, ಸಾಮರಸ್ಯದಿಂದಿದ್ದೇವೆ. ತಮ್ಮ ಸ್ವಾರ್ಥಕ್ಕಾಗಿ ಲಿಂಗಾಯತ ಸಮುದಾಯ ಕುರಿತಂತೆ ಡಾ.ವೈ.ರಾಮಪ್ಪ ಮಾತನಾಡಿದ್ದನ್ನು ಅಹಿಂದ ವರ್ಗ ಖಂಡಿಸುತ್ತದೆ. ತಮ್ಮ ಮಾತನ್ನು ರಾಮಪ್ಪ ಹಿಂಪಡೆಯಬೇಕು. ಎಲ್ಲರನ್ನೂ ಅಪ್ಪಿಕೊಂಡು ಅಹಿಂದ ಮುಖಂಡನಾಗಬೇಕೆ ಹೊರತು, ದೊಡ್ಡ ಮಾತುಗಳನ್ನು ದೊಡ್ಡವನನ್ನಾಗಿ ಮಾಡುವುದಿಲ್ಲ. ಬಹುಸಂಸ್ಕತಿಯ ವೀರಶೈವ ಲಿಂಗಾಯತ ಸಮಾಜವನ್ನು ಧೂಷಿಸಿ, ಕಾಂಗ್ರೆಸ್ಸಿಗೂ ರಾಮಪ್ಪ ಮುಜುಗರವುಂಟು ಮಾಡಿದ್ದಾರೆ. ತಕ್ಷಣವೇ ರಾಮಪ್ಪ ಸಮಾಜ ಹಾಗೂ ಕಾಂಗ್ರೆಸ್ಸಿನ ಹಿರಿಯರಲ್ಲೂ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ನೇರ್ಲಿಗೆ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದು, ಇಡೀ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಒಂದು ವೇಳೆ ಯಾರೇ ಜಾತಿ ನಿಂದನೆ ಮಾಡಿದ್ದರೂ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಒಂದು ವೇಳೆ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿದ್ದರೆ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಪಿಎಂಸಿ ಉಪಾಧ್ಯಕ್ಷ ಎಸ್.ಕೆ.ಚಂದ್ರಶೇಖರ, ಹರೀಶ, ಇಟ್ಟಿಗುಡಿ ಮಂಜುನಾಥ, ಕೋಳಿ ಇಬ್ರಾಹಿಂ, ಗುಮ್ಮನೂರು ಶಂಭುಲಿಂಗಪ್ಪ, ಹೊನ್ನೂರು ಪ್ರಕಾಶ, ಮಹಮ್ಮದ್ ಷಫೀ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
