ಚಿತ್ರದುರ್ಗ:
ಸಂಘಟನೆ ಮೂಲಕ ಭೋವಿ ಸಮಾಜದಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕವಾಗಿ ಅರಿವು ಮೂಡಿಸಲು ಫೆ.27 ರಂದು ಹಳೆಮಾಧ್ಯಮಿಕ ಶಾಲಾ ಆವರಣದಲ್ಲಿ ಸಿದ್ದರಾಮಜಯಂತಿ ಹಾಗೂ ದಿವಂಗತ ಮಂಜರಿ ಹನುಮಂತಪ್ಪನವರ ಸ್ಮರಣೋತ್ಸವ ಆಚರಿಸಲಾಗುವುದೆಂದು ಭೋವಿ ಗುರಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಭೋವಿ ಹಾಸ್ಟೆಲ್‍ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿ ಚಿತ್ರದುರ್ಗ ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಗಿರುವುದರಿಂದ ಅಲೆಮಾರಿ, ಅರೆಅಲೆಮಾರಿಗೆ ಸೇರಿದ ಭೋವಿ ಜನಾಂಗದವರು ಉದ್ಯೋಗ ಹುಡುಕಿಕೊಂಡು ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಬರಗಾಲವನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಸರ್ಕಾರಕ್ಕೆ ಮತ್ತು ಭೋವಿ ಸಮುದಾಯಕ್ಕೆ ಇಲ್ಲದಂತಾಗಿದೆ.ಭೋವಿಹಟ್ಟಿ, ಕಾಲೋನಿ, ಕೇರಿ, ಬೀದಿ, ನಗರ, ಬಡಾವಣೆಗಳಲ್ಲಿರುವ ಭೋವಿ ಜನಾಂಗದವರು ವಲಸೆ ಹೋಗುವುದನ್ನು ತಡೆದು ಅರಿವು ಮೂಡಿಸುವ ಕೆಲಸ ಮಾಡಲಾಗುವುದೆಂದು ಹೇಳಿದರು.
ಭೋವಿ ಸಮಾಜವನ್ನು ಸಂಘಟಿಸಿ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಕೊಡಿಸುವಲ್ಲಿ ನಾಯಕರುಗಳು ವಿಫಲರಾಗಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಭೋವಿ ಸಮಾವೇಶ ನಡೆಸಿ ದಿಕ್ಸೂಚಿ ಹುಡುಕುವ ಪ್ರಯತ್ನ ಮಾಡಲಾಗುವುದು. ರಾಜಕೀಯವಾಗಿ ಗುರುತಿಸಿಕೊಳ್ಳುವುದು ಭೋವಿ ಜನಾಂಗಕ್ಕೆ ಕಷ್ಟವಾಗಿದೆ. ನಮ್ಮ ಹೋರಾಟದ ಫಲವಾಗಿ ಭೋವಿ ಅಭಿವೃದ್ದಿ ನಿಗಮ ಸ್ಥಾಪನೆಯಾಗಿದೆ. ಆದರೆ ನಿಮಗ ಮಲತಾಯಿ ಮಗುವಿನಂತಾಗಿದೆ. ನಿಗಮಕ್ಕೆ ಯಾವುದೇ ಅನುದಾನವಿಲ್ಲ. ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿಲ್ಲ. ಕ್ರಿಯಾ ಯೋಜನೆಯನ್ನು ಇನ್ನು ರೂಪಿಸಿಲ್ಲ. ಭೋವಿ ಅಭಿವೃದ್ದಿ ನಿಗಮ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಭೋವಿ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎಂದರು
ಹೊಳಲ್ಕೆರೆಯಲ್ಲಿ ಎಂ.ಚಂದ್ರಪ್ಪ, ಹೊಸದುರ್ಗದಲ್ಲಿ ಗೂಳಿಹಟ್ಟಿ ಡಿ.ಶೇಖರ್ ಶಾಸಕರುಗಳಾಗಿ ಆಯ್ಕೆಯಾಗಿದ್ದಾರೆ. ಭೋವಿ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡುವಂತೆ ಎಲ್ಲಾ ಪಕ್ಷಗಳನ್ನು ಕೇಳುತ್ತಿದ್ದೇವೆ. ಭೋವಿ ಸಮಾಜದಲ್ಲಿ ಅರ್ಹರನ್ನು ಗುರುತಿಸಿ ಸಂಸದೀಯ ಪಟುವಾಗಿ ಪಾರ್ಲಿಮೆಂಟ್‍ಗೆ ಕಳಿಸಬೇಕಾಗಿರುವುದರಿಂದ ಭೋವಿ ಸಮಾವೇಶ ಮಾಡುತ್ತೇವೆ. ಸಂಘಟನೆ ಅನಿವಾರ್ಯವಾಗಿರುವುದರಿಂದ ಪ್ರತಿ ಹಳ್ಳಿ ಹಳ್ಳಿಗಳಿಗೆ ಹೋಗಿ ನಮ್ಮ ಜನಾಂದವರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದರು.
ಚಿತ್ರದುರ್ಗದಲ್ಲಿ ಐದಕ್ಕಿಂತಲೂ ಹೆಚ್ಚು ಮಂದಿ ಭೋವಿ ಸಮಾಜದವರು ಲೋಕಸಭೆ ಚುನಾವಣೆ ಆಕಾಂಕ್ಷಿಗಳಿದ್ದಾರೆ. ಚಿತ್ರದುರ್ಗ, ಬಿಜಾಪುರ, ಕೋಲಾರದಲ್ಲಿ ಭೋವಿ ಜನಾಂಗಕ್ಕೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೇಳುತ್ತಿದ್ದೇವೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಭೋವಿ ಸಮಾಜಕ್ಕೆ ಆದ್ಯತೆ ನೀಡಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ಟಿ.ತಿಪ್ಪೇಸ್ವಾಮಿ ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಸಿದ್ದರಾಮ ಜಯಂತಿ ಹಾಗೂ ದಿವಂಗತ ಮಂಜರಿ ಹನುಮಂತಪ್ಪನವರ ಸ್ಮರಣೋತ್ಸವ ಆಚರಿಸುತ್ತಿದ್ದೇವೆ. 25 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಜನಾಂಗದ ಸಂಘಟನೆ ಇದರ ಉದ್ದೇಶ ಎಂದು ತಿಳಿಸಿದರು.ತಿಮ್ಮಣ್ಣ, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಹೆಚ್.ಲಕ್ಷ್ಮಣ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








