ತಿಪಟೂರು
ಇಂದಿನ ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಸಮಗ್ರ, ಸಮೃದ್ಧ ವ್ಯಕ್ತಿತ್ವವನ್ನು ಬೆಳೆಸಿಕೊಂಡು ದೇಶಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಬೇಕೆಂದು ನಿವೃತ್ತ ಪ್ರಾಧ್ಯಾಪಕ ಜಿ.ಎಸ್.ರಮೇಶ್ ತಿಳಿಸಿದರು.
ನಗರದ ಕಲ್ಪತರು ವಿದ್ಯಾಸಂಸ್ಥೆಯ ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜಿನಲ್ಲಿ 2018-19ನೇ ಸಾಲಿನ ಪ್ರತಿಭಾಶ್ರೀ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಎಲ್ಲರೂ ವಿದ್ಯಾವಂತರಾಗುತ್ತಿರುವುದು ಒಂದು ಕಡೆ ಒಳ್ಳೆಯದು. ಆದರೆ ಇಂದು ಅಂಕಗಳಿಕೆಯ ಉದ್ದೇಶದಿಂದ ಅನೇಕ ವಾಮಮಾರ್ಗಗಳಿಂದ ಅಂಕಗಳನ್ನು ಗಳಿಸಿದರೂ ಒಂದೇ ನ್ಯಾಯಯುತವಾಗಿ ಓದಿ ಅಂಕಪಡೆದವರನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು.
ಆದ್ದರಿಂದ ಕೇವಲ ಅಂಕಗಳಿಕೆಯೊಂದೆ ಮಾನದಂಡವಾಗಬಾರದು. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯಾಗಬೇಕು. ಅದಕ್ಕೋಸ್ಕರ ಇಂತಹ ಕಾರ್ಯಕ್ರಮಗಳನ್ನು ಬಳಸಿಕೊಂಡು ಕ್ರೀಡೆ, ಸಾಹಿತ್ಯ, ಕಲೆ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಳ್ಳಬೇಕು. ಆಗಲೇ ವಿದ್ಯಾರ್ಥಿಗಳು ದೇಶದ ಸ್ವತ್ತಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಕೂಟ, ಸಾಂಸ್ಕತಿಕ ಸ್ಪರ್ಧೆಗಳಲ್ಲಿ, ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.ಕಾರ್ಯಕ್ರಮದ ಕಾಲೇಜಿನ ಅಧ್ಯಕ್ಷ ರಾಜ್‍ಕುಮಾರ್, ಡಾ. ಕೃಷ್ಣಮೂರ್ತಿ, ಪ್ರಾಂಶುಪಾಲ ಎಂ.ಡಿ.ಶಿವಣ್ಣ, ಬಸವರೆಡ್ಡಿ ಮತ್ತಿತರರಿದ್ದರು.