ಹಿರಿಯ ಪತ್ರಕರ್ತ ಹೆಚ್ ಎಸ್ ರಾಮಣ್ಣ ಇನ್ನಿಲ್ಲ..!!!

ತುಮಕೂರು

        ನಗರದ ಹಿರಿಯ ಪತ್ರಕರ್ತ ಹೆಚ್ ಎಸ್ ರಾಮಣ್ಣನವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಾಗ ಇವರನ್ನು ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರ ಪ್ರಯತ್ನ ಫಲ ನೀಡದೆ ರಾಮಣ್ಣನವರು ಸಂಜೆ 5.30ರ ಸುಮಾರಿನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಇವರು ಪತ್ನಿ ಸಾವಿತ್ರಿ, ಮಗ ದೀಪಕ್, ಮಗಳು ರಶ್ಮಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

        ಬುಧವಾರ ಬೆಳಿಗ್ಗೆ 7.30ರ ವೇಳೆಗೆ ಪಾರ್ಥೀವ ಶರೀರವನ್ನು ತುಮಕೂರಿನ ಎಸ್‍ಐಟಿ ಬಡಾವಣೆಯ ಅವರ ನಿವಾಸಕ್ಕೆ ತರಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

         ತುಮಕೂರು ತಾಲ್ಲೂಕು ಹೆಬ್ಬೂರಿನಲ್ಲಿ ಜನಿಸಿದ್ದ ರಾಮಣ್ಣನವರು ತುಮಕೂರು ವಾರ್ತೆ ದಿನ ಪತ್ರಿಕೆ ಸಂಸ್ಥಾಪನಾ ಸಂಪಾದಕರಾಗಿ 80ರ ದಶಕದಿಂದ ತುಮಕೂರಿನಲ್ಲಿ ಸಕ್ರೀಯ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ 16ವರ್ಷಗಳಿಂದಲೂ ನಗೆಮುಗುಳು ಎಂಬ ಹಾಸ್ಯ ಮಾಸಪತ್ರಿಕೆ ಪ್ರಕಟಿಸಿ ನಾಡಿನಾದ್ಯಂತ ಹೆಸರುಗಳಿಸಿದ್ದರು. ಹೆಬ್ಬೂರು ಫೌಂಡೇಷನ್ ಸಂಸ್ಥೆ ಸ್ಥಾಪಿಸಿ ಪ್ರತಿ ತಿಂಗಳೂ ಸತ್ಸಂಗ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದರು.

        ಪತ್ರಕರ್ತರಾಗಿದ್ದ ಹೆಚ್ ಎಸ್ ರಾಮಣ್ಣನವರು ಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಇವರು ಚುಟುಕು ಕವಿಗೋಷ್ಠಿ ಆಯೋಜಿಸಿದ್ದರು. ಜಿಲ್ಲಾ ಬ್ರಾಹ್ಮಣ ಸಭಾ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಚಟುವಟಿಕೆಯಲ್ಲಿದ್ದರು.

         ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದರು.

         ತುಮಕೂರಿನಲ್ಲಿ ಬರಹಗಾರರ ಬಳಗ ಕಟ್ಟಿ ಅದರ ಅಧ್ಯಕ್ಷರಾಗಿದ್ದ ರಾಮಣ್ಣನವರು ಹಲವಾರು ಯುವ ಲೇಖಕರು, ಕವಿಗಳಿಗೆ ವೇದಿಕೆ ಒದಗಿಸಿಕೊಟ್ಟಿದ್ದರು. ಪತ್ರಕರ್ತರಿಗಾಗಿ ಹಲವು ಕಾರ್ಯಾಗಾರ, ವಿಚಾರಗೋಷ್ಠಿ ಆಯೋಜನೆ ಮಾಡಿ ನೆರವಾಗಿದ್ದರು. ತುಮಕೂರು ವಾರ್ತೆ ಪತ್ರಿಕೆಯಲ್ಲಿ ವರದಿಗಾರರಾಗಿ ಕಲಿತು ಬೆಳೆದ ಹಲವಾರು ಪತ್ರಕರ್ತರು ತುಮಕೂರು ಸೇರಿದಂತೆ ನಾಡಿನ ವಿವಿದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

           ತಮ್ಮ ಮೊದಲ ಪತ್ನಿ ಪೂರ್ಣಿಮಾ ರಾಮಣ್ಣನವರ ಸಂಪಾದಕತ್ವದಲ್ಲಿ ನಗೆಮುಗುಳು ಹಾಸ್ಯ ಮಾಸಪತ್ರಿಕೆ ಆರಂಭಿಸಿದ ರಾಮಣ್ಣನವರು ಅದರ ಯಶಸ್ಸಿಗಾಗಿ ಶ್ರಮಿಸಿದ್ದರು. ಪತ್ನಿ ಪೂರ್ಣಿಮಾ ಅವರು ನಿಧನರಾದ ಬಳಿಕ ಪತ್ರಿಕೆ ಮುಂದುವರೆಸಿದರು. ನಂತರ ಸಾವಿತ್ರಿಯವರನ್ನು ವಿವಾಹವಾದ ರಾಮಣ್ಣನವರು ಅವರ ಸಹಕಾರದೊಂದಿಗೆ ಪತ್ರಿಕಾವೃತ್ತಿ ಮುಂದುವರೆಸಿದ್ದರು. ಸದಾ ಹಸನ್ಮುಖಿಗಳಾಗಿದ್ದ ರಾಮಣ್ಣನವರು, ಎಲ್ಲರೊಂದಿಗೆ ಸೌಜನ್ಯದಿಂದ ಬೆರೆಯುತ್ತಾ ಜನಾನುರಾಗಿಯಾಗಿದ್ದರು.

ಸಂತಾಪ:

     ಹಿರಿಯ ಪತ್ರಕರ್ತ ರಾಮಣ್ಣನವರ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾರ್ಮಿಕ ಸಚಿವ ವೆಂಕಟರವಣಪ್ಪ ಸಂತಾಪ ಸೂಚಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap