ದಾವಣಗೆರೆ :
ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟಣೆಗೊಂಡ ದಿನದಿಂದಲೂ ಚುನಾವಣೆ ಮುಗಿಯುವ ವರೆಗೂ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ ಮಾಲೀಕರು ಮತ್ತು ಪಕ್ಷದ ಪ್ರತಿನಿಧಿಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುದ್ರಣ ಮಾಲೀಕರು ಕರಪತ್ರ, ಬಂಟಿಂಗ್ಸ್, ಪೋಸ್ಟ್‍ರ್‍ಗಳನ್ನು ಮುದ್ರಣ ಮಾಡುವಾಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಅಭ್ಯರ್ಥಿ ಅಥವಾ ಪಕ್ಷದಿಂದ ಲಿಖಿತ ರೂಪದ ಅನುಮತಿ ಪಡೆಯಬೇಕು. ಆ ಅನುಮತಿ ಪತ್ರಕ್ಕೆ ಇಬ್ಬರು ಸಾಕ್ಷಿಗಳ ಸಹಿ ಪಡೆಯಬೇಕೆಂದು ಸೂಚನೆ ನೀಡಿದರು.
ಮುದ್ರಕರು ಅಭ್ಯರ್ಥಿಗಳ ಪತ್ರ ಪಡೆದ ನಂತರ ಜಿಲ್ಲಾಧಿಕಾರಿ ಅಥವಾ ಚುನಾವಣಾ ಅಧಿಕಾರಿಗೆ ಮಾಹಿತಿ ನೀಡಬೇಕು. ಬಂಟಿಂಗ್ಸ್, ಪೋಸ್ಟ್‍ರ್‍ಗಳ ಮುದ್ರಣ ಪ್ರತಿಗಳ ಸಂಖ್ಯೆ ಹಾಗೂ ಮುದ್ರಕರ ವಿವರವನ್ನು ಪ್ರಕಟಿಸಬೇಕು. ಇದಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳ ವರದಿಗಳನ್ನು ನೀಡಬೇಕು. ಈ ನಿಯಮಗಳನ್ನು ಉಲ್ಲಂಘಿಸುವಂತಹ ವ್ಯಕ್ತಿಗಳ ಮೇಲೆ ಕಾನೂನು ರೀತ್ಯಾ ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಅಭ್ಯರ್ಥಿಗಳು ಸಹ ಮುದ್ರಕರಲ್ಲಿ ಮಾಡಿಕೊಂಡ ಒಪ್ಪಂದದ ಪತ್ರವನ್ನು ಸಹ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಒಟ್ಟಾರೆ ಜಿಲ್ಲಾದ್ಯಂತ ಶಾಂತಿಯುತ ಚುನಾವಣೆಗೆ ಸಹಕರಿಸಬೇಕೆಂದು ಸಲಹೆ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಚುನಾವಣಾ ತಹಶೀಲ್ದಾರ್ ಪ್ರಸಾದ್, ಬಿಜೆಪಿ ಮುಖಂಡ ಪ್ರಭು ಕಲ್ಬುರ್ಗಿ, ಕಾಂಗ್ರೆಸ್ ಮುಖಂಡ ಎ.ನಾಗರಾಜ್, ಸಿಪಿಐ ಮುಖಂಡ ಆವರಗೆರೆ ಹೆಚ್.ಜಿ. ಉಮೇಶ್ ಮತ್ತಿತರರು ಹಾಜರಿದ್ದರು.