25ವರ್ಷದಿಂದ ಉಳುಮೆ ಮಾಡುತ್ತಿರುವ ರೈತರ ಅಳಲು ಕೇಳೊರು ಯಾರು???

ಚಿಕ್ಕನಾಯಕನಹಳ್ಳಿ

           ಸೆಕ್ರೆಟರಿ ಆಸುಪಾಸು, ಮೆಂಬರ್‍ನ ಹಿಂದೆ-ಮುಂದೆ ಓಡಾಡಿಕೊಂಡಿದ್ದೀರಾ ಬಿಡ್ರಿ, ರಾಜಕೀಯ ನಾಯಕರ ಹಿಂಬಾಲಕರಾಗಿದ್ದರಂತೂ ಕನ್ಪರ್ಮ್ ನಿಮಗೆ ಪಕ್ಕಾ ಬಗರ್‍ಹುಕುಂ ಚೀಟಿ, ನಮ್ಮಂತವರಿಗೆಲ್ರೀ, ಯಾರಾಗ್ತಾರೆ, 25ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿದ್ದೇವೆ ಎಂಬ ನಂಬಿಕೆಯಿಂದ ಅರ್ಜಿ ಸಲ್ಲಿಸುತ್ತಿದ್ದೇವೆ. ದೇವರಾದರೂ ಕರುಣಿಸಲಿ ಎನ್ನುವ ಮಾತುಗಳು ಪಟ್ಟಣದ ತಾಲ್ಲೂಕು ಕಚೇರಿಗೆ ಬಗರ್‍ಹುಕುಂ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಲು ಬರುತ್ತಿರುವ ರೈತರದು.

           ನಮ್ಮಪ್ಪ ನಮಗೆ ಹೇಳುತ್ತಿದ್ದ, ಯಾರು ಜಮೀನು ಉಳುಮೆ ಮಾಡುತ್ತಾರೋ ಅವರಿಗೆ ಜಮೀನು ಸಿಗುತ್ತೆ ಅಂತ. ಆಗಿನಿಂದಲೂ ಜಮೀನಿನಲ್ಲಿ ಉಳುಮೆ ಮಾಡಿಕೊಂಡೇ ಬರುತ್ತಿದ್ದೇವೆ ಹೊರತು ಹೊಲ ನಮಗೆ ಆಗಿಲ್ಲ. ಬೇರೆಯವರು ಬಂದು ಇದು ನಮಗೆ ಸೇರಿದ್ದು ಎಂದು ಗಲಾಟೆ ಮಾಡುತ್ತಾರೆ, ಈ ಬಗ್ಗೆ ನಮಗೆ ಉತ್ತರ ಹೇಳಲು ಅದರ ರೂಲ್ಸು ಏನೂ ತಿಳಿಯದು ಎನ್ನುತ್ತಾರೆ ತಿಮ್ಮನಹಳ್ಳಿ ನಾಗರಾಜು.
ನಮ್ಮ ತಂದೆಯವರು ಆಗಿನಿಂದಲೂ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ, ಸಕ್ರಮಕ್ಕೆ ಅರ್ಜಿ ಹಾಕುತ್ತಲೇ ಇದ್ದಾರೆ.

         ಆದರೆ ಇದುವರೆವಿಗೂ ನಮ್ಮ ಹೆಸರಿಗೆ ಆಗಿಲ್ಲ. ನನಗೆ ಬುದ್ದಿ ಬಂದಾಗಿನಿಂದಲೂ ತಂದೆಯವರಂತೆ ಉಳುಮೆ ಮಾಡುತ್ತಿರುವ ನಾನು ಹೊಲದಲ್ಲಿ ರಾಗಿ, ಜೋಳ ಬೆಳೆಯುತ್ತಿದ್ದೇನೆ. ತೆಂಗು ಹಾಕಲು ನೀರಿಲ್ಲ, ಜಮೀನು ನಮ್ಮ ಹೆಸರಿಗೆ ಆಗದೆ ಇರುವುದರಿಂದ ಯಾರಾದರು ಬಂದು ಇಲ್ಲಿಂದ ಹೋಗು ಎಂದರೆ ಹೋಗಬೇಕು. ಹೊಲದಿಂದಲೇ ಜೀವನ ನಿರ್ವಹಿಸುತ್ತಿರುವ ನಮಗೆ ಹೊಲವೂ ಕೈತಪ್ಪಿದರೆ ಏನು ಮಾಡುವುದು, ಈಗಾಗಲೇ ಇರುವ ದನವನ್ನು ಕೂಡ ಮಾರುವ ಪರಿಸ್ಥಿತಿ ನಮಗೆ ಬಂದಿದೆ. ಅಧಿಕಾರಿಗಳು ಅಕ್ಕಪಕ್ಕದ ಜಮೀನಿನಲ್ಲಿ ವಿಚಾರಿಸಿ ನಿಜವಾಗಿ ಉಳುಮೆ ಮಾಡುತ್ತಿರುವ ಅರ್ಹರಿಗೆ ಜಮೀನು ನೀಡಿದರೆ ನಮ್ಮಂತಹವರ ಕುಟುಂಬಕ್ಕೆ ಆ ಜಮೀನು ನೆರವಿಗೆ ಬರುತ್ತದೆ ಎನ್ನುತ್ತಾರೆ ನಾಗರಾಜು

ಚಿಕ್ಕರಾಂಪುರ ಚಂದ್ರಶೇಖರಯ್ಯ , ನಮ್ಮ ತಂದೆಯವರು ಚಿಕ್ಕರಾಂಪುರದಲ್ಲಿ 30 ವರ್ಷದಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಅದು ಈಗ ದೊಡ್ಡರಾಂಪುರಕ್ಕೆ ಸೇರಿದೆ, ತಂದೆಯವರು 1991ರಲ್ಲಿ ಅರ್ಜಿ ನೀಡಿದ್ದರೂ ಸಹ ಅವರ ಹೆಸರಿಗೆ ಆಗಿರಲಿಲ್ಲ. ಆಗಿನಿಂದಲೂ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ಸರ್ಕಾರದಲ್ಲಿ ಯಾವುದಾದರೂ ಯೋಜನೆಗೆ ಒಳಪಡಬೇಕೆಂದರೆ ಜಮೀನು ಇರಬೇಕು, ಇದುವರೆವಿಗೂ ಜಮೀನು ದೊರಕದೆ ನಮಗೆ ಯಾವ ಸೌಲಭ್ಯವೂ ದೊರಕದಂತಾಗಿದೆ.

         ಎಲ್ಲಾ ದಾಖಲಾತಿಗಳನ್ನು ಪಡೆದು ಬಗರ್‍ಹುಕುಂ ಕಮಿಟಿಗೆ ನೀಡಿದರೂ ಬಡವರ, ಅವಿದ್ಯಾವಂತರ ಕೂಗು ತಾಲ್ಲೂಕು ಕಚೇರಿಯಲ್ಲಿ ನಡೆಯುವುದಿಲ್ಲ, ಹಳ್ಳಿ ಜನರು ಬೆಳಗ್ಗೆಯೇ ತಾಲ್ಲೂಕು ಕಚೇರಿಗೆ ಬರುತ್ತಾರೆ. ಸಂಜೆ ವೇಳೆಗೆ ಅರ್ಜಿ ನೀಡಿ ವಾಪಸ್ ಹಿಂತಿರುಗುತ್ತಾರೆ. ನಾವು ನೀಡಿದ ಅರ್ಜಿ ಏನಾಯಿತು ಎಂಬುದು ತಿಳಿಯುವುದಿಲ್ಲ. ಅಷ್ಟೊತ್ತಿಗಾಗಲೇ ಬಲಾಡ್ಯರು ತಾಲ್ಲೂಕು ಕಚೇರಿಗೆ ದಾಳಿ ನಡೆಸುತ್ತಾರೆ, ನಾವು ಅಷ್ಟು ವರ್ಷದಿಂದ ಉಳುಮೆ ಮಾಡುತ್ತಿದ್ದರೂ ಅದು ಯಾವ ಊರಿಗೆ ಸೇರಿದೆ ಎಂಬುದು ತಿಳಿಯುತ್ತಿಲ್ಲ, ಅಧಿಕಾರಿಗಳು ಹೇಳುತ್ತಿಲ್ಲ ಎಂದರು.

          ಭೂ ರಹಿತರು ಸಾಕಷ್ಟು ತಾಲ್ಲೂಕಿನಲ್ಲಿ ಇದ್ದಾರೆ. ಅವರನ್ನು ಬಂಡವಾಳಗಾರರು ಹೆದರಿಸುತ್ತಿದ್ದಾರೆ. ಎಲ್ಲಾ ಜಾತಿಯಲ್ಲೂ ಬಡವರು ಇದ್ದಾರೆ. ಅವರೆಲ್ಲರಿಗೂ ಸಮಾನತೆಯಿಂದ ಭೂಮಿಯನ್ನು ನೀಡುವಂತೆ ಹೇಳುತ್ತಾರೆ.

             ಬಗರ್‍ಹುಕುಂಗೆ ಸಲ್ಲಿಕೆಯಾಗಿರುವ ಅರ್ಜಿಗಳು : ತಾಲ್ಲೂಕಿನಾದ್ಯಂತ ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಈವರೆವಿಗೂ 6201 ಅರ್ಜಿಗಳು ಸಲ್ಲಿಕೆಯಾಗಿವೆ. ಕಸಬಾ ಹೋಬಳಿ-548 ಅರ್ಜಿಗಳು, ಶೆಟ್ಟಿಕೆರೆ-540, ಕಂದಿಕೆರೆ-2250, ಹುಳಿಯಾರು-2054, ಹಂದನಕೆರೆ-809 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಕೆ 2019ರ ಮಾರ್ಚ್‍ವರೆವಿಗೂ ಇರುವುದರಿಂದ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಲಿವೆ.

          ಉಳ್ಳವರ ಪ್ರಾಬಲ್ಯ : ತಾಲ್ಲೂಕು ಆಡಳಿತದಿಂದ ಬಗರ್‍ಹುಕುಂ ಸಕ್ರಮೀಕರಣಕ್ಕೆ ಅರ್ಜಿ ಸ್ವೀಕಾರ ಪ್ರಾರಂಭವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನುಗಳ ಕಬಳಿಕೆ ಶುರುವಾಗಿದೆ. ಬಲಾಢ್ಯರು ಜಮೀನುಗಳನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದಾರೆ. ಉಳ್ಳವರು ತಮ್ಮ ಜಮೀನುಗಳನ್ನು ಇತರೆ ಸಂಬಂಧಿಗಳ ಹೆಸರಿನಲ್ಲಿ ಪಡೆಯಲು ಮುಂದಾಗಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿ ಅರ್ಹರಿಗೆ ಜಮೀನು ದೊರೆಯುವಂತೆ ನೋಡಿಕೊಳ್ಳುವುದು ತಾಲ್ಲೂಕು ಆಡಳಿತದ ಕೆಲಸ.

          ಬಗರ್‍ಹುಕುಂಗೆ ಅರ್ಜಿಗೆ ಆಹ್ವಾನ : ತಾಲ್ಲೂಕಿನ ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ತಾಲ್ಲೂಕು ಕಚೇರಿಯಲ್ಲಿ ಈಗಾಗಲೇ 2018ರ ನವಂಬರ್ ತಿಂಗಳಿನಿಂದ ಮಾರ್ಚ್ 2019ರವರೆಗೆ ಅರ್ಜಿ ಕರೆಯಲಾಗಿದೆ.
ಬಗರ್ ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ನಮೂನೆ-57ರಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು ಕಚೇರಿಯಲ್ಲಿ ಒಂದು ಕೌಂಟರ್ ಆರಂಭಿಸಲಾಗಿದೆ. ಅರ್ಜಿ ಸಲ್ಲಿಸಲು 100/-ರೂ ಶುಲ್ಕವನ್ನು ಪಾವತಿಸಬೇಕಾಗಿದೆ. ಅರ್ಜಿದಾರರು ಪುರಸಭಾ ವ್ಯಾಪ್ತಿಯಿಂದ 5.ಕಿ.ಮೀ ಹಾಗೂ ಪಟ್ಟಣ ಪಂಚಾಯ್ತಿಯಿಂದ 3.ಕಿ.ಮೀ ಒಳಗೆ ಇದ್ದರೆ ಅರ್ಜಿ ಸಲ್ಲಿಸಲು ಅವರು ಅರ್ಹರಲ್ಲ.

             ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು : ಅರ್ಜಿ ಸಲ್ಲಿಸುವ ಅರ್ಜಿದಾರರು ನಮೂನೆ-57ರ ಜೊತೆ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಆಧಾರ್ ಕಾರ್ಡ್ ನಕಲು, ಸರ್ವೆ ನಂಬರ್‍ಗಳ ಪಹಣಿ, ಅರ್ಜಿದಾರರಿಗೆ ಈ ಹಿಂದೆ ಮಂಜುರಾದ ಭೂಮಿಯ ವಿವರ, ಅರ್ಜಿದಾರರ ಕುಟುಂಬದ ಸದಸ್ಯರು ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡು ನಮೂನೆ-50 ಮತ್ತು ನಮೂನೆ-53ರಲ್ಲಿ ಸಕ್ರಮಕ್ಕಾಗಿ ಕೋರಿ ಅರ್ಜಿ ಸಲ್ಲಿಸಿದ ವಿವರ, ನಮೂನೆ-50 ಹಾಗೂ ನಮೂನೆ-53ರಲ್ಲಿ ಬಗರ್ ಹುಕುಂ ಸಕ್ರಮ ಸಮಿತಿಯಲ್ಲಿ ತಕರಾರು ತಃಖ್ತೆ ದಂಡ ಕಟ್ಟಿದ್ದರೆ ಅದರ ರಶೀದಿ ನಕಲು ಮತ್ತು ವಿವರ ಸಲ್ಲಿಸಬೇಕು. ಅರ್ಜಿದಾರರು ಹೊಂದಿರುವ ಜಮೀನು ಹಾಗೂ ಮಂಜೂರಿಗೆ ಕೋರಿದ ಜಮೀನು ಸೇರಿ 4-38 ಎ/ಗುಂ ಖುಷ್ಕಿ ಜಮೀನನ್ನು ಮಂಜೂರು ಮಾಡಲು ಅವಕಾಶವಿರುತ್ತದೆ.

            ರೈತರ ಬೇಡಿಕೆಗಾಗಿ ಅರ್ಜಿ ಸ್ವೀಕಾರ : ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಸಣ್ಣ ಹಿಡುವಳಿದಾರರ ಬೇಡಿಕೆ ಈಡೇರಿಸಲು ಬಗರ್‍ಹುಕುಂ ಅರ್ಜಿ ಪಡೆಯಲಾಗುತ್ತಿದೆ. ಈಗಾಗಲೇ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಬಗರ್‍ಹುಕುಂ ಸಾಗುವಳಿ ಚೀಟಿಗಾಗಿ ಅರ್ಜಿದಾರರು ಸರತಿ ಸಾಲಿನಲ್ಲಿ ನಿಂತು ಅರ್ಜಿ ಸ್ವೀಕರಿಸುತ್ತಿದ್ದಾರೆ. ಹಲವು ಬಾರಿ ಅರ್ಜಿ ಸಲ್ಲಿಸಿ ಸಕ್ರಮವಾಗದವರು ಈ ಬಾರಿಯೂ ಬಗರ್‍ಹುಕುಂ ಚೀಟಿಗಾಗಿ ಅರ್ಜಿ ನೀಡಿದ್ದಾರೆ.

          ಬಗರ್‍ಹುಕುಂ ಎಂದರೆ : ಸರ್ಕಾರಿ ಜಮೀನಿನಲ್ಲಿ ಸಣ್ಣಹಿಡುವಳಿದಾರರು ಮಾಡುತ್ತಿರುವ ಸಾಗುವಳಿಯನ್ನೇ ಬಗರ್‍ಹುಕುಂ ಎನ್ನಲಾಗುತ್ತದೆ. ಇದನ್ನು ಸಕ್ರಮ ಮಾಡಲು ಪ್ರತಿ ತಾಲ್ಲೂಕಿನಲ್ಲಿಯೂ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಗಳಿವೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link