ಚಳ್ಳಕೆರೆ
ಜಿಲ್ಲೆಯ ಬರಗಾಲದ ವಾಸ್ತವ ಸ್ಥಿತಿಯನ್ನು ಅರಿಯಲು ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರದ ಬರ ವೀಕ್ಷಣಾ ತಂಡ ಭಾನುವಾರ ಪಾವಗಡ ತಾಲ್ಲೂಕು ಮೂಲಕ ಚಳ್ಳಕೆರೆ ತಾಲ್ಲೂಕಿಗೆ ಆಗಮಿಸಿ ಪರಶುರಾಮಪುರ, ಚೌಳೂರು, ಪಿಲ್ಲಹಳ್ಳಿ, ಪುರ್ಲಹಳ್ಳಿ, ಚಟ್ಟೆಕಂಬ ಗೇಟ್ ಮುಂತಾದ ಕಡೆಗೆ ಭೇಟಿ ನೀಡಿ ಬರಗಾಲದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿತು.
ಕೇಂದ್ರ ಸರ್ಕಾರ ಬರ ವೀಕ್ಷಣಾ ತಂಡದ ಮುಖ್ಯಸ್ಥ ಮನುಷ್ ಚೌಧರಿ, ಸತ್ಯಕುಮಾರ್, ಶುಭಾಷ್ ಚಂದ್ರ ಮೀನಾ, ಡಾ.ಶಾಲಿನಿ ಸಕ್ಸೇನ ತಂಡವನ್ನು ತಾಲ್ಲೂಕಿನ ಗಡಿಭಾಗದ ಕೆಂಚಮ್ಮನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದು ಹಾಜರಿದ್ದು, ತಂಡವನ್ನು ಬರ ಮಾಡಿಕೊಂಡರು. ಜಿಲ್ಲಾಧಿಕಾರಿ ಡಾ.ಕೆ.ಗಿರೀಶ್ ಜಿಲ್ಲಾ ಆಡಳಿತದ ಪರವಾಗಿ ತಂಡ ಎಲ್ಲಾ ಸದಸ್ಯರಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸಹ ಜಿಲ್ಲೆಯ ಪರವಾಗಿ ಸ್ವಾಗತಿಸಿ ಇಲ್ಲಿನ ಬರದ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೂಡಲೇ ವರದಿ ನೀಡುವಂತೆ ವಿನಂತಿಸಿದರು.
ಪ್ರಾರಂಭದ ಹಂತದಲ್ಲಿ ಪರಶುರಾಮಪುರ ಗ್ರಾಮದ ಹಳೇ ಕೆರೆಗೆ ಭೇಟಿ ನೀಡಿದ ನಂತರ ಅಲ್ಲಿ ಕೆರೆ ಸಂಪೂರ್ಣವಾಗಿ ಒಣಗಿದ್ದನ್ನು ವೀಕ್ಷಿಸಿದರು. ಕೆರೆಯ ಒಳಭಾಗ ಹಾಗೂ ಕೆರೆಯ ದಂಡೆಯ ಮೇಲೆ ಬಳ್ಳಾರಿ ಜಾಲಿ ಗಿಡಗಳು ಬೆಳೆದಿದ್ದು, ಇದನ್ನು ತಂಡ ವೀಕ್ಷಿಸಿತು. ಗ್ರಾಮದ ಐತಿಹಾಸಿಕ ಹಳೇ ಕೆರೆ ಇದಾಗಿದ್ದು, ಸುಮಾರು 30 ವರ್ಷಗಳಿಂದ ಈ ಕೆರೆಗೆ ನೀರು ಬಂದಿಲ್ಲವೆಂದು ಗ್ರಾಮಸ್ಥರು ಬರಗಾಲದ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು. ನಂತರ ಅಲ್ಲಿಂದ ನೇರವಾಗಿ ಪರಶುರಾಮಪುರದ ಅಮೃತ ಮಹಲ್ ಕಾವಲು ಬಳಿ ನಡೆಯುತ್ತಿರುವ 5 ಲಕ್ಷ ಮೌಲ್ಯದ ನರೇಗಾ ಕಾಮಗಾರಿಯನ್ನು ಬರಗಾಲ ತಂಡ ವೀಕ್ಷಣೆ ಮಾಡಿತು.
ಈ ಸಂದರ್ಭದಲ್ಲಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೂಲಿಕಾರರಾದ ತಿಮ್ಮರಾಜು, ಮಹಾಲಕ್ಷ್ಮಿ ಎಂಬುವವರೊಂದಿಗೆ ಕೇಂದ್ರ ತಂಡ ಸದಸ್ಯರು ಕೂಲಿ ಹಾಗೂ ಕೆಲಸ ನೀಡುವ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದರು.
ನಂತರ ಅಲ್ಲಿಂದ ನೇರವಾಗಿ ಪರಶುರಾಮಪುರ ಗ್ರಾಮಕ್ಕೆ ತೆರಳಿ ಕುಡಿಯುವ ನೀರಿನ ಬಗ್ಗೆ ಗ್ರಾಮಸ್ಥರಿಂದ ಸಂಪೂರ್ಣ ಮಾಹಿತಿ ಪಡೆಯಿತು. ಪರಶುರಾಮಪುರದಿಂದ ದೊಡ್ಡ ಗೊಲ್ಲರ ಹಟ್ಟಿಗೆ ಮೂರು ಟ್ಯಾಂಕ್‍ಗಳಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದರು. ಈ ಬಗ್ಗೆ ಅಲ್ಲೇ ಇದ್ದ ಸಾರ್ವಜನಿಕರನ್ನು ತಂಡ ಪ್ರಶ್ನಿಸಿತು. ಟ್ಯಾಂಕ್ ಮುಂದೆ ಇಡಲಾಗಿದ್ದ ನೀರಿನ ಖಾಲಿ ಕೊಡಗಳನ್ನು ತಂಡ ವೀಕ್ಷಿಸಿತು. ಅಲ್ಲಿಂದ ನೇರವಾಗಿ ವೇದಾವತಿ ನದಿ ತಟಕ್ಕೆ ಬಂದ ತಂಡ, ನದಿ ಸಂಪೂರ್ಣ ಒಣಗಿದ್ದನ್ನು ಕಂಡರು.
ಅಲ್ಲಿಂದ ಚೌಳೂರು ಗ್ರಾಮದ ನಾಗಣ್ಣ ಬಿನ್ ಅಜ್ಜಪ್ಪ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ನಿರ್ಮಾಣ ಮಾಡಿದ್ದ ಕೃಷಿ ಹೊಂದ ಕಾಮಗಾರಿಯನ್ನು ತಂಡ ವೀಕ್ಷಿಸಿತು. ನಂತರ ಚಟ್ಟೆಕಂಬಕ್ಕೆ ತೆರಳಿ ಅಲ್ಲಿ ತಿಪ್ಪೇಸ್ವಾಮಿ ಎಂಬುವವರ ಒಣಗಿದ ತೆಂಗಿನ ತೋಟವನ್ನು ವೀಕ್ಷಿಸಿತು. ಇದೇ ಸಂದರ್ಭದಲ್ಲಿ ಅದೇ ಗ್ರಾಮದಲ್ಲಿ ಮಲ್ಲಪ್ಪ ಬಿನ್ ಮಲ್ಲಪ್ಪ ಎಂಬುವವರ ಸುಮಾರು 3 ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತಿದ್ದು, ಶೇಂಗಾ ಸಂಪೂರ್ಣವಾಗಿ ಒಣಗಿದ್ದು, ರೈತ ಸುಮಾರು 60 ಸಾವಿರ ಖರ್ಚು ಮಾಡಿರುವುದಾಗಿ ತಂಡಕ್ಕೆ ತಿಳಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಡಿಡಿ ಸವಿತಾ ಮಾಹಿತಿ ನೀಡಿ, ತೆಂಗಿನ ತೋಟ ಒಣಗಿದ ಬಗ್ಗೆ ವಿವರನ್ನು ತಂಡಕ್ಕೆ ನೀಡಿದರು.
ಇದೇ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಕರೀಕೆರೆ ಭೀಮಾರೆಡ್ಡಿ, ರೆಡ್ಡಿಹಳ್ಳಿ ವೀರಣ್ಣ, ತಿಪ್ಪೇಸ್ವಾಮಿ, ಬಾಲರಾಜು ದಯಮಾಡಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ನೆರವು ನೀಡುವಂತೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿತು. ನಿರಂತರ ಬರಗಾಲದ ಹಿನ್ನೆಲ್ಲೆಯಲ್ಲಿ ಮಳೆ ಬೆಳೆ ಇಲ್ಲದೆ ಈ ಭಾಗದ ರೈತರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ರೈತ ಸಂಘದ ಮುಖಂಡರು. ಮನವಿ ಮಾಡಿದರು. ಶಾಸಕ ಟಿ.ರಘುಮೂರ್ತಿ ಸಹ ರೈತರ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡುವಂತೆ ತಿಳಿಸಿದರು. ಜಿಲ್ಲಾಧಿಕಾರಿ ಕೆ.ಗಿರೀಶ್ ತಾಲ್ಲೂಕಿನ ಸಂಪೂರ್ಣ ವೈಪಲ್ಯದ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಬರಗಾಲ ಪ್ರದೇಶಗಳಿಗೆ ಭೇಟಿ ನೀಡಿದ ತಂಡದ ಮುಖ್ಯಸ್ಥರಿಗೆ ವಿಶೇಷ ಮನವಿ ಮಾಡಿ, ಈಗಾಗಲೇ ಕೃಷಿ ಇಲಾಖೆ ವತಿಯಿಂದ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಇಲ್ಲಿನ ರೈತ ಸಮುದಾಯ ಬರಗಾಲದ ಪರಿಸ್ಥಿತಿಯನ್ನು ನಿಬಾಯಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ಧಾರೆ. ಕೇಂದ್ರ ಸರ್ಕಾರ ರೈತರ ಹಿತದೃಷ್ಠಿಯಿಂದ ಪರಿಹಾರವನ್ನು ಸಮರ್ಪಕವಾಗಿ ನೀಡಬೇಕು. ಈಗಿರುವ ಒಂದು ಹೆಕ್ಟೇರ್ ಪ್ರದೇಶಕ್ಕೆ 6500 ನೀಡುತ್ತಿದ್ದು ಇದನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.
ತಂಡದ ಮುಖ್ಯಸ್ಥರ ಸ್ಪಷ್ಟನೆ :- ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ತಂಡ ಮುಖ್ಯಸ್ಥರ ಮನುಷ್ ಚೌಧರಿ ಪತ್ರಿಕೆಯೊಂದಿಗೆ ಮಾತನಾಡಿ, ಕರ್ನಾಟಕ ಸರ್ಕಾರ ಕಳೆದ ಆಕ್ಟೋಬರ್ 18ರಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ಬರಗಾಲ ಸ್ಥಿತಿಯ ಬಗ್ಗೆ ವರದಿ ನೀಡಿದ್ದರು. ರಾಜ್ಯದ 176 ತಾಲ್ಲೂಕುಗಳಲ್ಲಿ ಸಂಪೂರ್ಣ ಬರವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲ್ಲೆಯಲ್ಲಿ ಕೇಂದ್ರ ಸರ್ಕಾರ ಅಮಿತಾಬ್ ಗೌತಮ್ ಎಂಬುವವರ ನೇತೃತ್ವದಲ್ಲಿ ಒಟ್ಟು ನಾಲ್ಕು ತಂಡಗಳನ್ನು ರಚಿಸಿ ಎ,ಬಿ,ಸಿ,ಡಿ ಎಂದು ತಂಡಗಳನ್ನು ನಮೂದಿಸಿ ಒಂದು ತಂಡಕ್ಕೆ ನಾಲ್ಕು ಜಿಲ್ಲೆಗಳ ಜವಾಭ್ದಾರಿಯನ್ನು ನೀಡಿತು. ನಾನು ಮತ್ತು ತನ್ನ ತಂಡ ಸಿ ತಂಡವಾಗಿದ್ದು, ಜಿಲ್ಲೆಗೆ ಆಗಮಿಸಿ ಬರದ ಪರಿಸ್ಥಿತಿ ಅಧ್ಯಯನ ನಡೆಸಿದ್ದೇವೆ. ತಂಡ ಮುಖ್ಯಸ್ಥರಾದ ಅಮಿತಾಬ್ ಗೌತಮ್‍ರವರಿಗೆ ಇಲ್ಲಿನ ಸಂಪೂರ್ಣ ವರದಿಯನ್ನು ಸಿದ್ದ ಪಡಿಸಿ ನೀಡಿತ್ತೇವೆ. ಇಲ್ಲಿಗೆ ಆಗಮಿಸಿದ ತಂಡ ಇಲ್ಲಿನ ವಾಸ್ತವ ಪರಿಸ್ಥಿತಿಯ ಬಗ್ಗೆ ಬೇರು ಮಟ್ಟದಲ್ಲಿ ಪರಿಶೀಲನೆ ನಡೆಸಿದ್ದೇವೆ. ಇಲ್ಲಿ ಬರಗಾಲದ ಸ್ಥಿತಿ ಇರುವುದು ನೂರಕ್ಕೆ ನೂರು ಸತ್ಯವಾಗಿದ್ದು, ಇದನ್ನು ತಮ್ಮ ತಂಡ ಗಂಭೀರವಾಗಿ ಪರಿಗಣಿಸಿದೆ. ಈ ಭಾಗದ ಜನರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ವರದಿ ಸಲ್ಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರವೀಂದ್ರ, ಪ್ರೊಬೆಷನರಿ ಜಿಲ್ಲಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯಬಸವರಾಜನ್, ಜಿಲ್ಲಾ ಕೃಷಿ ನಿರ್ದೇಶಕ ನಿಂಗಪ್ಪ ಕಳ್ಳಣನವರ್, ಜಿಲ್ಲಾ ತೋಟಗಾರಿಕೆ ಅಧಿಕಾರಿ ಸವಿತಾ, ಜಿಲ್ಲಾ ಪಿಆರ್‍ಇ ಇಂಜಿನಿಯರ್ ಬಾಲಾರಾಜು, ಉಪವಿಭಾಗಾಧಿಕಾರಿ ವಿಜಯಕುಮಾರ್, ಉಪ ಕೃಷಿ ನಿರ್ದೇಶಕಿ ಡಾ.ಸುಜಾತ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇಒ ಈಶ್ವರಪ್ರಸಾದ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ರೈತ ಮುಖಂಡರಾದ ಚನ್ನಕೇಶವ, ಗುಜ್ಜಾರಪ್ಪ, ಕೃಷಿ ಅಧಿಕಾರಿ ಮಾರುತಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








