ಸಾಂಸ್ಕೃತಿಕ ಭವನದ ಭೋಜನಾಲಯ ಉದ್ಘಾಟಿಸಿದ ಎಸ್.ಪಿ.ಮುದ್ದಹನುಮೆಗೌಡ

ತುಮಕೂರು

         ಒಬ್ಬರಿಂದ ಉಪಕಾರ ಪಡೆದ ಮೇಲೆ ಅವರ ಋಣ ತೀರಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ. ಛಲವಾದಿ ಸಮುದಾಯದವರು ಕೈ ಹಿಡಿದಿದ್ದರಿಂದ ಅಧಿಕಾರ ಪಡೆದಿದ್ದೇವೆ. ಅವರ ಕಾರ್ಯ ಯೋಜನೆಗಳಿಗೆ ನನ್ನ ಸಹಮತ ಇದ್ದೇ ಇರುತ್ತದೆ ಎಂದು ತುಮಕೂರು ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೆಗೌಡ ತಿಳಿಸಿದರು.

         ನಗರದ ಸಾಯಿಬಾಬಾ ನಗರದಲ್ಲಿನ ಸಾಂಸ್ಕತಿಕ ಭವನದಲ್ಲಿ ದಲಿತ ಛಲವಾದಿ ಮಹಾಸಭಾದ ವತಿಯಿಂದ ಸಾಂಸ್ಕೃತಿಕ ಭವನದ ಭೋಜನಾಲಯದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿ ಡಿಸಿಎಂ ಎಂದರೆ ಡೆಪ್ಯುಟಿ ಚೀಪ್ ಮಿನಿಸ್ಟರ್ ಮತ್ತು ದಲಿತ ಛಲವಾದಿ ಮಹಾಸಭಾ ಎಂದು ಬಣ್ಣಿಸಿ, ಲೋಕಸಭಾ ಸದಸ್ಯನಾಗುವಲ್ಲಿ ಡಾ.ಜಿ.ಪರಮೇಶ್ವರವರ ಪಾತ್ರ ಸಾಕಷ್ಟಿದೆ. ಆದರೆ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭಿಸಿದ್ದರು. ಈಗ ಅವರು ಡಿಸಿಎಂ ಆಗಲು ನಮ್ಮ ಕೈಯಲ್ಲಾದಷ್ಟು ಕಾರ್ಯ ಮಾಡಿದ್ದೇವೆ ಎಂಬ ತೃಪ್ತಿ ಇದೆ ಎಂದರು.

       ನ್ಯಾಯವಾದಿಗಳಾಗಿ ಕೆಲಸ ಮಾಡಿ ಬಂದವರಿಗೆ ಇಂತಹ ರಾಜಕೀಯದಲ್ಲಿ ಪಳಗುವುದು ತುಂಬಾ ಕಷ್ಟ. ಆದರೆ ಇಲ್ಲಿನ ಕುತಂತ್ರ ರಾಜಕಾರಣವನ್ನು ಎದುರಿಸಿ ಸಮಾಜ ಸೇವೆ ಮಾಡುತ್ತಿದ್ದೇನೆ. ನಮ್ಮ ಸರ್ಕಾರ ಸುಭದ್ರವಾಗಿದ್ದು, ಡಾ.ಜಿ.ಪರಮೇಶ್ವರ್ ಉತ್ತಮ ಆಡಳಿತ ನೀಡುತ್ತಿದ್ದಾರೆ. ಪರಮೇಶ್ವರ್ ಅವರು ಪ್ರತಿಭಾನ್ವಿತರಾಗಿದ್ದು, ಸೌಜನ್ಯತೆಯನ್ನು ಹೊಂದಿದ್ದಾರೆ. ಅವರು ಶುದ್ಧರಾಗಿದ್ದು, ಯಾರಿಗೂ ಅಂಜುವುದಿಲ್ಲ. ಅದೇ ರೀತಿ ನಮ್ಮ ಕೈ ಶುದ್ಧವಿದ್ದರೆ ಯಾರಿಗೂ ಅಂಜುವ ಅವಶ್ಯಕತೆಯಿಲ್ಲ. ಹಾಗಾಗಿ ತುಮಕೂರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಾ ತುಮಕೂರು ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅದರಂತೆಯೇ ನೀವು ಹೆಚ್ಚಾಗಿ ಸಂಘಟಿತರಾಗಬೇಕು. ಎಲ್ಲರೂ ಶಿಕ್ಷಣ ಪಡೆಯಬೇಕು. ಇದಕ್ಕೆ ನಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದರು.

          ಲೋಕಾರ್ಪಣೆಗೊಂಡ ಕಟ್ಟಡವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಇಲ್ಲಿಯೇ ಹಾಸ್ಟೆಲ್ ವ್ಯವಸ್ಥೆ ಮಾಡಿದರೆ ಶಿಕ್ಷಣ ಪಡೆಯುವವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದಕೆಕ ಬೇಕಾದ ಮೊತ್ತದ ಬಗ್ಗೆ ಯೋಜನೆ ಹಾಕಿಕೊಟ್ಟರೆ ಅದನ್ನು ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದಲೇ ಅನುದಾನ ಬರುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಮಕ್ಕಳಿಗೆ ಶಿಕ್ಷಣ ಅತಿ ಮುಖ್ಯ. ಒಂದು ಮನೆಯ ಮಗುವಿಗೆ ಶಿಕ್ಷಣ ನೀಡಿದರೆ ಆ ಮಗುವು ಮನೆಯನ್ನೇ ಪೋಷಣೆ ಮಾಡುವ ಶಕ್ತಿಯನ್ನು ಗಳಿಸಿಕೊಳ್ಳುತ್ತದೆ. ಜತೆಗೆ ನಿಮ್ಮಲ್ಲಿ ಸಂಘಟನೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ , ಹೋರಾಟದಿಂದಲೇ ನಮ್ಮ ಹಕ್ಕುಗಳನ್ನು ಪಡೆಯಬೇಕು ಎಂದರು.

         ಕಾರ್ಯಕ್ರಮದಲ್ಲಿ ಖಜಾಂಚಿ ಸಿದ್ದನಂಜಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಹರ್ತಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಎನ್.ಹನುಮಂತಪ್ಪ, ಬುದ್ಧ ಪ್ರತಿಷ್ಠಾನ ಸಂಸ್ಥೆಯ ಬಿ.ಪಿ.ಹನುಮಂತರಾಯಪ್ಪ, ದಲಿತ ಛಲವಾದಿ ಸಂಸ್ಥಾಪಕ ಅಧ್ಯಕ್ಷ ಡಾ.ರಂಗರಾಜು, ಆರೋಗ್ಯ ಇಲಾಖೆಯ ಶ್ರೀನಿವಾಸ್, ನಂಜುಂಡಯ್ಯ, ಎಂ.ಎನ್.ಮೂರ್ತಿ, ರಂಗಯ್ಯ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. ಕಾರ್ಯದರ್ಶಿ ನಂಜುಂಡಿ ಸ್ವಾಗತ ಮಾಡಿದರೆ, ಎಚ್.ಬಿ.ಪುಟ್ಟಬೋರಯ್ಯ ನಿರೂಪಿಸಿ, ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link