ಧಾರ್ಮಿಕ ಭಾವನೆಯಿಂದ ಜಂಜಾಟಗಳು ದೂರ : ಹನುಮಂತನಾಥ ಸ್ವಾಮೀಜಿ

ಕೊರಟಗೆರೆ

     ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳು ಹೆಚ್ಚಾದಂತೆಲ್ಲಾ ಮನುಷ್ಯನಲ್ಲಿ ಧಾರ್ಮಿಕ ಚಿಂತನೆಗಳು ಮೂಡಲಿವೆ. ಮನುಷ್ಯನ ಜನ್ಮ ಪಾವನವಾಗಬೇಕಾದರೆ ಭಗವಂತನ ಸೇವೆ ಮಾಡಬೇಕು. ಮನುಷ್ಯನಲ್ಲಿ ಧಾರ್ಮಿಕ ಭಾವನೆ ಮೂಡಿದಂತೆಲ್ಲ ನಿಷ್ಕಲ್ಮಷವಾದ ಮನಸ್ಸು ಮೂಡಲು ಭಗವಂತ ಪ್ರೇರಣೆ ನೀಡಲಿದ್ದಾನೆ ಎಂದು ಎಲೆರಾಂಪುರ ಕುಂಚಿಟಿಗ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಅವರು ಭಾನುವಾರದಂದು ತಾಲ್ಲೂಕಿನ ನೀಲಗೊಂಡನಹಳ್ಳಿ ಗ್ರಾಮದಲ್ಲಿ ನೂತನ ಶ್ರೀ ಬಸವೇಶ್ವರ ದೇವಾಲಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಧಾರ್ಮಿಕ ಕಾರ್ಯಕ್ರಮದಲ್ಲಿ ಮನುಷ್ಯ ಹೆಚ್ಚೆಚ್ಚು ತೊಡಗಿಸಿಕೊಂಡಂತೆಲ್ಲ ಸುಸಂಸ್ಕøತನಾಗಲಿದ್ದಾನೆ ಎಂದರು.

      ವಿದ್ಯಾರ್ಥಿಗಳು ಶಿಕ್ಷಣದ ಗುಣಮಟ್ಟವನ್ನು ಆಧರಿಸಿ ಜೀವನ ರೂಢಿಸಿಕೊಳ್ಳುವ ಉದ್ದೇಶದಿಂದ ವ್ಯವಹಾರಿಕವಾಗಿ ಆರ್ಥಿಕ ಗುಣಮಟ್ಟ ಹೆಚ್ಚಿಸುವಂತಹ ಡಾಕ್ಟರ್ ಹಾಗೂ ಎಂಜಿನಿಯರ್ ಆಗಬೇಕು ಎಂದು ಬಯಸುತ್ತಿದ್ದಾರೆಯೆ ವಿನಹ, ಸುಸಂಸ್ಕøತ ವ್ಯಕ್ತಿಯಾಗಿ ಮಾರ್ಪಡುವ ಧಾರ್ಮಿಕ ವಿಚಾರಗಳಲ್ಲಿ ಅಳವಡಿಸಿಕೊಳ್ಳುವ ಮನಸ್ಥಿತಿ ವಿದ್ಯಾರ್ಥಿಗಳಿಗಿರಲಿ ಪೋಷಕರಲ್ಲಿಯೂ ಇಲ್ಲದಿರುವುದು ವಿಷಾದನೀಯ. ಧಾರ್ಮಿಕ ವಿಚಾರಗಳಲ್ಲಿ ತೊಡಗಿಸಿಕೊಂಡಂತೆಲ್ಲ ಮನುಷ್ಯನ ಜೀವನ ಶೈಲಿ ಬದಲಾಗಲಿದೆ. ಜೊತೆಗೆ ತನ್ನ ಎಲ್ಲಾ ಜಂಜಾಟಗಳಿಂದ ಹೊರ ಬರಲು ಧಾರ್ಮಿಕ ಕ್ಷೇತ್ರ ಒಂದೆ ಮಾರ್ಗ ಎಂಬ ಅರಿವು ಮೂಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.

      ಜಿ.ಪಂ. ಸದಸ್ಯ ಶಿವರಾಮಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆ ಒಗ್ಗೂಡಲು ದೇವಾಲಯಗಳು ಸೇರಿದಂತೆ ಧಾರ್ಮಿಕ ಕಾರ್ಯಗಳು ಜಾತ್ಯತೀತವಾಗಿ ಬೆಸುಗೆ ಹಾಕುವಂತಹ ಕೆಲಸವಾಗುವುದರಿಂದ ಹಳ್ಳಿಗಾಡಿನ ಜನ ಸ್ವಾರ್ಥ ಬಿಟ್ಟು, ಧಾರ್ಮಿಕ ಕಾರ್ಯಗಳಲ್ಲಿ ಒಂದಾಗುವಂತೆ ತಿಳಿಸಿದರು.

      ಪ.ಪಂ. ಸದಸ್ಯರಾದ ಎ.ಡಿ. ಬಲರಾಮಯ್ಯ ಮಾತನಾಡಿ ಸಮಾಜದಲ್ಲಿ ಮಠ ಮಾನ್ಯಗಳು, ದೇವಾಲಯಗಳು ಹೆಚ್ಚಾಗುತ್ತಿದ್ದು, ಜೊತೆಗೆ ಭಕ್ತಿ ಹಾಗೂ ದೇವರ ಕೆಲಸಗಳು ಸಹ ಹೆಚ್ಚಾಗುತ್ತಿವೆ. ಆದರೂ ಸಹ ಮನುಷ್ಯ ಸಮಾಜದ ವಿರುದ್ದವಾಗಿ ನಡೆದುಕೊಳ್ಳುತ್ತಿರುವುದು ಆತಂಕ ಮೂಡಿಸುತ್ತಿದ್ದು, ಹುಟ್ಟು ಹಾಗೂ ಸಾವು ಎರಡೂ ಖಚಿತ ಎಂಬುದನ್ನು ಮನುಷ್ಯ ಅರ್ಥ ಮಾಡಿಕೊಂಡು ಸನ್ಮಾರ್ಗದ ಕಡೆ ಹೋದಾಗ ಮಾತ್ರ ಜೀವನ ಸಾರ್ಥಕ ಎಂದರು.

      ಒಕ್ಕಲಿಗ ಸಮಾಜದ ಮುಖಂಡರಾದ ಆಡಿಟರ್ ನಾಗರಾಜು ಮಾತನಾಡಿ, ಸಮಾಜ ಒಳಿತಿನ ಕಡೆ ಸಾಗಬೇಕಾದರೆ ಹೆಚ್ಚೆಚ್ಚು ಧಾರ್ಮಿಕ ಕಾರ್ಯಗಳು ನಡೆಯಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳಿಗಿಂತಲೂ ನಗರ ಪ್ರದೇಶಗಳಲ್ಲಿ ಹೆಚ್ಚು ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಧಾರ್ಮಿಕ ಚಟುವಟಿಕೆಗಳು ನಡೆದಂತೆಲ್ಲಾ ಮನುಷ್ಯನ ಜೀವನದಲ್ಲಿ ನೆಮ್ಮದಿಯ ಜೊತೆಗೆ ಆರ್ಥಿಕವಾಗಿ ಸದೃಢರಾಗಲಿದ್ದಾನೆ ಎಂಬುವ ಸತ್ಯ ಗ್ರಾಮೀಣ ಜನತೆ ಅರಿಯಬೇಕಿದೆ ಎಂದರು.

     ಬೆಂಗಳೂರಿನ ಎಂ.ಜಿ.ಎಂ ಪಬ್ಲಿಕ್ ಸ್ಕೂಲ್‍ನ ಸಂಸ್ಥಾಪಕರಾದ ಹನುಮಂತರಾಯಪ್ಪ ಮಾತನಾಡಿ, ಕೊರಟಗೆರೆ ತಾಲ್ಲೂಕಿನ ವ್ಯಾಪ್ತಿಗೆ ಶಾಶ್ವತ ನೀರಾವರಿ ಯೋಜನೆಯ ಅಗತ್ಯತೆ ಇದ್ದು, ಕೋಳಾಲ ವ್ಯಾಪ್ತಿಯಲ್ಲಿ ಕೈಗೊಳ್ಳುತ್ತಿರುವ ಎತ್ತಿನಹೊಳೆ ಯೋಜನೆಯಿಂದ ಬಹಳಷ್ಟು ರೈತರ ಬಾಳು ಹಸನಾಗುವ ದೃಷ್ಟಿಯಿಂದ ನೀರಾವರಿ ಯೋಜನೆಯ ಸಫಲತೆಗೆ ಶ್ರೀ ಗಳು ಮುಂದಾಳತ್ವ ವಹಿಸಿಕೊಳ್ಳಬೇಕು. ಜೊತೆಗೆ ಈ ಭಾಗದಲ್ಲಿ ಭೂಮಿ ಕಳೆದುಕೊಳ್ಳುವ ರೈತರ ಆಶ್ರಯಕ್ಕೆ ನಿಂತು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಕ್ಕದ ತಾಲ್ಲೂಕಿನ ಜನತೆಗೆ ನೀಡುವ ಹಣದ ಮೊತ್ತದಷ್ಟೆ ಸಹಾಯ ಧನವನ್ನು ಕೊಡಿಸಿಕೊಡುವ ನಿಟ್ಟಿನಲ್ಲಿ ಶ್ರೀಗಳು ಪ್ರಮುಖ ಪಾತ್ರ ವಹಿಸಬೇಕು ಎಂದರು.

      ತಾ.ಪಂ. ಅಧ್ಯಕ್ಷ ಕೆಂಪರಾಮಯ್ಯ ಮಾತನಾಡಿ, ಧಾರ್ಮಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ತಾಳಿ ಕೋಳಾಲ ವ್ಯಾಪ್ತಿಯ ಅನೇಕ ದೇವಾಲಯಗಳಿಗೆ ಈ ಹಿಂದಿನ ತಾ.ಪಂ. ಅಧ್ಯಕ್ಷೆ ಸುಕನ್ಯಾ ಮಂಜುನಾಥ್ ಅವರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಈ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಶ್ರೀ ಬಸವೇಶ್ವರ ದೇವಸ್ಥಾನದ ಗುದ್ದಲಿ ಪೂಜೆ ಸಂದರ್ಭದಲ್ಲಿ ಪರಮೇಶ್ವರ್ ಅವರನ್ನು ಶಾಸಕರಾಗಿ ಆಯ್ಕೆ ಮಾಡಿದರೆ, ನಾನೆ ಸ್ವತಹ ಮುಂದೆ ನಿಂತು ಈ ದೇವಸ್ಥಾನ ಪೂರ್ಣಗೊಳಿಸುತ್ತೇನೆ ಎಂದು ನೀಡಿದ್ದ ಭರವಸೆಯನ್ನು ಇಂದು ಈಡೇರಿಸಿದ್ದಾರೆ. ಕೋಳಾಲ ವ್ಯಾಪ್ತಿಯಲ್ಲಿ ಜರುಗುವ ಮುಂದಿನ ಧಾರ್ಮಿಕ ಕೆಲಸಗಳಿಗೆ ನಾವು ಸಹ ಕೈ ಜೋಡಿಸಲಿದ್ದೇವೆ ಎಂದು ಭರವಸೆ ನೀಡಿದರು.

        ಈ ಸಂದರ್ಭದಲ್ಲಿ ಗ್ರಾಪಂ. ಅಧ್ಯಕ್ಷೆ ಅಮ್ಮಾಜಮ್ಮ, ಮಾಜಿ ತಾ.ಪಂ. ಅಧ್ಯಕ್ಷೆ ಹಾಗೂ ರಾಷ್ಟ್ರೀಯ ವಿಕಾಸ ರತ್ನ ಪ್ರಶಸ್ತಿ ಪುರಸ್ಕøತ ಸುಕನ್ಯಾ ಮಂಜುನಾಥ್, ತಾ,ಪಂ ಸದಸ್ಯ ಬೋರಣ್ಣ, ಮಾಜಿ ತಾ,ಪಂ ಉಪಾಧ್ಯಕ್ಷ ಶ್ರೀನಿವಾಸ್, ದೇವಾಲಯದ ಸಂಚಾಲಕರಾದ ಮಂಜುನಾಥ್, ಮುಖಂಡರಾದ ಸಂಕೇನಹಳ್ಳಿ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.

Recent Articles

spot_img

Related Stories

Share via
Copy link