ತುಮಕೂರು
ತುಮಕೂರು ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯವನ್ನು ಸೂಕ್ತ ಹಾಗೂ ಸುರಕ್ಷಿತವಾಗಿ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗಿರುವ ಅಜ್ಜಗೊಂಡನಹಳ್ಳಿಯ ‘‘ಘನತ್ಯಾಜ್ಯ ವಿಲೇವಾರಿ ಘಟಕ’’ವು ಹಿಂದಿನ ಚುನಾಯಿತ ಮಂಡಳಿ ಒಳಗೊಂಡು ಆಡಳಿತಗಾರರ ನಿಸ್ಸೀಮ ನಿರ್ಲಕ್ಷೃಕ್ಕೊಳಗಾಗಿದ್ದು, ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಬಹುತೇಕ ಸ್ಥಗಿತದ ಹಂತ ತಲುಪಿದೆಯೆಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಘಟಕದಲ್ಲಿ ಸಂಗ್ರಹಗೊಳ್ಳುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾದ ಗುತ್ತಿಗೆದಾರರಿಲ್ಲ; ಹಿಂದೆ ಇದ್ದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿಲ್ಲ; ಅಲ್ಲಿ ಕೆಲಸಕ್ಕಿದ್ದ ಕಾರ್ಮಿಕರಿಗೆ ವೇತನವಿಲ್ಲದೆ ಕೆಲಸ ಬಿಟ್ಟ ಕಾರ್ಮಿಕರು; ವೇತನವಿಲ್ಲದೆ ಸೆಕ್ಯೂರಿಟಿ ಗಾರ್ಡ್‌ಗಳೂ ಕೆಲಸ ಬಿಟ್ಟಿರುವುದು; ಸಿಸಿ ಟಿವಿ ಸೇರಿದಂತೆ ವಿವಿಧ ಮೂಲ ಸೌಲಭ್ಯ ಗಳಿಲ್ಲದಿರುವುದು- ಹೀಗೆ ನಾನಾ ನ್ಯೂನತೆಗಳಿಂದ ಪ್ರಸ್ತುತ ಇಡೀ ಘಟಕವು ಮುಚ್ಚಿಹೋಗುವ ಭೀತಿಯಲ್ಲಿದೆ ಎನ್ನಲಾಗಿದೆ.
ದೈನಿಕ 100 ಟನ್ ಕಸ
ಪ್ರತಿನಿತ್ಯ ತುಮಕೂರು ನಗರದಲ್ಲಿ ಸರಿಸುಮಾರು 100 ಟನ್‌ಗಳಷ್ಟು ಕಸ ಸಂಗ್ರಹವಾಗುತ್ತಿದೆ. ಈ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತುಮಕೂರು ತಾಲ್ಲೂಕಿನ ಅಜ್ಜಗೊಂಡನಹಳ್ಳಿಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ಕೋಟ್ಯಂತರ ರೂ. ವೆಚ್ಚಮಾಡಿ 41 ಎಕರೆ ವಿಸ್ತಾರದ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿದೆ. ಅನೇಕ ಯಂತ್ರೋಪಕರಣಗಳನ್ನೂ ಅಲ್ಲಿ ಅಳವಡಿಸಿದೆ. ನಗರದಲ್ಲಿ ದಿನವೂ ಸಂಗ್ರಹವಾಗುವ ಕಸವನ್ನು ವಿಲೇವಾರಿಗಾಗಿ ಅಲ್ಲಿಗೆ ಸಾಗಿಸಲಾಗುತ್ತಿದೆ. ಆದರೆ ಈಗ ಅಲ್ಲಿ ಕಸವು ವೈಜ್ಞಾನಿಕವಾಗಿ ವಿಲೇವಾರಿ ಆಗದೆ, ಕೇವಲ ರಾಶಿ ಬೀಳುತ್ತಿದೆ ಎನ್ನಲಾಗುತ್ತಿದ್ದು, ಇದೇ ಈಗ ಆತಂಕಕ್ಕೆ ಕಾರಣವಾಗುತ್ತಿದೆ ಎಂದು ವಿವಿಧ ಮೂಲಗಳಿಂದ ತಿಳಿದುಬಂದಿದೆ.
ಮಾರ್ಚ್‌ನಿಂದ ನಿರ್ವಹಣೆ ಇಲ್ಲ
ಸಾಧನಾ ಎನ್ವಿರೋ ಇಂಜಿನಿಯರಿಂಗ್ ಸರ್ವೀಸ್ ಎಂಬ ಖಾಸಗಿ ಸಂಸ್ಥೆಯು ಈ ಘಟಕದ ನಿರ್ವಹಣೆಯ ಗುತ್ತಿಗೆಯನ್ನು ಪಡೆದಿತ್ತು. ಹಿಂದಿನ ಕೆಲವು ವರ್ಷಗಳಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು. ಈ ಸಂಸ್ಥೆಯ ಗುತ್ತಿಗೆ ಅವಧಿಯು 2018 ರ ಮಾರ್ಚ್ 5 ಕ್ಕೇ ಅಂತ್ಯಗೊಂಡಿದ್ದು, ಅಂದಿನಿಂದ ಘಟಕದ ಸ್ಥಿತಿಯು ‘‘ಹೇಳುವವರು-ಕೇಳುವವರು ಯಾರೂ ಇಲ್ಲ’’ ಎನ್ನುವಂತಾಗಿದೆ.
ಮಾಸಿಕ 9 ಲಕ್ಷ ರೂ.ಪಾವತಿ
ಗುತ್ತಿಗೆ ಪ್ರಕಾರ ಘಟಕ ನಿರ್ವಹಣೆಗೆಂದು ಮಹಾನಗರ ಪಾಲಿಕೆಯು ಸಾ‘ನಾ ಎನ್ವಿರೋ ಇಂಜಿನಿಯರಿಂಗ್ ಸರ್ವೀಸ್ ಸಂಸ್ಥೆಗೆ ಪ್ರತಿ ತಿಂಗಳೂ 9 ಲಕ್ಷ ರೂ.ಗಳನ್ನು ಪಾವತಿ ಮಾಡುತ್ತಿತ್ತು. ವಿವಿ‘ ಯಂತ್ರಗಳನ್ನು ಬಳಸಿಕೊಂಡು ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಈ ಸಂಸ್ಥೆಯ ಜವಾಬ್ದಾರಿಯಾಗಿತ್ತು. ಕಸವನ್ನು ಸಂಸ್ಕರಿಸಿ ಎರೆಹುಳು ಗೊಬ್ಬರ ತಯಾರು ಮಾಡುವುದು ಮತ್ತು ಗಾಳಿಯಲ್ಲೇ ಪ್ರಕ್ರಿಯೆ ನಡೆಸಿ ಗೊಬ್ಬರವನ್ನು ತಯಾರಿಸುವ ಕೆಲಸ ಮಾಡಬೇಕಿತ್ತು. ಆದರೆ ಮಾರ್ಚ್ 5 ರಿಂದ ಈ ವಿಲೇವಾರಿ ಪ್ರಕ್ರಿಯೆ ಸ್ಥಗಿತವಾಗಿದೆ.
ಬಿಲ್ ಪಾವತಿ ಬಗೆಗಿನ
ಉಪಟಳ ತಾಳದೆ…
‘‘ಕಸ ವಿಲೇವಾರಿ ಮಾಡುವ ಈ ಗುತ್ತಿಗೆದಾರ ಸಂಸ್ಥೆಗೂ ಮಹಾನಗರ ಪಾಲಿಕೆಯು ಸುಮಾರು 4 ತಿಂಗಳ ಬಿಲ್ ಅಂದರೆ 36 ಲಕ್ಷ ರೂಗಳನ್ನು ಬಾಕಿ ಉಳಿಸಿಕೊಂಡಿದೆ. ಬಿಲ್ ಬಾಕಿಯಿಂದಾಗಿ ಘಟಕವನ್ನು ನಿರ್ವಹಿಸಲಾಗದೆ ಹಾಗೂ ಬಿಲ್ ಪಾವತಿಗೆ ಸಂಬಂಧಿಸಿದಂತೆ ಹಿಂದಿನಿಂದಲೂ ಉಂಟಾಗುತ್ತಿದ್ದ ‘‘ಕೆಲವರ ಉಪಟಳ’’ ಸಹಿಸಲಾಗದೆ ಸದರಿ ಗುತ್ತಿಗೆದಾರರು ಬೇಸರಗೊಂಡು ಈ ಗುತ್ತಿಗೆಯೇ ಇನ್ನು ಬೇಡ ಎಂಬ ಮನಃಸ್ಥಿತಿಯಲ್ಲಿ ನಿರ್ಗಮಿಸಿದ್ದಾರೆ’’ ಎಂಬ ಮಾತುಗಳು ಹೋರಾಟಗಾರರ ವಲಯದಲ್ಲಿ ಕೇಳಿಬರುತ್ತಿದ್ದು, ಇದು ಪಾಲಿಕೆಯ ಒಳಗೆ ಮತ್ತು ಹೊರಗೆ ನಾನಾ ರೀತಿಯ ಊಹಾಪೋಹಕ್ಕೆಡೆಮಾಡುತ್ತಿದೆ.
ಘಟಕದಲ್ಲಿ ಈ ಹಿಂದೆ 18 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ವೇತನವಿಲ್ಲದೆ ಜೀವನ ನಿರ್ವಹಣೆಗೆ ತೊಡಕಾಗಿ ಬಹುತೇಕ ಜನರು ಆ ಕೆಲಸ ಬಿಟ್ಟು ಹೋಗಿದ್ದು, ಈಗ ಕೇವಲ ಐದಾರು ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ಗಳಿಗೂ ಸುಮಾರು 17 ತಿಂಗಳುಗಳಿಂದ ವೇತನ ಸಿಕ್ಕಿಲ್ಲ. ಹೀಗಾಗಿ 6 ಜನ ಸೆಕ್ಯೂರಿಟಿ ಗಾರ್ಡ್‌ಗಳ ಪೈಕಿ ನಾಲ್ವರು ಕೆಲಸ ಬಿಟ್ಟಿದ್ದು, ಈಗ ಇಡೀ ಘಟಕಕ್ಕೆ ನಾಮಕಾವಸ್ಥೆಯೆಂಬಂತೆ ಕೇವಲ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳಿದ್ದಾರೆ.
ಇಡೀ ಘಟಕದ ಸುರಕ್ಷತೆಗಾಗಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಾ ವ್ಯವಸ್ಥೆಯು ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿದೆ. ಕಸದಿಂದ ಹೊಮ್ಮುವ ದುರ್ನಾತವನ್ನು ನಿಯಂತ್ರಿಸುವ ಸಲುವಾಗಿ ಘಟಕದಲ್ಲಿ ‘‘ರಾಸಾಯನಿಕ ದ್ರಾವಣ’’ ಸಿಂಪಡಿಸುವ ವ್ಯವಸ್ಥೆ ಈ ಹಿಂದೆ ಇದ್ದು, ಈಗ ಅವೆಲ್ಲವೂ ಹಾಳಾಗಿದೆ. ಘಟಕದೊಳಗೆ ಎಲೆಕ್ಟ್ರಿಕಲ್ ಕಾಮಗಾರಿಗಳು ಮತ್ತು ಸಿವಿಲ್ ಕಾಮಗಾರಿಗಳು ಅಪೂರ್ಣವಾಗಿ ಉಳಿದಿವೆ. ಹೀಗೆ ಘಟಕದೊಳಗೆ ಅನೇಕ ಸಮಸ್ಯೆಗಳು ಉದ್ಭವಿಸಿವೆ ಎಂದು ವಿವಿಧ ಮೂಲಗಳಿಂದ ತಿಳಿದುಬಂದಿದೆ.
ಸಾಮಾನ್ಯವಾಗಿ ಈ ಘಟಕದಲ್ಲಿ ಒಟ್ಟು 37 ಜನ ಕಾರ್ಮಿಕರು ಇರಬೇಕು. ಅಲ್ಲಿ 3 ಜೆ.ಸಿ.ಬಿ.ಯಂತ್ರಗಳು ಕಾರ್ಯನಿರ್ವಹಿಸಬೇಕು. ಇಬ್ಬರು ಘಟಕ ನಿರ್ವಾಹಕರು (ಪ್ಲಾಂಟ್ ಆಪರೇಟರ್ಸ್) ಹಾಗೂ ಓರ್ವ ಘಟಕ ವ್ಯವಸ್ಥಾಪಕ (ಪ್ಲಾಂಟ್ ಮ್ಯಾನೇಜರ್) ಇರಬೇಕು. ಈ ನಿಟ್ಟಿನಲ್ಲಿ ಈಗಿನ ಘಟಕದ ಸ್ಥಿತಿಯನ್ನು ಹೋಲಿಕೆ ಮಾಡಿದರೆ, ಘಟಕದ ನೈಜ ಸ್ಥಿತಿಯನ್ನು ಊಹಿಸುವುದು ಕಷ್ಟವಾಗದು.
ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುತ್ತಿಗೆದಾರರನ್ನು ನೇಮಿಸಿಕೊಳ್ಳಲು ಮಹಾನಗರ ಪಾಲಿಕೆಯು ಜುಲೈನಲ್ಲಿ ಟೆಂಡರ್ ಕರೆದಿದೆ. ಗಣೇಶ್ ಶಂಕರ್ ಎನ್ವಿರಾನ್‌ಮೆಂಟ್ ಸಲ್ಯೂಷನ್ಸ್ ಎಂಬ ಏಕೈಕ ಸಂಸ್ಥೆ ಟೆಂಡರ್‌ನಲ್ಲಿ ಪಾಲ್ಗೊಂಡಿದೆ. ಸದ್ಯಕ್ಕೆ ಈ ಬಗೆಗಿನ ಕಡತ ಜಿಲ್ಲಾಧಿಕಾರಿ ಕಚೇರಿಯಲ್ಲಿದೆ ಎಂಬ ಮಾಹಿತಿ ಮಾತ್ರ ಈಗ ಗೊತ್ತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
