ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರ ಗದ್ದುಗೆಗಾಗಿ ಮತ್ತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಅರಂಭವಾಗಿದೆ. ಅಧಿಕಾರ ಉಳಿಸಿಕೊಳ್ಳಲು ಮೈತ್ರಿ ಸರ್ಕಾರ ರೆಸಾಟ್ರ್ಸ್ ರಾಜಕಾರಣದ ಮೊರೆ ಹೋಗಿದೆ.
ಮೇಯರ್, ಉಪಮೇಯರ್ ಸ್ಥಾನವನ್ನು ತಮ್ಮಲ್ಲೇ ಉಳಿಸಿಕೊಂಡು, ಪ್ರಮುಖ ಸ್ಥಾಯಿ ಸಮಿತಿಗಳನ್ನು ಪಕ್ಷೇತರರಿಗೆ ಬಿಟ್ಟುಕೊಡುವ ತಂತ್ರವನ್ನು ದೋಸ್ತಿ ನಾಯಕರು ಹಣೆದಿದ್ದಾರೆ.
ಶುಕ್ರವಾರದಂದು ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ ರಾಜಕೀಯ ವಟುವಟಿಕೆ ಬಿರುಸುಗೊಂಡಿದೆ.
ಈ ಸ್ಥಾನಗಳು ಸಿಗಬೇಕಾದರೆ, ಎರಡು ಪಕ್ಷಗಳಿಗೆ ಏಳು ಮಂದಿ ಪಕ್ಷೇತರ ಪಾಲಿಕೆ ಸದಸ್ಯರ ಬೆಂಬಲ ಅತ್ಯಗತ್ಯವಾಗಿದೆ. ಪಕ್ಷೇತರರನ್ನು ಸೆಳೆದುಕೊಳ್ಳಲು ಬಿಜೆಪಿಯ ಆರ್.ಅಶೋಕ್ ತೀವ್ರ ಪ್ರಯತ್ನ ನಡೆಸಿದ್ದಾರೆ.
ಇತ್ತ ಆಪರೇಷನ್ ಕಮಲದ ವಾಸನೆ ಅರಿತ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಪಕ್ಷೇತರ ಶಾಸಕರನ್ನು ಅವರನ್ನು ರೆಸಾಟ್ರ್ಸ್‍ಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.
ರಾಮಲಿಂಗಾರೆಡ್ಡಿ ಅವರು ತಮ್ಮ ಆಪ್ತ ಮಲ್ಲಿಕಾರ್ಜುನ್ ಅವರ ಪತ್ನಿ, ಕಾರ್ಪೋರೆಟರ್ ನಾಗಾಂಬಿಕಾ ಅವರನ್ನು ಮೇಯರ್ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಏಳು ಪಕ್ಷೇತರ ಸದಸ್ಯರ ಬೆಂಬಲ ಪಡೆಯಲು ಕಾರ್ಯತಂತ್ರ ರೂಪಿಸಿದ್ದಾರೆ.
ಬಿಬಿಎಂಪಿ ಮೇಯರ್ ಗದ್ದುಗೆ ಹಿಡಿಯಲು ಮ್ಯಾಜಿಕ್ ನಂಬರ್ 130. ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ಸೇರಿ 135. ಬಿಜೆಪಿ 124 ಮತಗಳು. ಬಿಜೆಪಿಗೆ ಹೋಲಿಸಿದಲ್ಲಿ ಕಾಂಗ್ರೆಸ್ ಮೈತ್ರಿ ಆಡಳಿತ 14 ಮತಗಳ ಅಂತರದಲ್ಲಿ ಮುಂದಿದೆ.
ಎಲ್ಲ ಏಳು ಪಕ್ಷೇತರ ಕಾರ್ಪೊರೆಟರ್‍ಗಳನ್ನು ಎರಡು ಕಾರುಗಳಲ್ಲಿ ರಾಮಲಿಂಗಾರೆಡ್ಡಿ ಅವರ ತಂಡ ಮಡಿಕೇರಿ ಅಥವಾ ಕೇರಳದ ರೆಸಾರ್ಟ್ಗೆ ಕರೆದುಕೊಂಡು ಹೋಗಿ, ಸೆಪ್ಟೆಂಬರ್ 28ರಂದು ಚುನಾವಣೆ ವೇಳೆಗೆ ಬೆಂಗಳೂರಿಗೆ ಕರೆತರಲು ನಿರ್ಧರಿಸಿದೆ. ಕಾಂಗ್ರೆಸ್ ರೆಸಾರ್ಟ್ ವಾಸ್ತವ್ಯಕ್ಕೆ ಕಾರ್ಪೊರೆಟರ್ಗಳು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಆಪರೇಷನ್ ಕಮಲ ಖೆಡ್ಡಾಗೆ ಕೆಡವಲು ಮುಂದಾಗಿದ್ದ ಬಿಜೆಪಿಗೆ ಯಶಸ್ಸು ಸಿಗಲಿಲ್ಲ. ಇದೀಗ ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲೂ ಪಕ್ಷೇತರರನ್ನು ಸೆಳೆದುಕೊಳ್ಳಲು ಮುಂದಾದರೂ ಕಾಂಗ್ರೆಸ್‍ನ ಪ್ರತಿತಂತ್ರದಿಂದ ಅದೂ ಕೂಡ ವಿಫಲವಾಗುವ ಸೂಚನೆಗಳು ಸಿಗುತ್ತಿವೆ. ಆದರೆ, ಈ ವಿಚಾರದಲ್ಲಿ ಅಂತಿಮ ಗೆಲುವು ಯಾರಿಗೆ ಎಂಬುದು ಸೆ.28ರಂದು ಚುನಾವಣೆ ನಡೆದ ಬಳಿಕಷ್ಟೇ ತಿಳಿದುಬರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ