ಕಾಲು ಬಾಯಿ ರೋಗದ ಭೀತಿ

ತುರುವೇಕೆರೆ

      ಜಾನುವಾರುಗಳ ಮಾರಕ ರೋಗವಾದ ಕಾಲು ಬಾಯಿ ರೋಗ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡು ರೈತರನ್ನು ಆತಂಕಕ್ಕೀಡುಮಾಡಿದೆ.

       ತಾಲ್ಲೂಕಿನಲ್ಲಿ ಈಗಾಗಲೇ ಸುಮಾರು ದಿನಗಳಿಂದ ದಬ್ಬೆಘಟ್ಟ, ಮೊಸರುಕೊಟ್ಟಿಗೆ ಹಾಗೂ ಮಾದಪಟ್ಟಣ ಗ್ರಾಮಗಳಲ್ಲಿ ಅನೇಕ ರಾಸುಗಳಲ್ಲಿ ಹೆಚ್ಚಾಗಿ ರೋಗ ಕಾಣಿಸಿಕೊಂಡಿದ್ದು ದಿನೇ ದಿನೇ ಕಾಲು ಬಾಯಿ ರೋಗದ ಸೋಂಕು ಇತರೆ ರಾಸುಗಳಿಗೂ ವ್ಯಾಪಿಸುತ್ತಿದ್ದು, ಬರಗಾಲದಿಂದ ಕಂಗಾಲಾಗಿ ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದ ರೈತರಿಗೆ ಬಾರೀ ಹೊಡೆತ ಬಿದ್ದಿದೆ.

       ರೋಗದ ಗುಣ ಲಕ್ಷಣ: ಈ ರೋಗವು ಮೊದಲು ರಾಸುವಿನ ಬಾಯಿಂದ ಜೊಲ್ಲು ಸೋರುವುದು, ಜ್ವರ ಕಾಣಿಸಿಕೊಳ್ಳುವುದು, ನಂತರ ಕಾಲುಗಳ ಗೆರಸಲುಗಳಲ್ಲಿ ಹುಳುಗಳಾಗಿ ಕಾಲು ನಡೆಯದಂತಾಗುತ್ತದೆ ಹಾಗೂ ನಾಲಿಗೆ ಮೇಲೆ ಗಾಯಗಳಾಗಿ ಮೇವು ತಿನ್ನದಂತಾಗಿ ನಿತ್ರಾಣಗೊಳ್ಳಲಿದೆ. ಸಕಾಲದಲ್ಲಿ ಸರಿಯಾದ ಚಿಕಿತ್ಸೆ ನೀಡದಿದ್ದರೆ ರಾಸುಗಳು ಸಾವನ್ನಪ್ಪಲಿವೆ.

       ಜೂನ್‍ನಲ್ಲಿ ಲಸಿಕೆ ಕಾರ್ಯಕ್ರಮ: ರಾಜ್ಯ ಸರ್ಕಾರ , ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಹಾಲು ಉತ್ಪಾದಕರ ಮಹಾ ಮಂಡಳಿ, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ದೇಶಾದ್ಯಂತ 2018 ಜೂನ್ ತಿಂಗಳಲ್ಲಿ ಕಾಲು ಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಕಾರ್ಯಕ್ರಮ ನಡೆಸಲಾಗಿದೆ. ಅದೇ ರೀತಿ ತಾಲ್ಲೂಕಿನಾದ್ಯಂತ ಲಸಿಕೆ ನೀಡಿದ್ದರೂ ಸಹಾ ಯಾವುದೇ ಪ್ರಯೋಜನವಾಗದೆ ಮತ್ತೆ ನಮ್ಮ ರಾಸುಗಳಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿದೆ. ಕಾಲು ಬಾಯಿ ರೋಗಕ್ಕೆ ತುತ್ತಾದ ರಾಸುಗಳನ್ನು ಗುಣಪಡಿಸಲು ದಿನಪ್ರತಿ ಔಷಧಿಗಳ ಖರೀದಿಗಾಗಿ ನೂರಾರು ರೂಗಳನ್ನು ವ್ಯಯ ಮಾಡಬೇಕಿದೆ. ಈಗಾಗಲೇ ರೈತರು ಬರಗಾಲದಿಂದ ತತ್ತರಿಸಿ ಹಾಲನ್ನು ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಈ ರೋಗದಿಂದ ಆರ್ಥಿಕವಾಗಿ ತತ್ತರಿಸುವಂತಾಗಿದೆ ಎಂದು ಮಾದಪಟ್ಟಣದ ಬಸವರಾಜು ಪತ್ರಿಕೆ ಮುಂದೆ ತಮ್ಮ ಅಳಲು ತೋಡಿಕೊಂಡರು.

        ರೈತರಿಗೆ ನಷ್ಟ : ಕಾಲು ಬಾಯಿ ರೋಗವು ದನ, ಎಮ್ಮೆ, ಸೀಳು ಗೊರಸಲು ಉಳ್ಳ ಜಾನುವಾರುಗಳಿಗೆ ಮಾರಕ ರೋಗವಾಗಿದ್ದು ಒಂದು ವೈರಾಣು ಮೂಲಕ ಹರಡುವ ರೋಗವಾಗಿದೆ. ಈ ರೋಗದಿಂದ ಜಾನುವಾರು ಮುಂದೆ ಗರ್ಭಕಟ್ಟುವಿಕೆ ವಿಳಂಬ, ಸಾಮಥ್ರ್ಯ ಮತ್ತು ಇಳುವರಿಯಲ್ಲಿ ಕಡಿಮೆಯಾಗಲಿದ್ದು ರೈತರಿಗೆ ಆರ್ಥಿಕ ನಷ್ಟ ಉಂಟಾಗಲಿದೆ.

         ಕಳಪೆ ಲಸಿಕೆ ಔಷಧಿ : ಈಗಾಗಲೇ ಕಾಲು ಬಾಯಿ ರೋಗಕ್ಕೆ ಲಸಿಕೆ ಹಾಕಿಸಿದ್ದರು ಮತ್ತೆ ಮತ್ತೆ ರೋಗ ಕಾಣಿಸಿಕೊಂಡು ರೈತರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದ್ದು ಒಂದು ಬಾರಿ ಲಸಿಕೆ ಹಾಕಿಸಿದರೆ 6 ತಿಂಗಳ ಕಾಲ ರೋಗ ಕಾಣಿಸಿಕೊಳ್ಳುವುದಿಲ್ಲ ಎಂದು ವೈದ್ಯರು ಹೇಳಲಿದ್ದಾರೆ.

          ಆದರೆ ಕೇವಲ 2 ತಿಂಗಳಲ್ಲಿಯೇ ರೋಗ ಕಾಣಿಸಿಕೊಳ್ಳುತ್ತಿದ್ದು ವೈದ್ಯರು ಕಳಪೆ ಲಸಿಕೆ ಔಷಧಿ ನೀಡಿ ರೈತರನ್ನು ವಂಚಿಸುತ್ತಿದ್ದಾರೆ. ಪಶು ವೈದ್ಯಾಧಿಕಾರಿಗಳು ರೈತರ ಬದುಕಿನ ಜೊತೆ ಚಲ್ಲಾಟವಾಡುತ್ತಿದ್ದಾರೆ. ಒಂದು ರಾಸುವಿಗೆ ಬಂದರೆ ತಕ್ಷಣ ಮುಂಜಾಗ್ರತಾ ಕ್ರಮವನ್ನು ವಹಿಸದೆ ಎಲ್ಲ ರಾಸುಗಳಿಗೆ ರೋಗದ ವೈರಾಣು ಹಬ್ಬುವಂತೆ ಮಾಡುತ್ತಿದ್ದಾರೆ. ರೈತರಿಗಾದ ನಷ್ಟವನ್ನು ಅಧಿಕಾರಿಗಳೆ ಭರಿಸಬೇಕಿದೆ ಎಂದು ದಬ್ಬೇಘಟ್ಟ ಗ್ರಾಮದ ರಾಮೇಗೌಡ ಹಾಗೂ ಕಿರಣ್ ಆರೋಪಿಸಿದ್ದಾರೆ.

           ತಾಲ್ಲೂಕಿನಲ್ಲಿ 48,609 ರಾಸುಗಳಿಗೆ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆಯನ್ನು ಹಾಕಲಾಗಿದೆ. ತಾಲ್ಲೂಕಿನಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ಕಾಲು ಬಾಯಿ ರೋಗ ಅತೀ ಹೆಚ್ಚು ಕಾಣಿಸಿಕೊಂಡಿದೆ. ರೈತರು ಕೂಡಲೇ ಅಡುಗೆ ಸೋಡವನ್ನು ನೀರಿನಲ್ಲಿ ಬೆರೆಸಿ ಕೊಟ್ಟಿಗೆಗೆ ಸಿಂಪಡಿಸಿ ನಂತರ ರಾಸುಗಳ ಕಾಲು, ಮುಖ ತೊಳದು ಸ್ವಚ್ಛವಾಗಿಡಬೇಕು.

           ರೋಗದ ಹತೋಟಿಗೆ ಮುಂಜಾಗ್ರತಾ ಕ್ರಮ ಕೈಗೊಳಲಾಗಿದ್ದು, ರೋಗ ಕಾಣಿಸಿಕೊಂಡ ಹಳ್ಳಿಯ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತೊಂದು ಸುತ್ತು ಲಸಿಕಾ ಕಾರ್ಯಕ್ರಮ ಮಾಡಲಾಗುತ್ತಿದೆ. ರೈತರು ಜಿಲ್ಲಾ ಲ್ಯಾಬ್ ಶಿರಾದಿಂದ ವಿಜ್ಞಾನಿಗಳನ್ನು ಕರೆಸಿ ಪರೀಕ್ಷೆಗಾಗಿ ಶ್ಯಾಂಪಲ್ ಕೊಂಡೊಯ್ದಿದ್ದು ನಿಖರ ಮಾಹಿತಿ ತಿಳಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸದಾಶಿವಮೂರ್ತಿ ತಿಳಿಸಿದ್ದಾರೆ.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.

Recent Articles

spot_img

Related Stories

Share via
Copy link
Powered by Social Snap