ಹಿರಿಯ ನಾಗರಿಕರ ಸಮಸ್ಯೆಗಳಿಗೆ ಮದ್ಯವೇ ಕಾರಣ

ದಾವಣಗೆರೆ:

        ಹಿರಿಯ ನಾಗರಿಕರ ಎಲ್ಲಾ ಸಮಸ್ಯೆಗಳಿಗೆ ಮದ್ಯದ ಅಂಗಡಿಗಳೇ ಮೂಲ ಕಾರಣವಾಗಿವೆ ಎಂದು ಹಿರಿಯ ನಾಗರಿಕರಾದ ದಾಕ್ಷಾಯಣಿ ನಿಂಬೆಕಾಯಿ ಅಸಮಾಧಾನ ವ್ಯಕ್ತಪಡಿಸಿದರು.

       ನಗರದ ಶ್ರೀಸದ್ಯೋಜಾತ ಶಿವಾಚಾರ್ಯ ಮಹಾಸದ್ವಾಮಿಗಳ ಮಠದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ ಹಿರಿಯ ನಾಗರಿಕರ ಸಂಘ, ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಅಂಗವಿಕಲರ ಪುನರ್ ವಸತಿ ಕೇಂದ್ರ ಇವುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

       ಸರ್ಕಾರದ ಭಾಗವಾಗಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಹಿರಿಯ ನಾಗರಿಕರಿಗೆ ಹಾಗೇ ಮಾಡಬೇಕು, ಹೀಗೆ ಮಾಡಬೇಕೆಂಬುದಾಗಿ ಉದ್ದುದ್ದ ಭಾಷಣ ಮಾಡುತ್ತೀರಿ. ಆದರೆ, ಸರ್ಕಾರ ನಮಗೆ ಏನು ಮಾಡಿದೆ ಹೇಳಿ? ಹಿಂದಿನ ಸರ್ಕಾರ ರಾಜ್ಯದಲ್ಲಿ 700 ಮದ್ಯದ ಅಂಗಡಿಗೆ ಅನುಮತಿ ನೀಡಿತ್ತು. ಆದರೆ, ಈ ಸರ್ಕಾರ 900 ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡಲು ಮುಂದಾಗಿದೆ. ಹೀಗೆ ದಿನೇ, ದಿನೇ ಸಾರಾಯಿ ಅಂಗಡಿಗಳನ್ನು ಹೆಚ್ಚು ಮಾಡುತ್ತಾ ಹೋದರೆ, ದುಶ್ಚಟಗಳಿಗೆ ದಾಸರಾಗುವ ಮಕ್ಕಳು ತಂದೆ-ತಾಯಿಂದರನ್ನು ಹೇಗೆ ನೋಡಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.

       ಕುಡಿದ ಮತ್ತಿನಲ್ಲಿ ಎಷ್ಟೋ ಜನ ತಂದೆ-ತಾಯಿಂದರ ಹತ್ಯೆ ಮಾಡಿದ್ದಾರೆ. ಇನ್ನೂ ಕೆಲವು ಮಕ್ಕಳು, ಪತ್ನಿ ಅಂತಾ ನೋಡದೆಯೋ ವ್ಯಭಿಚಾರಕ್ಕೆ ತಳ್ಳಿದ್ದಾರೆ. ಹೀಗೆ ಹಿರಿಯ ನಾಗರೀಕರ ಸಮಸ್ಯೆಗೆ ಮದ್ಯದ ಅಂಗಡಿಗಳೇ ಮೂಲ ಕಾರಣ ಆಗಿವೆ. ಆದ್ದರಿಂದ ದಯವಿಟ್ಟು ಮದ್ಯದ ಅಂಗಡಿಗಳಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

      ಭಕ್ತರು ರೂಪಾಯಿ, ಎರಡು ರೂಪಾಯಿ ಹಾಕಿರುವ ದೇವಸ್ಥಾನಗಳ ಹುಂಡಿ ಹಣವನ್ನು ಸಹ ಸರ್ಕಾರ ತಗೆದುಕೊಂಡು ಖರ್ಚು ಮಾಡುತ್ತಿರುವುದು ಸರಿಯಲ್ಲ. ಆ ಹಣ ಜನರಿಗೆ ಬಳಕೆ ಆಗುವುದಕ್ಕಿಂತ ಮೋಜುಮಸ್ತಿಗೆ ಹೆಚ್ಚು ಬಳಕೆಯಾಗುತ್ತಿದೆ. ಆದ್ದರಿಂದ ಈ ಹುಂಡಿ ಹಣ ಪಡೆಯುವುದನ್ನು ಸರ್ಕಾರ ಬಿಡಬೇಕಂದು ಒತ್ತಾಯಿಸಿದ ಅವರು, ಅನೈತಿಕ ಸಂಬಂಧ ಅಪರಾಧವಲ್ಲ ಎಂಬುದಾಗಿ ತೀರ್ಪು ನೀಡಿರುವುದು ಸಹ ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವ ವಿಚಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ.ರವೀಂದ್ರನಾಥ್ ತಮ್ಮ ಭಾಷಣದಲ್ಲಿ ದಾಕ್ಷಾಯಿಣಿ ನಿಂಬೆಕಾಯಿ ಅವರು ಎತ್ತಿದ ಪ್ರಶ್ನೆಗಳಿಗೆ ಪ್ರತಿಕ್ರಯಿಸಿ, ರಾಮಾಯಣ-ಮಹಾಭಾರತದ ಕಾಲದಿಂದಲೂ ಕೆಲ ಲೋಪಗಳಿವೆ. ಅವುಗಳನ್ನು ಏನೂ ಮಾಡಲಾಗದು. ನಾನೂ ಸಹ ಹಿರಿಯ ನಾಗರಿಕರ ಪಟ್ಟಿಗೆ ಸೇರಿದ್ದೇನೆ. ಬೇರೆ ದೇಶಗಳಲ್ಲಿ 150 ವರ್ಷಗಳ ವೆರೆಗೆ ಆಯುಷ್ಯ ಇದೆ ಅಂತೆ. ಈಗ ನೀವೆಲ್ಲಾ 75ರಿಂದ 80 ವರ್ಷ ಬಾಳಿದ್ದೀರಿ. ನೀವು 150 ವರ್ಷ ಬದುಕುವಂತಾಗಲಿ. ಇನ್ನೂ ಚೆನ್ನಾಗಿ ಕೆಲಸ ಮಾಡಿ ಎಂದರು.

      ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಮಾತನಾಡಿ, ಜೀವನದ ಏಳು-ಬೀಳು, ಕಷ್ಟ-ಸುಖಗಳನ್ನು ದಾಟಿ ಬಾಲ್ಯ, ಯವ್ವನ ಅನುಭವಿಸಿ ವೃದ್ಧಾಪ್ಯಕ್ಕೆ ಕಾಲಿರಿಸಿರುವ ಹಿರಿಯ ನಾಗರಿಕರು ನಿಮ್ಮ ಜೀವನದ ಅನುಭವದ ನುಡಿಗಳನ್ನು ಇಂದಿನ ಪೀಳಿಗೆಗೆ ನೀಡಬೇಕಾಗಿದೆ. ಆದರೆ, ಭಿವೃದ್ಧಿಯ ನಾಗಾಲೋಟದಲ್ಲಿ ತಂದೆ-ತಾಯಿಂದರ ಜೊತೆಗೆ ಜೀವನ ನಡೆಸಲಾದ ಮಕ್ಕಳ ಕಾರಣಕ್ಕೆ ಅವಿಭಕ್ತ ಕುಟುಂಬಗಳು ನಾಶವಾಗುತ್ತಿವೆ. ಹೀಗಾಗಿ ಇಂದಿನ ಮಕ್ಕಳಿಗೆ ಅಜ್ಜ-ಅಜ್ಜಿಯರ ಪ್ರೀತಿ ಸಿಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

        ಎಲ್ಲವನ್ನೂ ಕೊಂಡುಕೊಳ್ಳಬಹುದು. ಆದರೆ, ತಂದೆ-ತಾಯಿಯನ್ನು ಕೊಂಡುಕೊಳ್ಳಲಾಗದು. ಅದನ್ನು ಅರಿತು ಮಕ್ಕಳು ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹಿರಿಯ ನಾಗರಿಕರು ಸಂತೋಷದಿಂದ ಬಾಳಬೇಕು ಎಂದ ಅವರು, ನ್ಯಾಯಾಧೀಶರು ಹಿರಿಯ ನಾಗರಿಕರ ಪ್ರಕರಣಗಳು ಬಂದರೆ, ಕಾನೂನು ಚೌಕಟ್ಟಿನ ಜೊತೆ, ಜೊತೆಗೆ ಮಾನವೀಯತೆಯ ಆಧಾರದಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕೆಂದು ಮನವಿ ಮಾಡಿದರು.

      ಮೇಯರ್ ಶೋಭಾ ಪಲ್ಲಾಗಟ್ಟೆ ಮಾತನಾಡಿ, ಹಿರಿಯ ನಾಗರಿಕರ ಜೀವನ ಒಂದು ರೀತಿ ನಿಘಂಟು ಇದ್ದಂತೆ, ಮನುಷ್ಯ ಸಮಾಧಿಗೆ ಹೋಗುವಾಗ ಏನನ್ನೂ ಕೊಂಡ್ಡೊಯ್ಯುವುದಿಲ್ಲ. ಒಳ್ಳೆದು ಮತ್ತು ಕೆಟ್ಟದನ್ನು ಮಾತ್ರ. ಆದ್ದರಿಂದ ಪಕ್ಷ, ಜಾತಿ, ಮತಗಳ ಭೇದ ಮರೆತು ಸಮಾನರಾಗಿ ಬಾಳಬೇಕೆಂದು ಸಲಹೆ ನೀಡಿದರು.

     ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಮಾತನಾಡಿ, ಹಿರಿಯರ ಆಶೀರ್ವಾದ ನಮ್ಮ ಮೇಲೆ ಸದಾ ಇರಬೇಕು. ಇತ್ತೀಚೆಗೆ ಹುಟ್ಟಿರುವವರಿಗೆ ಆಯುಷ್ಯ ಕಡಿಮೆ ಆಗುತ್ತಿದೆ. ಹೀಗಾಗಿ ಇನ್ನಷ್ಟು ವರ್ಷಗಳು ಹೋದರೆ, ನಿಮ್ಮ ವಯಸ್ಸಿನವರನ್ನು ಕಾಣಲಾಗದು. ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಸ್ವಾರ್ಥ ಹೆಚ್ಚಾಗಿರುವ ಕಾರಣ ಧಾನ-ಧರ್ಮ ಮಾಡುವವರು ಇಲ್ಲವಾಗಿದ್ದಾರೆ. ಆದರೆ, ನೀವು ಧಾನ-ಧರ್ಮ ಮಾಡಿರುವ ಕಾರಣಕ್ಕೆ ಇಷ್ಟು ದಿನ ಬದುಕಿದ್ದೀರಿ ಎಂದರು.

 

    ದಾವಣಗೆರೆ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಸ್.ಟಿ.ಕುಸುಮಶ್ರೇಷ್ಠಿ ಮಾತನಾಡಿ, ಹಿಂದೆ ಎಸ್.ಎ.ರವೀಂದ್ರನಾಥ್ ಹಿರಿಯ ನಾಗರಿಕರ ಭವನ ನಿರ್ಮಾಣಕ್ಕೆ ನಿವೇಶನ ಕೊಡಿಸುವ ಪ್ರಯತ್ನ ಮಾಡಿದ್ದರು. ಆದರೆ, ಅದು ಹಾಗೆಯೇ ಉಳಿದಿದೆ. ಆದ್ದರಿಂದ ಆ ನಿವೇಶನ ಕೊಡಿಸಿ ಹಿರಿಯ ನಾಗರಿಕರ ಭವನ ನಿರ್ಮಾಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಯನ್ನು ವಿತರಿಸಲಾಯಿತು.

     ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ್, ವಿಕಲಚೇತನರ ಮತ್ತು ಅಂಗವಿಕಲರ ಪುನರ್ ವಸತಿ ಕೇಂದ್ರ ಯಾಸೀನ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷ ಎಸ್.ಗುರುಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಎ.ಹೆಚ್.ವೀರಪ್ಪ ಪ್ರಾರ್ಥಿಸಿದರು. ಎಸ್.ಪಾಂಡು ನಾಯ್ಕ ನಾಡಗೀತೆ ಹಾಡಿದರು. ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಶಶಿಧರ್ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link