ಹುಳಿಯಾರು
ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ 68ನೇ ವರ್ಷದ ಅಂಗವಾಗಿ ವಿಶೇಷವಾಗಿ ಪ್ರತಿಷ್ಠಾಪಿಸಲಾಗಿದ್ದ ಕೇಸರಿನಂದನ ಗಣಪತಿಯನ್ನು ರಾಜಬೀದಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಂತರ ಹುಳಿಯಾರು ಕೆರೆಯಲ್ಲಿ ವಿಸರ್ಜಿಸಲಾಯಿತು.
ಸ್ವಾಮಿಯ ಗಂಗಾಪ್ರವೇಶದ ಅಂಗವಾಗಿ ಹೋಮಹವನಾದಿಗಳು, ವಸಂತ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ, ಉತ್ಸವ , ಮೆರವಣಿಗೆ ಜರುಗಿತು.
ಮಳೆಯ ಕಾರಣದಿಂದ ತಡವಾಗಿ ದೇವಾಲಯದಿಂದ ಆರಂಭಗೊಂಡ ಸ್ವಾಮಿಯ ಉತ್ಸವ ಪಟ್ಟಣದ ಗಾಂಧಿಪೇಟೆ, ಬಸ್ ನಿಲ್ದಾಣ, ರಾಂಗೋಪಾಲ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮೆರವಣಿಗೆ ಸಂದರ್ಭದಲ್ಲಿ ಚಿಟ್ಟಿಮೇಳ, ನಾದಸ್ವರ, ನಾಸಿಕ್ ಡೋಲು, ಲಾರಿ ಡ್ಯಾನ್ಸ್ ಉತ್ಸವಕ್ಕೆ ಮೆರಗು ನೀಡಿದವು. ಬೀದಿಗಳಲ್ಲಿ ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಭಕ್ತರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೆರವಣಿಗೆ ನಂತರ ಬಸ್ ನಿಲ್ದಾಣದಲ್ಲಿ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ನಿಲ್ಲಿಸಿ ಗಣಪತಿಗೆ ಹಾಕಿದ್ದ ಹೂವಿನ ಹಾರ ಹಾಗೂ ಲಾಡುಪ್ರಸಾದವನ್ನು ಹರಾಜು ಹಾಕಲಾಯಿತು. ನಂತರ ಭಕ್ತರ ಜಯಘೋಷದೊಂದಿಗೆ ಸಮೀಪದ ಹುಳಿಯಾರು ಕೇಶವಾಪುರದ ಕೆರೆಯ ದೊಡ್ಡಗುಂಡಿಯಲ್ಲಿ ಮೂರ್ತಿಯ ಗಂಗಾಪ್ರವೇಶ ಮಾಡಿಸಲಾಯಿತು.
ಪ್ರಸನ್ನ ಗಣಪತಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಮೋಹನ್ ಕುಮಾರ್, ತಾಪಂ ಸದಸ್ಯ ಕುಮಾರ್, ವೆಂಕಟರಾಯ, ತಾಂಡವಮೂರ್ತಿ, ಬಾಳೆಕಾಯಿ ಮೂರ್ತಿ, ಲಾಡ್ಜ್ ರಾಜೇಂದ್ರ, ಹೂವಿನ ಬಸವರಾಜು, ಮೆಡಿಕಲ್ ಚಂಬಣ್ಣ, ತಮ್ಮಯ್ಯ, ಕೆಎಂಎಲ್ ನರಸಿಂಹ ಮೂರ್ತಿ, ಅರ್ಚಕ ರಾಜಗೋಪಾಲ್, ಕಲಾವಿದ ಗೌಡಿ, ಯತೀಶ್, ಕಾರ್ಪೆಂಟರ್ ಅಂಜನಮೂರ್ತಿ ಸೇರಿದಂತೆ ಹಲವಾರು ಮಂದಿ ಮೆರವಣಿಗೆಯ ಉಸ್ತುವಾರಿ ವಹಿಸಿದ್ದರು. ಮೆರವಣಿಗೆ ಶಾಂತಿಯುತವಾಗಿ ಸಾಗಲು ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.