ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ ಐದು ದಿನ ಕೆಲಸ, ಎರಡು ದಿನ ರಜೆ…..!!!!!

ಬೆಂಗಳೂರು:

       ರಾಜ್ಯ ಸರ್ಕಾರದ ಆಡಳಿತ ವೈಖರಿಯಲ್ಲಿ ದಕ್ಷತೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ ಐದು ದಿನ ಕೆಲಸ, ಎರಡು ದಿನ ರಜೆ ನೀಡುವ ವ್ಯವಸ್ಥೆ ಜಾರಿಗೆ ತರಬೇಕೆಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ.

        ಮುಖ್ಯಮಂತ್ರಿ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ಅವರು, ವಾರದ ದಿನಗಳಲ್ಲಿ ಸರ್ಕಾರಿ ಕಚೇರಿ ಸಮಯದ ಅವಧಿ ಹೆಚ್ಚಿಸಬೇಕು. ಕೇಂದ್ರ ಸರ್ಕಾರದ ಮಾದರಿಯನ್ನು ಜಾರಿಗೆ ತರಬೇಕೆಂದು ಸಲಹೆ ಮಾಡಿದ್ದಾರೆ.

      ನಿವೃತ್ತ ಐ.ಎ.ಎಸ್. ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯ 6ನೇ ವೇತನ ಆಯೋಗ ಇಂತಹ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಈ ಕುರಿತು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವದ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

     ಇದರಿಂದ ನೌಕರರ ಕಾರ್ಯ ಕ್ಷಮತೆಯಲ್ಲೂ ಸುಧಾರಣೆ ಆಗಿದೆ. ರಾಜ್ಯ ಸರ್ಕಾರದ ಆರನೇ ವೇತನ ಆಯೋಗವೂ 5 ದಿನಗಳ ವಾರದ ಪದ್ಧತಿ ಜಾರಿಗೊಳಿಸುವಂತೆ ಶಿಫಾರಸು ಮಾಡಿದೆ. ಸರ್ಕಾರಿ ನೌಕರರೂ ಇಂತಹುದೇ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಹೀಗಾಗಿ ಕೆಲಸದ ಅವಧಿ ಹೆಚ್ಚಿಸುವ ಮೂಲಕ ವಾರದ ಕೊನೆಯಲ್ಲಿ ಎರಡು ದಿನ ರಜೆ ನೀಡುವ ವ್ಯವಸ್ಥೆ ಅಳವಡಿಸಿಕೊಳ್ಳಬಹುದು” ಎಂದು ತಿಳಿಸಿದ್ದಾರೆ.

    ವಾರದಲ್ಲಿ ಐದೇ ದಿನ ಕೆಲಸವೆಂದಲ್ಲ. ಇರುವ ಅವಧಿಯಲ್ಲಿಯೇ ಹೆಚ್ಚು ಕೆಲಸ ಮಾಡಬೇಕೆಂಬ ಉದ್ದೇಶವಿದೆ. ಕೇಂದ್ರ ಸರ್ಕಾರಿ ನೌಕರರು ವಾರದಲ್ಲಿ ಐದು ದಿನ ಕೆಲಸ ಮಾಡುತ್ತಾರೆ. ಅದರಂತೆ ರಾಜ್ಯ ಸರ್ಕಾರಿ ನೌಕರರಿಗೂ ಐದು ದಿನ ಕೆಲಸ ಕೊಟ್ಟರೆ ಒಳ್ಳೆಯದು. ಐದು ದಿನಗಳಲ್ಲಿಯೇ ಹೆಚ್ಚಿನ ಅವಧಿಯಲ್ಲಿ ಕೆಲಸ ಮಾಡಿಕೊಂಡರೆ ಹೆಚ್ಚೆಚ್ಚು ಕೆಲಸಗಳೂ ನಡೆಯುತ್ತವೆ. ಈ ಸಂಬಂಧ ಎರಡು ದಿನಗಳ ಹಿಂದೆ ಪತ್ರ ಬರೆದಿದ್ದೇನೆ. ಬೆಳಿಗ್ಗೆ 10. 30 ರಿಂದ ಸಂಜೆ 5 ಗಂಟೆ ಬದಲಿಗೆ, ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೂ ಕೆಲಸ ಮಾಡಬೇಕು. ಉಳಿದ ಎರಡು ದಿನ ವಿಶ್ರಾಂತಿ ದೊರೆಯುತ್ತದೆ. ಒತ್ತಡವೂ ನಿವಾರಣೆಯಾಗಲಿದೆ ಎಂದಿದ್ದಾರೆ.

     ಸಾರ್ವತ್ರಿಕ ರಜೆಯ ಕುರಿತಾಗಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಪ್ರಿಯಾಂಕ್ ಖರ್ಗೆ “ಸರ್ಕಾರವು ಹಲವಾರು ಜಯಂತಿಗಳಿಗೆ ಸಾರ್ವತ್ರಿಕ ರಜೆ ಘೋಷಿಸಿದೆ. ಇದರಿಂದ ವಾರ್ಷಿಕ ಕೆಲಸದ ದಿನಗಳ ಸಂಖ್ಯೆಯಲ್ಲಿ ಕಡಿತವಾಗಿದೆ. ಆದರೆ ಮಹಾನ್ ಪುರುಷರ ಸಾಧನೆ ಸಮಾಜಕ್ಕೆ ಮಾದರಿ. ಹೀಗಾಗಿ ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು, ಇದಕ್ಕಾಗಿ ಈ ರಜೆಗಳನ್ನು ಮಿತಿಗೊಳಿಸಬೇಕು. ಅತಿ ಅವಶ್ಯ ಇರುವವರಷ್ಟೇ ರಜೆ ತೆಗೆದುಕೊಳ್ಳುವ ನಿರ್ಬಂಧಿತ ರಜೆ ಮಾಡಬೇಕು. ಇದರಿಂದ ಸರ್ಕಾರದ ಕೆಲಸದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬಹುದು” ಎಂದು ಸಲಹೆ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link