ಅಲೆದಾಟ ತಪ್ಪಿಸಲು ಜನಸಂಪರ್ಕ: ಸಿದ್ದೇಶ್ವರ್

ದಾವಣಗೆರೆ :

       ಜನಸಾಮಾನ್ಯರು ಸರ್ಕಾರದ ಸವಲತ್ತುಗಳಿಗಾಗಿ ತಾಲ್ಲೂಕು, ಜಿಲ್ಲಾ ಕಚೇರಿಗಳಿಗೆ ಅಲೆದಾಡದಂತೆ ನೇರವಾಗಿ ನೀಡುವ ಸದುದ್ದೇಶದಿಂದ ಜನಸಂಪರ್ಕ ಕಾರ್ಯಕ್ರಮ ಆಯೋಜಿಸಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ ಗ್ರಾಮಸ್ಥರಿಗೆ ಕರೆ ನೀಡಿದರು.

       ದಾವಣಗೆರೆ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಇವರ ಸಹಯೋಗದೊಂದಿಗೆ ಇಂದು ಅಣಜಿ ಗ್ರಾಮದ ಹ್ಯಾಳೇದ ವೀರಪ್ಪ ಶಿವಲಿಂಗಪ್ಪ ಸಂಯುಕ್ತ ಪದವಿಪೂರ್ವ ವಿದ್ಯಾಲಯ, ಹೈಸ್ಕೂಲ್ ಮೈದಾನ ಇಲ್ಲಿ ಏರ್ಪಡಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

      ವೃದ್ದಾಪ್ಯ ವೇತನ, ಅಂಗವಿಕಲರಿಗೆ ಸೌಲಭ್ಯ, ವಿಧವಾ ವೇತನ, ಮನಸ್ವಿನಿ, ಮೈತ್ರಿ, ವಸತಿ, ಸಾಗುವಳಿ ಚೀಟಿ ಸೇರಿದಂತೆ ಸರ್ಕಾರದ ಹಲವಾರು ಯೋಜನೆಗಳ ಸವಲತ್ತುಗಳನ್ನು ಪಡೆಯಲು ಇಲ್ಲಿಯೇ ಅರ್ಜಿ ಸ್ವೀಕರಿಸಿ ಮಂಜೂರಾತಿ ಪತ್ರ ನೀಡಲಾಗುವುದು. ಅಧಿಕಾರಿಗಳು ಇಲ್ಲೇ ಕಚೇರಿ ತೆರೆದಿದ್ದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

      2022 ರೊಳಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬರಿಗೂ ಮನೆ ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1 ಕೋಟಿ ಮನೆ ಮಂಜೂರು ಮಾಡಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರದ ಸುತ್ತೋಲೆ ಗ್ರಾ.ಪಂ ಗಳಿಗೆ ಬಂದಿದೆ. ಅರ್ಹರು ಪಿಡಿಓ ಮತ್ತು ಇಓ ಗಳನ್ನು ಸಂಪರ್ಕಿಸಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಸೌಲಭ್ಯ ದೊರಕಲಿದೆ. ಸೌಲಭ್ಯ ಇದ್ದರೂ ಈ ಯೋಜನೆಗಳ ದುರಪಯೋಗ ಪಡಿಸಿಕೊಳ್ಳದೇ ಅರ್ಹರು ಮಾತ್ರ ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

       ಜಿಲ್ಲೆಯಲ್ಲಿ ಜೂನ್-ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಫಲಸು ಕಾಳು ಕಟ್ಟುವ ಸಮಯದಲ್ಲಿ ಮಳೆ ಕೈ ಕೊಟ್ಟಿದ್ದರಿಂದ 6 ತಾಲ್ಲೂಕುಗಳಲ್ಲಿಯೂ ನಷ್ಟ ಸಂಭವಿಸಿದೆ. ಈ ಕುರಿತು ಮುಖ್ಯಮಂತ್ರಿಗಳ, ಕಂದಾಯ, ಆಹಾರ ಸಚಿವರ ಗಮನಕ್ಕೆ ತಂದು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಒತ್ತಾಯಿಸಲಾಗಿದೆ. ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದರು.

      ಪ್ರಧಾನಿಯವರು ಸುಮಾರು 23 ಕ್ಕೂ ಹೆಚ್ಚು ದವಸ ಧಾನ್ಯಗಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಿದ್ದು, ಜಿಲ್ಲೆಯಲ್ಲಿ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರಗಳಕ್ಕಾಗಿ ಒತ್ತಾಯಿಸುತ್ತಿದ್ದರೂ ಜಿಲ್ಲೆಯಲ್ಲಿ ಇದುವರೆಗೆ ಖರೀದಿ ಕೇಂದ್ರ ತೆರೆಯಲಾಗಿಲ್ಲ. ಮೆಕ್ಕೆಜೋಳವನ್ನು ಆಹಾರಧಾನ್ಯವಲ್ಲವೆಂದು ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆಯದೇ ಪಡಿತರದಲ್ಲಿ ಇದನ್ನು ವಿತರಿಸಲಾಗುತ್ತಿಲ್ಲ. ಆದರೆ ಬೇರೆ ರಾಜ್ಯಗಳಲ್ಲಿ ಇದನ್ನು ಆಹಾರಧಾನ್ಯವಾಗಿ ಪರಿಗಣಿಸಲಾಗಿದೆ. ಹಾಗೆಯೇ ನಮ್ಮ ರಾಜ್ಯದಲ್ಲಿಯೂ ಆಹಾರಧಾನ್ಯಕ್ಕೆ ಸೇರಿಸಬೇಕು, ಖರೀದಿ ಕೇಂದ್ರ ತೆರಯಲು ಹಾಗೂ ಪಡಿತರದಲ್ಲಿ ವಿತರಿಸುವಂತೆ ಒತ್ತಾಯಿಸಿದರು.

     ಹಿಂದಿನ ಸರ್ಕಾರ ಈ ಭಾಗದಲ್ಲಿ 23 ಕೆರೆಗಳನ್ನು ತುಂಬಿಸಲು ಜಾರಿಗೆ ತಂದ ಜಾಕ್‍ವೆಲ್ ಯೋಜನೆಯಲ್ಲಿ ಇವತ್ತಿನ ತನಕ ಕೆರೆಗಳು ತುಂಬದಿರವುದು ಶೋಚನೀಯ. ಪೈಪ್‍ಲೈನ್-ವಿದ್ಯುತ್ ಸಮಸ್ಯೆಯಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದ್ದು, ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಈ ಸಮಸ್ಯೆಗಳನ್ನು ಸರಿಪಡಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ. ಸಿರಿಗೆರೆ ಶ್ರೀಗಳು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಕಳೆದ ಬಾರಿ 68 ದಿನ ನೀರು ಬಿಡಲಾಗಿತ್ತು. ಈ ಬಾರಿ ಮಳೆ ಇದ್ದರೂ ಕೇವಲ 25 ದಿನ ನೀರು ಬಿಡಲಾಗಿದೆ. ಆದಷ್ಟು ಶೀಘ್ರದಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸಿ ನೀರು ಹರಿಸಬೇಕೆಂದು ಆಗ್ರಹಿಸಿದರಲ್ಲದೇ, ಪ್ರಕೃತಿಯನ್ನು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೂ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಂತಾಗಬೇಕೆಂದರು.

      ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯಾವುದೇ ವೈಯಕ್ತಿಕ ಅಥವಾ ಸಾಮುದಾಯಿಕ ಯೋಜನೆಗಳು ಲಭಿಸುವುದು ವಿಳಂಬವಾಗಬಾರದು ಅಥವಾ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಶೀಘ್ರವಾಗಿ ವಿಲೇ ಮಾಡುವ ಉದ್ದೇಶದಿಂದ ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲು ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆ.

        ಕಂದಾಯ ಇಲಾಖೆ ಅಡಿಯ ಸಾಮಾಜಿಕ ಭದ್ರತೆ ಯೋಜನೆಗಳಾದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ನಿರ್ಗತಿಕ ವಿಧವೆಯರಿಗೆ ವೇತನ, ಉಜ್ವಲ ಯೋಜನೆ, ಬಸವ ವಸತಿ, ವಿಕಲಚೇತನರಿಗೆ ಸೌಲಭ್ಯ, ಅಂತರ್ಜಾತಿ ವಿವಾಹಿತ ಫಲಾನುಭವಿಗಳು, ಭಾಗ್ಯಲಕ್ಷ್ಮಿ, ಪ್ರಧಾನ ಮಂತ್ರಿ ಮಾತೃ ವಂದನಾ, ವಸತಿ, ಸಾಗುವಳಿ ಚೀಟಿ ಸೇರಿದಂತೆ ಯಾವುದೇ ಯೋಜನೆಗಳಿಗೆ ಸಂಬಂಧಿಸಿದಂತೆ ಬಂದಂತಹ ಅರ್ಜಿಗಳನ್ನು ವಿಲೇ ಮಾಡಲು ಅಧಿಕಾರಿಗಳಿ ಸೂಚಿಸಲಾಗಿದೆ. ಇಂದೇ ಮಂಜೂರಾತಿ ಮಾಡಬಹುದಾದಂತಹ ಅರ್ಜಿಗಳಿಗೆ ಈಗಲೇ ಮಂಜೂರಾತಿ ನೀಡಲಾಗುತ್ತದೆ. ಪ್ರಸ್ತುತ ಮಂಜೂರಾತಿ ನೀಡಲಾಗದ ಯೋಜನೆಗಳ ಕುರಿತು ಹಿಂಬರಹ ನೀಡಲಾಗುವುದು.

       ಇದುವರೆಗೆ ನಾಲ್ಕು ಹೋಬಳಿಗಳಲ್ಲಿ ಜನ ಸಂಪರ್ಕ ಸಭೆ ನಡೆಸಿದ್ದು ಸುಮಾರು 4 ಸಾವಿರ ಮಂಜೂರಾತಿ ಪತ್ರ ನೀಡಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಸುಮಾರು 150 ಫಲಾನುಭವಿಗಳಿಗೆ ಇಂದು ಸೌಲಭ್ಯ ವಿತರಣೆ ಮಾಡಲಾಗುತ್ತಿದೆ. ಇಂತಹ ಸಭೆಯ ಸದುಪಯೋಗವನ್ನು ಈ ಕ್ಷೇತ್ರದ ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

      ಕಾರ್ಯಕ್ರಮದಲ್ಲಿ ಬೆಳಿಗ್ಗೆ ಜನಸ್ಪಂದನ ಸಭೆಯಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ಸ್ವೀಕರಿಸಲಾದ 25 ಅರ್ಜಿಗಳಲ್ಲಿ ನಿಂಗಮ್ಮ, ನೀಲಮ್ಮ, ಕಲ್ಲಿಂಗಮ್ಮ, ಪುಟ್ಟಮ್ಮ, ನಾಗಾನಾಯ್ಕ, ಮಲ್ಲಮ್ಮ, ವೆಂಕಟಮ್ಮ, ಮಾತೆಂಗಮ್ಮ ಸೇರಿದಂತೆ 9 ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿಯೇ ಮಂಜೂರಾತಿ ಪತ್ರ ವಿತರಿಸಲಾಯಿತು.

      ಮಾಯಕೊಂಡ ವಿಧಾನಸಭಾ ಕೇತ್ರದ ಶಾಸಕರಾದ ಪ್ರೊ.ಎನ್.ಲಿಂಗಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶೀಲಾ ಕೆ.ಆರ್, ಜಿ ಪಂ ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಜಿ ಪಂ ಸದಸ್ಯರಾದ ಗೀತಾ ಗಂಗಾನಾಯ್ಕ, ಕೆ.ಎಸ್.ಬಸವರಾಜು, ತಾ.ಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಉಪಾಧ್ಯಕ್ಷ ಹೆಚ್.ಆರ್.ಮರುಳಸಿದ್ದಪ್ಪ, ತಾ.ಪಂ ಸದಸ್ಯರಾದ ಕೆ.ಪಿ.ಚಂದ್ರಪ್ಪ, ರುದ್ರೇಶ್, ಮುರುಗೇಂದ್ರಪ್ಪ, ಎಪಿಎಂಸಿ ಸದಸ್ಯರಾದ ಎಸ್.ಕೆ.ಚಂದ್ರಶೇಖರ್, ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಸಾಕಮ್ಮ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮಾಂತರ ಸಿಪಿಐ, ಮತ್ತಿತರರು ಹಾಜರಿದ್ದರು. ತಹಶೀಲ್ದಾರ್ ಸಂತೋಷ್ ಕುಮಾರ್ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap