ದಾವಣಗೆರೆ
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅನಗತ್ಯವಾಗಿ ಸಮ್ಮಿಶ್ರ ಸರ್ಕಾರದ ಬಗ್ಗೆ ಇಲ್ಲ, ಸಲ್ಲದ ಆರೋಪ ಮಾಡುತ್ತಾ, ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದು, ಅದು ಎಂದಿಗೂ ಸಾಧ್ಯವಿಲ್ಲ ಎಂದು ತೋಟಗಾರಿಕೆ ಸಚಿವ ಮನಗೊಳಿ ಭವಿಷ್ಯ ನುಡಿದಿದ್ದಾರೆ.
ನಗರದ ತೋಟಗಾರಿಕಾ ಇಲಾಖೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರಿಗೆ ಮಾಡಲು ಬೇರೆನೂ ಕೆಲಸವಿಲ್ಲ. ಹಾಗಾಗಿ, ಸಮ್ಮಿಶ್ರ ಸರ್ಕಾರದ ವಿರುದ್ಧ ಇನ್ನೂ ಸರ್ಕಾಟ ಟೇಕಾಪ್ ಆಗಿಲ್ಲ, ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ, ಸರ್ಕಾರ ಅಲ್ಲಾಡುತ್ತಿದೆ, ಸರ್ಕಾರದ ಶಾಸಕರು ಹಾಗೂ ಸಚಿವರಲ್ಲೇ ಆಂತರಿಕ ಕಲಹವಿದೆ ಎಂಬುದಾಗಿ ಹೇಳುವ ಮೂಲಕ
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ. ಆದರೆ, ಅದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿರುವಷ್ಟು ಗುಂಪುಗಾರಿಕೆ, ಅಸಮಾಧಾನ ಎಲ್ಲೂ ಇಲ್ಲ. ಹಾಗಾಗಿ, ಬಿಜೆಪಿಯವರೇ ಯಡಿಯೂರಪ್ಪರನ್ನು ಸಿಎಂ ಆಗಲು ಒಪ್ಪುವುದಿಲ್ಲ ಎಂದ ಅವರು, ಸಮ್ಮಿಶ್ರ ಸರ್ಕಾರ 5 ವರ್ಷ ಯಶಸ್ವಿಯಾಗಿ ಅಧಿಕಾರ ಪೂರ್ಣಗೊಳಿಸಲಿದ್ದು, ಮುಂದಿನ ಅವಧಿಗೂ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಗಳಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಲ ಶಾಸಕರನ್ನು ಖರೀದಿಸಿ ಬಿಜೆಪಿಯವರು ಅಪರೇಷನ್ ಕಮಲ ಮಾಡಲು ಕೆಲವರಿಗೆ ಆಮೀಷ ತೋರಿಸುತ್ತಿದ್ದಾರೆ. ಆದರೆ, ನಮ್ಮ ಶಾಸಕರ್ಯಾರೂ ಆಮೀಷಕ್ಕೆ ಬಲಿಯಾಗುವುದಿಲ್ಲ. ಅಲ್ಲದೆ, ನಮಗೆ ಅಪರೇಷನ್‍ನ ಅಗತ್ಯವೂ ಇಲ್ಲ. ಆದ್ದರಿಂದ ಬಿಜೆಪಿಯವರನ್ನು ನಮ್ಮ ಪಕ್ಷಕ್ಕೆ ಸೆಳೆಯುವ ಪ್ರಶ್ನೆಯೇ ಇಲ್ಲ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಬಳಸಿರುವ ದಂಗೆ ಪದಕ್ಕೆ ಕೆಲವು ಕಡೆ ಕೆಲವು ಅರ್ಥಗಳಿವೆ. ದಂಗೆ ಎಂಬ ಪದಕ್ಕೆ ವಿಶೇಷ ಅರ್ಥ ಕೊಡುವುದು ಬೇಡ. ಅವರು ಜನರೆಲ್ಲ ದಂಗೆ ಹೇಳಿ ಎನ್ನುವ ದೃಷ್ಟಿಯಿಂದ ಹೇಳಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ದಂಗೆ ಎಂದರೆ, ಸಿರಿಯಸಾಗಿ ಚರ್ಚೆ ಮಾಡಿ ಎಂಬ ಅರ್ಥವಿದೆ. ಹೀಗೆ ಒಂದೊಂದು ಕಡೆಗಳಲ್ಲೂ ಒಂದೊಂದು ಅರ್ಥವಿದೆ. ಹೀಗಾಗಿ ದಂಗೆ ಎಂದರೆ, ಹೊಡೆದಾಟವಲ್ಲ. ಆದರೆ, ಜೆಪಿಯವರು ಅದನ್ನು ವಿನಾಕಾರಣ ರಂಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇಸ್ರೇಲ್‍ಗೆ ಹೋಗಿ ಅಲ್ಲಿ 8 ದಿನಗಳ ಕಾಲ ಇದ್ದು ಅಲ್ಲಿನ ಆಧುನಿಕ ಕೃಷಿಪದ್ಧತಿ ಕುರಿತು ಅಧ್ಯಯನ ಮಾಡಿ ಬಂದಿದ್ದೇನೆ. ಕಡಿಮೆ ಖರ್ಚು ಹೆಚ್ಚು ಅದಾಯ ರೀತಿ ರಾಜ್ಯದಲ್ಲೂ ಇಸ್ರೇಲ್ ಕೃಷಿ ಪದ್ಧತಿ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು. ತೋಟಗಾರಿಕೆ ಹನಿನೀರಾವರಿ, ಹಣ್ಣುಹಂಪಲು ಸಸಿಗಳ ವಿತರಣೆಗೆ ಹೆಚ್ಚಿನ ಕ್ರಮಕೈಗೊಳ್ಳಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ತೋಟಗಾರಿಕಾ ಅಧಿಕಾರಿ ಟಿ.ಆರ್. ವೇದಮೂರ್ತಿ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ