ದಾವಣಗೆರೆ:
ನಡುವಿನವರ ಕಾಟದಿಂದ ಪೌರಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ವಿಳಂಬವಾಗುತ್ತಿದೆ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಿಷಾಧ ವ್ಯಕ್ತಪಡಿಸಿದರು.
ನಗರದ ಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ಮಹಾನಗರ ಪಾಲಿಕೆಯಿಂದ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯು ಪೌರ ಕಾರ್ಮಿಕರಿಗೆ 50 ಕೋಟಿ ರೂ. ವೆಚ್ಚದಲ್ಲಿ ಜಿ+2 ಮನೆ ನಿರ್ಮಿಸಿಕೊಡುತ್ತಿದೆ. ಆದರೆ, ನಡುವಿನವರು ಕಾಟ ಕೊಡುವುದರಿಂದ ಮನೆ ಕಟ್ಟಿಕೊಡುವುದು ಸೇರಿದಂತೆ ನಿಮಗೆ ವಿವಿಧ ಸೌಲಭ್ಯ ಕಲ್ಪಿಸುವುದು ವಿಳಂಬವಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಎಲ್.ಎಂ.ಹನುಮಂತಪ್ಪನವರಿಗೆ ಸ್ಟ್ರೈಕ್ ಮಾಡಿಸುವುದೇ ಒಂದು ಕೆಲಸವಾಗಿದೆ. ಇವರು ಒಂದು ಸಲ ಬಂದು ನಿವೇಶನ ಕೇಳುವುದು, ಇನ್ನೊಂದು ಸಲ ಬಂದು ಮನೆ ಕಟ್ಟಿಸಿಕೊಡಿ ಎಂಬುದಾಗಿ ಅಡ್ಡಗಾಲು ಹಾಕುವುರಿಂದ ನಿಮಗೆ ಸೂರು ಕಲ್ಪಿಸುವುದು ವಿಳಂಬವಾಗಿದೆ. ಆದ್ದರಿಂದ ಎಲ್‍ಎಂಹೆಚ್ ಸ್ಟ್ರೈಕ್‍ಗೆ ಪೌರ ಕಾರ್ಮಿಕರು ಕಿವಿಗೊಡಬಾರದು. ಅಡ್ಡಗಾಲು ಹಾಕಿದಷ್ಟು ತೊಂದರೆಯೇ ಹೊರತು, ಅನುಕೂಲವಲ್ಲ. ಇದನ್ನು ಪೌರ ಕಾರ್ಮಿಕರ ಲೀಡರ್‍ಗಳು ಅರಿತುಕೊಳ್ಳಬೇಕೆಂದು ಸೂಚ್ಯವಾಗಿ ನುಡಿದರು.
ಮತ್ತಷ್ಟು ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡು, ಊರಿನ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪೌರ ಕಾರ್ಮಿಕರನ್ನು ಸರ್ಕಾರ ನೇಮಕ ಮಾಡುವ ವಿಶ್ವಾಸವಿದೆ ಎಂದರು.
ಇಲ್ಲಿ ನಡೆಯುತ್ತಿರುವುದು ಪೌರಕಾರ್ಮಿಕರ ದಿನಾಚರಣೆಯಂತೆ ಕಾಣುತ್ತಿಲ್ಲ. ಮದುವೆ ಸಂಭ್ರಮದಂತೆ ಭಾಸವಾಗುತ್ತಿದ್ದು, ನೀವೆಲ್ಲಾ ಮದುವೆಗೆ ಬಂದವರಂತೆ ಭಾಸವಾಗುತ್ತಿದ್ದೀರಿ. ಕಳೆದ 70 ವರ್ಷದ ಇತಿಹಾಸದಲ್ಲಿ ಹಿಂದೆ ಪೌರಕಾರ್ಮಿಕರ ಸ್ಥಿತಿ ಹೇಗಿತ್ತು. ಈಗ ಹೇಗಿದೆ ಎಂಬುದನ್ನು ಮೆಲಕು ಹಾಕಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಹಿಂದೆ ಪೌರ ಕಾರ್ಮಿಕರು ಕೈಯಲ್ಲಿ ಬರಲು ಹಿಡಿದುಕೊಂಡು ಕಸ ಒಡೆಯುತ್ತಿದ್ದಾಗ, ಯಾರಾದರು ಹಿರಿಯರು ಬಂದರೆ, ಅವರಿಗೆ ಕಾಣದಂತೆ ಎಲ್ಲೋ ಅವತಿಕೊಳ್ಳಬೇಕಿತ್ತು. ಆದರೆ, ನಂತರದ ದಿನಗಳಲ್ಲಿ ಪೌರ ಕಾರ್ಮಿಕರಲ್ಲಿದಿದ್ದರೆ, ಊರಿನ ಸ್ಥಿತಿ ಏನಾಗಬಹುದು ಎಂಬುದನ್ನು ಅರಿತ ಸರ್ಕಾರಗಳು, ಪೌರಕಾರ್ಮಿಕರನ್ನು ಮನುಷ್ಯರಂತೆ ಮಾಡಬೇಕೆಂಬ ಉದ್ದೇಶದಿಂದ ಹಿಂದೆ ಪಡೆಯುತ್ತಿದ್ದ ಅಲ್ಪ ವೇತನದಿಂದ ಇಂದು 16 ಸಾವಿರ ರೂ. ವರೆಗೆ ವೇತನ ಹೆಚ್ಚಿಸಿದೆ. ಹಿಂದೆ ಬರೀ ಗೈ ಮತ್ತು ಬರಿ ಗಾಲಿನಲ್ಲಿ ಕೆಲಸ ಮಾಡಬೇಕಿತ್ತು. ಆದರೆ, ಈಗ ಹ್ಯಾಂಡ್ ಗ್ಲೌಸ್, ಗಮ್ ಶೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ನೀವು ಇದರ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪಾಲಿಕೆಯ ಅಧಿಕಾರಿ ಮಹೇಂದ್ರಕುಮಾರ್, ಪೌರಕಾರ್ಮಿಕರಿಲ್ಲದೇ, ಊರು ಸ್ವಚ್ಛತೆಯಿಂದ ಇರಲು ಸಾಧ್ಯವಿಲ್ಲ ಎಂಬುದನ್ನು ಅರಿತ ಸರ್ಕಾರವು, ನಿಮ್ಮ ಬದುಕನ್ನು ಸಹ ಹಸನು ಮಾಡುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ, ಕಾಲ, ಕಾಲಕ್ಕೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿದೆ. ನಿಮಗೂ ಸ್ವಾವಲಂಬಿ ಬುದುಕು ಕಟ್ಟಿಕೊಡಬೇಕೆಂಬ ಉದ್ದೇಶದಿಂದ ಗೃಹ ಭಾಗ್ಯ, ಜೀವ ವಿಮೆ, ಆರೋಗ್ಯ ತಪಾಸಣೆ, ಲಸಿಕೆ ಹಾಕಿಸುವುದು, ಜಂತುಹುಳು ನಾಶಕ ಔಷಧ ವಿತರಿಸುವುದುರ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ, ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಖಾತೆಗೂ ನೇರವಾಗಿ ವೇತನ ಪಾವತಿಸುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಪೌರ ಕಾರ್ಮಿಕರುಗಳಾದ ನಾರಪ್ಪ, ಲಕ್ಷ್ಮಣ, ಶಿವಣ್ಣ, ನಾಗರಾಜ್, ಫಕೀರಪ್ಪ, ಲಕ್ಷ್ಮೀದೇವಿ, ಓಬವ್ವ, ಅಣಜಿ ಹನುಮಕ್ಕ, ನಿಂಗಪ್ಪ, ರತ್ನಮ್ಮ, ಕೃಷ್ಣಮೂರ್ತಿ, ತಿಪ್ಪಮ್ಮ ಅವರುಗಳಿಗೆ ಸನ್ಮಾನಿಸಲಾಯಿತು.
ಅಲ್ಲದೆ, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಪೌರ ಕಾರ್ಮಿಕರ ಮಕ್ಕಳುಗಳಾದ ಗೋಪಿ ಹೆಚ್ (ಎಂ.ಎ. ಅರ್ಥಶಾಸ್ತ್ರ ಪ್ರಥಮ ರ್ಯಾಂಕ್), ಶೃತಿ (ಎಂ.ಎ.ದ್ವಿತೀಯ ರ್ಯಾಂಕ್), ಸಂಪಿಗೆ.ಎ (ಎಂ.ಎ.ಸಮಾಜಶಾಸ್ತ್ರದಲ್ಲಿ ದ್ವಿತೀಯ ರ್ಯಾಂಕ್) ಮಹಾಂತೇಶ್ (ಬಿಇ ಸಿವಿಲ್) ಹಾಗೂ ಭಾರ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಕೃಷ್ಣ ಹಾಗೂ ಕರಾಟೆಯಲ್ಲಿ ವಿಜೇತನಾಗಿರುವ ಯಷಾಯ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಮೇಯರ್ ಶೋಭಾ ಪಲ್ಲಾಗಟ್ಟೆ ವಹಿಸಿದ್ದರು. ವೇದಿಕೆಯಲ್ಲಿ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಸದಸ್ಯರುಗಳಾದ ದಿನೇಶ್ ಕೆ. ಶೆಟ್ಟಿ, ಎಂ.ಹಾಲೇಶ್, ಹೆಚ್.ತಿಪ್ಪಣ್ಣ, ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ಎಂ.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಎನ್.ನೀಲಗಿರಿಯಪ್ಪ, ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ಡಿ.ಗೋಣೆಪ್ಪ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜ್, ಪಾಲಿಕೆ ಉಪ ಆಯುಕ್ತರುಗಳಾದ ರವೀಂದ್ರ ಮಲ್ಲಾಪುರ, ಸತೀಶ್, ಲೆಕ್ಕಾಧಿಕಾರಿ ಜಯರಾಂ, ಸಹಾಯಕ ಕಾರ್ಯಪಾಲಕ ಅಭಿಯಂತರ ಬೀರಾದರ್, ಕಂದಾಯಾಧಿಕಾರಿ ಚಂದ್ರಶೇಖರ್, ವೈದ್ಯಾಧಿಕಾರಿ ಚಂದ್ರಶೇಖರ್ ಸುಂಖದ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ